ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ಭಾರತದ ಕರೆನ್ಸಿ: 1 US ಡಾಲರ್​ಗೆ 92ರ ಸಮೀಪಕ್ಕೆ ಬಂದ ರೂಪಾಯಿ ಮೌಲ್ಯ! Rupee

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದ ಡಾಲರ್​ ಎದುರು ನಿರಂತರ ಕುಸಿತ ಕಾಣುತ್ತಿರುವ ಭಾರತದ ರೂಪಾಯಿ
  • ಇದೇ ಮೊದಲ ಬಾರಿಗೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ಭಾರತದ ಕರೆನ್ಸಿ
  • ಒಂದು ಅಮೆರಿಕ ಡಾಲರ್​ಗೆ ಭಾರತದ ರೂಪಾಯಿ ಮೌಲ್ಯ 92 ರೂಪಾಯಿ ಸಮೀಪ ಬಂದಿದೆ
ನವದೆಹಲಿ: ಅಮೆರಿಕದ ಡಾಲರ್​ ಎದುರು ನಿರಂತರ ಕುಸಿತ ಕಾಣುತ್ತಿರುವ ಭಾರತದ ರೂಪಾಯಿ ( Rupee ) ಮೌಲ್ಯ, ಇದೇ ಮೊದಲ ಬಾರಿಗೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಶುಕ್ರವಾರ ಷೇರು ಮಾರುಕಟ್ಟೆಯ ಅಂತಿಮ ವಹಿವಾಟಿನ ಸಮಯದಲ್ಲಿ ಒಂದು ಡಾಲರ್​ಗೆ ಭಾರತದ ರೂಪಾಯಿ ಮೌಲ್ಯ 92 ರೂಪಾಯಿ ಸಮೀಪ ಬಂದಿದೆ.
ಶುಕ್ರವಾರದ ವಹಿವಾಟಿನ ಸಂದರ್ಭದಲ್ಲಿ ಭಾರತದ ರೂಪಾಯಿ ಯುಎಸ್​ ಡಾಲರ್​ ಎದುರು 91.93ರಲ್ಲಿ ವಹಿವಾಟು ನಡೆಸಿದೆ. ಜಾಗತಿಕ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಗಳಿಂದ ತಮ್ಮ ಹೂಡಿಕೆ ಹಣವನ್ನು ಹಿಂತೆಗೆದುಕೊಂಡಿದ್ದರ ಪರಿಣಾಮ ರೂಪಾಯಿ ದುರ್ಬಲಗೊಂಡಿದೆ. ಅಲ್ಲದೆ, ಅಮೆರಿಕದ ವ್ಯಾಪಾರ ಸುಂಕದ ನೀತಿಗಳು (US Trade Tariffs) ಮತ್ತು ಗ್ರೀನ್‌ಲ್ಯಾಂಡ್ ವಿವಾದಕ್ಕೆ ಸಂಬಂಧಿಸಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಡಾಲರ್‌ನತ್ತ ಮುಖ ಮಾಡುತ್ತಿದ್ದಾರೆ. ಇದಿಷ್ಟೇ ಅಲ್ಲದೆ, ಆಮದುದಾರರಿಂದ ಡಾಲರ್‌ಗೆ ಹೆಚ್ಚಿನ ಬೇಡಿಕೆ ಇದೆ. ಇದು ಕೂಡ ರೂಪಾಯಿಯ ಮೌಲ್ಯ ಕುಸಿಯಲು ಕಾರಣವಾಗಿದೆ.
ಈ ವಾರದ ಆರಂಭದಲ್ಲೇ ರೂಪಾಯಿ ಮೌಲ್ಯವು ತನ್ನ ಹಿಂದಿನ ದಾಖಲೆಯ ಕನಿಷ್ಠ ಮಟ್ಟವಾದ 91.74 ಅನ್ನು ದಾಟಿದೆ.
ರೂಪಾಯಿ ಮೌಲ್ಯ ಕುಸಿಯುತ್ತಿರುವುದನ್ನು ಭಾರತೀಯ ರಿಸರ್ವ್​ ಬ್ಯಾಂಕ್​ ಸೂಕ್ಷ್ಮವಾಗಿ ಗಮನಿಸುತ್ತಿದೆ. ಒಂದು ವೇಳೆ ಪರಿಸ್ಥಿತಿ ತುಂಬಾ ಹದಗೆಟ್ಟರೆ, ಮಧ್ಯಪ್ರವೇಶಿಸಲು ಆರ್​ಬಿಐ ಸರ್ವ ಸನ್ನದ್ಧವಾಗಿದೆ. ತಕ್ಷಣಕ್ಕೆ ರೂಪಾಯಿ ಮೌಲ್ಯ ಹಿಂದಿನ ಸ್ಥಿತಿಗೆ ಬರುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಈ ದುರ್ಬಲ ಸ್ಥಿತಿ ಹೀಗೆ ಮುಂದುವರಿಯುತ್ತಾ? ಅಥವಾ ಮತ್ತೆ ಹಿಂದಿನ ಸ್ಥಿತಿಗೆ ಮರಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಹಲವಾರು ಅಂಶಗಳು ರೂಪಾಯಿಯನ್ನು ಈ ಹಂತಕ್ಕೆ ತಳ್ಳಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಭಾರತದಲ್ಲಿ ವಿದೇಶಿ ಬಂಡವಾಳ ಹರಿವು ತುಂಬಾ ದುರ್ಬಲವಾಗಿ ಉಳಿದಿವೆ. ಇದರ ನಡುವೆ ಅಮೆರಿಕ ಮತ್ತು ಭಾರತ ನಡುವಿನ ವ್ಯಾಪಾರ ಚರ್ಚೆಗಳ ಅನಿಶ್ಚಿತತೆ ಮುಂದುವರಿದಿರುವುದು ಕೂಡ ಪರಿಣಾಮ ಬೀರಿದೆ. ಇದಿಷ್ಟೇ ಅಲ್ಲದೆ, ಜಾಗತಿಕವಾಗಿ ಉಂಟಾಗಿರುವ ಅಪಾಯದ ವಾತಾವರಣ ಅಂದರೆ, ಯುದ್ಧದ ವಾತಾವರಣ ಡಾಲರ್ ಮೌಲ್ಯ ಹೆಚ್ಚಳಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ.

ಡಾಲರ್​ ಹೆಚ್ಚಳದಿಂದ ಪರಿಣಾಮವೇನು?

ಇನ್ನು ಭಾರತೀಯ ಕರೆನ್ಸಿ ದುರ್ಬಲವಾಗುತ್ತಿರುವುದು ಮನೆಗಳು ಮತ್ತು ವ್ಯವಹಾರಗಳ ಮೇಲೆ ತಕ್ಷಣದ ಪರಿಣಾಮಗಳನ್ನು ಬೀರುತ್ತದೆ. ಆಮದು ಬಿಲ್‌ಗಳು ಹೆಚ್ಚಾಗಲಿವೆ. ಅದರಲ್ಲೂ ವಿಶೇಷವಾಗಿ ಕಚ್ಚಾ ತೈಲ, ಎಲೆಕ್ಟ್ರಾನಿಕ್ಸ್ ಮತ್ತು ಕೈಗಾರಿಕಾ ಸರಕುಗಳ ಬೆಲೆ ಹೆಚ್ಚಾಗಲಿದೆ. ಇದಿಷ್ಟೇ ಅಲ್ಲದೆ, ವಿದೇಶದಲ್ಲಿ ಸಾಲ ಹೊಂದಿರುವ ಕಂಪನಿಗಳು ಮರುಪಾವತಿ ವೆಚ್ಚವನ್ನು ಹೆಚ್ಚಿಸಲಿವೆ. ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮತ್ತು ವಿದೇಶ ಪ್ರವಾಸಕ್ಕೆ ತೆರಳಿರುವ ಪ್ರಯಾಣಿಕರು ಕೂಡ ಇದರ ಪರಿಣಾಮವನ್ನು ತಕ್ಷಣವೇ ಅನುಭವಿಸುತ್ತಾರೆ. ಇದರ ನಡುವೆ ರಫ್ತುದಾರರು ಸ್ವಲ್ಪ ಮಟ್ಟದ ಪರಿಹಾರವನ್ನು ಪಡೆಯಬಹುದು ಆದರೆ, ಆರ್ಥಿಕತೆಯ ಮೇಲಿನ ಒಟ್ಟಾರೆ ಒತ್ತಡ ರೂಪಾಯಿ ಮೌಲ್ಯ ಕುಸಿತದಿಂದ ಹೆಚ್ಚಾಗುತ್ತದೆ.
ಇನ್ನು ವಿದೇಶಿ ಹರಿವು ಸ್ಥಿರವಾಗದ ಹೊರತು ಅಥವಾ ಜಾಗತಿಕ ಪರಿಸ್ಥಿತಿಗಳು ಸುಧಾರಿಸದ ಹೊರತು ಭಾರತೀಯ ಕರೆನ್ಸಿ ಮೌಲ್ಯ ಸುಧಾರಣೆ ಆಗುವುದಿಲ್ಲ. ಸದ್ಯದ ಮಟ್ಟಿಗೆ ರೂಪಾಯಿ ಅಸ್ಥಿರವಾಗೇ ಉಳಿಯುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net