120 ಮಿ.ಲೀ ಗಾಜಿನ ಲೋಟದಲ್ಲಿ 100 ಮಿ.ಲೀ. ಸಕ್ಕರೆ ಮಿಶ್ರಿತ ಹಾಲು, ಅದರ ಮೇಲೆ 20 ಮಿ.ಲೀ. ಬೇರೆಯಾಗಿ ಕಾಣುವ ಚಹಾ ಡಿಕಾಕ್ಷನ್. ಕೆ.ಟಿ. ಅಂದ್ರೆ ಕಲ್ಲಡ್ಕ ಟೀ ಎಂದು ಹೆಸರು ಪಡೆದಿರುವ ಈ ಚಹಾ ದೇಶದಲ್ಲೇ ಫೇಮಸ್. ಕಲ್ಲಡ್ಕ ಮಂಗಳೂರಿನಿಂದ 30 ಕಿ.ಮೀ. ದೂರದಲ್ಲಿದೆ. 1952ರಲ್ಲಿ ಸ್ಥಳೀಯರಾದ ಲಕ್ಷ್ಮೀನಾರಾಯಣ ಹೊಳ್ಳರು ಕಲ್ಲಡ್ಕದಲ್ಲಿ ‘ಲಕ್ಷ್ಮೀ ನಿವಾಸ’ ಹೋಟೆಲ್ ಆರಂಭಿಸಿ ಅಲ್ಲಿ ಈ ಬಗೆಯ ಚಹಾ ತಯಾರಿಸಲು ಆರಂಭಿಸಿದರು. ಚಹಾದ ರುಚಿ, ವಿಭಿನ್ನತೆಗೆ ಜನ ಮಾರು ಹೋಗಿ ಮುಂದಕ್ಕೆ ಕೆ.ಟಿ. ಅಂದರೆ ಕಲ್ಲಡ್ಕ ಟೀ ಎಂದೇ ಹೆಸರಾಯಿತು. ಅವರ ಮಗ ನರಸಿಂಹ ಹೊಳ್ಳ ಇದನ್ನೇ ಮುಂದುವರಿಸಿದರು. ಮುಂದಕ್ಕೆ ಅವರ ಕುಟುಂಬವೇ ಇದರಲ್ಲಿ ತೊಡಗಿಸಿಕೊಂಡಿತು. ಪ್ರಸ್ತುತ ನರಸಿಂಹ ಹೊಳ್ಳರ ಮಗ ಶಿವರಾಮ ಹೊಳ್ಳ ಮುಂದುವರಿಸುತ್ತಿದ್ದಾರೆ. ‘ಚಹಾ ತಯಾರಿಸಲು ಬಳಸುವ ಚಹಾ ಪುಡಿ, ಹಾಲು, ಸಕ್ಕರೆ ಎಲ್ಲದರಲ್ಲೂ ನಿರ್ದಿಷ್ಟ ಪ್ರಮಾಣ ಎಂಬುದಿದೆ. ಅದನ್ನು ಆರಂಭದಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಆದ್ದರಿಂದಲೇ ಅಂದಿನ ರುಚಿಯೇ ಇಂದಿಗೂ ಇದೆ, ಗ್ರಾಹಕರೂ ಮೆಚ್ಚಿಕೊಂಡಿದ್ದಾರೆ’ ಎನ್ನುತ್ತಾರೆ ಶಿವರಾಮ ಹೊಳ್ಳ. 69 ವರ್ಷಗಳ ಹಿಂದಿನ ಹೆಂಚಿನ ಮಾಡಿನ ಅದೇ ಹೋಟೆಲ್ ಇಂದಿಗೂ ಇದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜ್ಯದ ವಿವಿಧ ಮಂತ್ರಿಗಳು, ಸಂಸದರು, ಸಿನಿಮಾ ನಟ-ನಟಿಯರಾದ ಅಂಬರೀಶ್, ಜೂಹಿ ಚಾವ್ಲಾ ಸೇರಿ ಸಾಕಷ್ಟು ಮಂದಿ ಕೆ.ಟಿ.ಯ ರುಚಿ ಸವಿದಿದ್ದಾರೆ. ‘ರಿಮ್ಜಿಮ್ ಕಾಫಿ’ ಇಲ್ಲಿನ ಇನ್ನೊಂದು ಪ್ರಸಿದ್ಧ ಪೇಯ.