

ನವದೆಹಲಿ: ಭಾರತೀಯ ಷೇರುಪೇಟೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಮಿಡ್ ಕ್ಯಾಪ್ ನ ಟಾಪ್ 10 ಕಂಪನಿಗಳ ಪೈಕಿ ಆರು ಕಂಪನಿಗಳು 91,629 ಕೋಟಿ ರೂಪಾಯಿ ಮೌಲ್ಯ ವೃದ್ಧಿಸಿಕೊಂಡಿವೆ. ಐಸಿಐಸಿಐ ಬ್ಯಾಂಕ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಂಪನಿಗಳ ಷೇರು ಗರಿಷ್ಠ ಏರಿಕೆ ದಾಖಲಿಸಿವೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ ಕಳೆದ ವಾರ 929.83 ಅಂಶ (2.10%) ಏರಿಕೆ ದಾಖಲಿಸಿದೆ. ಲಾಭಾಂಶ ದಾಖಲಿಸಿಕೊಂಡ ಕಂಪನಿಗಳ ಷೇರಿನ ಪಟ್ಟಿಯಲ್ಲಿ ರಿಯಲನ್ಸ್ ಇಂಡಸ್ಟ್ರೀಸ್ (ಆರ್ಐಎಲ್), ಟಿಸಿಎಸ್, ಹಿಂದುಸ್ಥಾನ್ ಯೂನಿಲಿವರ್ ಲಿಮಿಟೆಡ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್ಟೆಲ್ ಷೇರುಗಳಿವೆ. ಇದೇ ವೇಳೆ ಎಚ್ಡಿಎಫ್ಸಿ ಬ್ಯಾಂಕ್, ಎಚ್ಡಿಎಫ್ಸಿ, ಕೊಟಾಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫೈನಾನ್ಸ್ ನಷ್ಟ ಅನುಭವಿಸಿವೆ.
ಲಾಭಾಂಶ ಗಿಟ್ಟಿಸಿಕೊಂಡ ಕಂಪನಿಗಳ ಪೈಕಿ ಗರಿಷ್ಠ ಲಾಭ ಪಡೆದ ಐಸಿಐಸಿಐ ಬ್ಯಾಂಕಿನ ಬಂಡವಾಳ 20,272.71 ಕೋಟಿ ರೂಪಾಯಿ ಹೆಚ್ಚಾಗಿದ್ದು, ಒಟ್ಟು ಕಂಪನಿ ಮೌಲ್ಯ 3,46,497.75 ಕೋಟಿ ರೂಪಾಯಿ ಆಗಿದೆ. ಟಿಸಿಎಸ್ ಮಿಡ್ ಕ್ಯಾಪ್ 17,579,92 ಕೋಟಿ ರೂಪಾಯಿ ಹೆಚ್ಚಾಗಿದ್ದು ಒಟ್ಟು ಮೌಲ್ಯ 10,22,900.07 ಕೋಟಿ ರೂಪಾಯಿ ಆಗಿದೆ. ಇದರ ಬೆನ್ನಿಗೆ ಭಾರ್ತಿ ಏರ್ಟೆಲ್ ಮೌಲ್ಯ 16,694.01 ಕೋಟಿ ರೂಪಾಯಿ ಏರಿಕೆ ಆಗಿದ್ದು 2,69,449.98 ಕೋಟಿ ರೂಪಾಯಿ ತಲುಪಿದೆ. ಇದೇ ವೇಳೆ ಆರ್ಐಎಲ್ ಮೌಲ್ಯ 10,586.86 ಕೋಟಿ ಹೆಚ್ಚಾಗಿ 12,34,003.83 ಕೋಟಿ ರೂಪಾಯಿ ಆಗಿದೆ. (ಏಜೆನ್ಸೀಸ್)