ಶ್ರೇಯಸ್, ಶ್ರೀನಿಧಿ ಪುನರಾರಂಭಕ್ಕೆ ಸಜ್ಜು

14DND1
Published on

ದಾಂಡೇಲಿ: ದಾಂಡೇಲಿಯ ಶ್ರೇಯಸ್ ಮತ್ತು ಶ್ರೀನಿಧಿ ಕಾಗದ ಕಾರ್ಖಾನೆಗಳ ಪುನರಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಾರ್ಖಾನೆಯ ನೂತನ ಮಾಲೀಕ ತಿಮ್ಮಣ್ಣ ಶಂಕರಪ್ಪ ಸೊರಗಾಂವಿ ಹೇಳಿದರು.

ಕೆರವಾಡ ಗ್ರಾಮದ ಶ್ರೇಯಸ್ ಮತ್ತು ಶ್ರೀನಿಧಿ ಕಾರ್ಖಾನೆ ಆವರಣದ ಹನುಮಾನ ಮಂದಿರ ಹಾಗೂ ಮಹಾದ್ವಾರಕ್ಕೆ ಸೋಮವಾರ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಕಾರ್ಖಾನೆಯಿಂದ ಲಾಭ ಗಳಿಸುವ ಉದ್ದೇಶಕ್ಕಿಂತ ಕಾರ್ಖಾನೆಯು ಕಳೆದ ಒಂದು ವರ್ಷದಿಂದ ಬಂದ್ ಆಗಿರುವ ಹಿನ್ನೆಲೆಯಲ್ಲಿ ನೌಕರರ ಕಷ್ಟ, ನೋವುಗಳನ್ನು ಪರಿಗಣಿಸಿ ಕಾರ್ಖಾನೆಯನ್ನು ನಮ್ಮ ಇನ್ನೊಬ್ಬ ಪಾಲುದಾರರಾದ ಚಿಕ್ಕಯ್ಯ ಮಠಪತಿ ಅವರ ಸಹಯೋಗದೊಂದಿಗೆ ಮುನ್ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಡಿ. 15ರಿಂದ ಕಾರ್ಖಾನೆಯ ಸಿಬ್ಬಂದಿ, ಕಾಯಂ ಕಾರ್ವಿುಕರು ಕರ್ತವ್ಯಕ್ಕೆ ಹಾಜರಾಗಲು ತಿಳಿಸಲಾಗಿದೆ. ಮೊದಲು ನಿರ್ವಹಣೆ ಕಾರ್ಯ ಆರಂಭಿಸಲಾಗುವುದು ಮತ್ತು ಕಾರ್ವಿುಕರ ಜ್ವಲಂತ ಸಮಸ್ಯೆಗಳನ್ನು 3- 4 ತಿಂಗಳಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸೊರಗಾಂವಿ ತಿಳಿಸಿದರು. ಕಾರ್ಖಾನೆಯ ಹಳೆಯ ಡಿ.ಜಿ.ಎಂ ನೌಕರ ಎಸ್.ಐ. ಬೊರ್ಜಸ್ ಮಾತನಾಡಿ, ಕಾರ್ಖಾನೆ ಯಶಸ್ವಿಯಾಗಿ ಮುನ್ನಡೆಯಲು ಕಾರ್ವಿುಕರ ಸಹಕಾರ ಅಗತ್ಯವಾಗಿ ಬೇಕು ಎಂದರು. ಕಾರ್ಖಾನೆಯ ಸಂಚಾಲಕ ಫಿರೋಜ್ ಬಾಲೆಖಾನ, ನಿವೃತ್ತ ಜನರಲ್ ಮ್ಯಾನೇಜರ್ ಆನಂದ ಗರಗ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net