

ಮುಂಬೈ: ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಹಲವು ದಿನಗಳಿಂದ ಇಳಿಮುಖ ಕಂಡಿದ್ದ ಭಾರತದ ಷೇರು ಮಾರುಕಟ್ಟೆ ಮಂಗಳವಾರ ಭಾರಿ ಚೇತರಿಕೆ ಕಂಡಿದೆ. ಒಂದೇ ದಿನ ಹೂಡಿಕೆದಾರರು 8 ಲಕ್ಷ ಕೋಟಿ ರೂಪಾಯಿ ಗಳಿಕೆ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಲ್ಲೇ ಆದ ದೊಡ್ಡ ಗಳಿಕೆಯಾಗಿದೆ. ಒಂದು ದಶಕದ ಅವಧಿಯಲ್ಲಿ ಶೇಕಡಾವಾರು ಗಳಿಕೆಯಲ್ಲಿ ಇದು ಅತ್ಯಂತ ದೊಡ್ಡ ಚೇತರಿಕೆಯಾಗಿದೆ. ಔಷಧ ಕ್ಷೇತ್ರದಲ್ಲಿನ ವಿದ್ಯಮಾನವೇ ಈ ಭಾರಿ ಚೇತರಿಕೆಗೆ ಕಾರಣವಾಗಿದೆ.
24 ಸಕ್ರಿಯ ಫಾರ್ವಸ್ಯುಟಿಕಲ್ ಇನ್ಗ್ರೇಡಿಯಂಟ್ಗಳ (ಎಪಿಐ) ರಫ್ತಿನ ಮೇಲಿನ ನಿಷೇಧ ತೆರವು ಮಾಡಲು ಕೇಂದ್ರ ಸರ್ಕಾರ ಸೋಮವಾರ ನಿರ್ಧರಿಸಿತ್ತು. ಅಮೆರಿಕ ಮತ್ತು ಯುರೋಪ್ನಲ್ಲಿ ಕರೊನಾ ವೈರಸ್ ವ್ಯಾಪಿಸುವ ಪ್ರಮಾಣ ತಗ್ಗಿರುವುದು ಕೂಡ ಷೇರು ಮಾರುಕಟ್ಟೆಯ ಲವಲವಿಕೆಗೆ ಕಾರಣವಾಗಿದೆ. ಮಂಗಳವಾರ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕೂಡ ಸುಧಾರಿಸಿದೆ. ರೂಪಾಯಿ ಮೌಲ್ಯ 75.64 ಆಗಿತ್ತು. ಸೆನ್ಸೆಕ್ಸ್ ಮಂಗಳವಾರ 2,476 ಅಂಕ ಸುಧಾರಿಸಿ ಅತ್ಯಂತ ಮಹತ್ವದ 30 ಸಾವಿರ ಅಂಕಗಳ ಮಟ್ಟ ದಾಟಿತು. ಒಂದು ಹಂತದಲ್ಲಿ 2,567 ಪಾಯಿಂಟ್ ಏರಿಕೆ ಕಂಡ ಸೆನ್ಸೆಕ್ಸ್, ದಿನದ ಅಂತ್ಯಕ್ಕೆ 2,476.26 ಅಂಕ, ಅಂದರೆ 8.97% ಏರಿಕೆಯೊಂದಿಗೆ 30,067.21 ಅಂಕದಲ್ಲಿ ವಹಿವಾಟು ಮುಗಿಸಿತು. 2009ರ ಮೇ ನಂತರದ ಅತ್ಯಂತ ಹೆಚ್ಚಿನ ಏರಿಕೆ ಇದಾಗಿತ್ತು.
ಕರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆಯೆಂಬ ವರದಿಗಳ ನಡುವೆ ಬೆಳಗ್ಗೆ ಉತ್ತಮ ರೀತಿಯಲ್ಲಿ ಆರಂಭವಾದ ವ್ಯವಹಾರ, ಮಧ್ಯಾಹ್ನದ ಅವಧಿಯಲ್ಲಿ ಮತ್ತಷ್ಟು ಚಿಗುರಿತು. ಕೊವಿಡ್-19ನಿಂದಾದ ಆರ್ಥಿಕ ದುಷ್ಪರಿಣಾಮ ಎದುರಿಸಲು ವಿತ್ತ ಸಚಿವಾಲಯ ಎರಡನೇ ಪರಿಹಾರ ಪ್ಯಾಕೇಜ್ ರೂಪಿಸುತ್ತಿದೆಯೆಂಬ ವರದಿಯೇ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರೂಪಾಯಿ ಚೇತರಿಕೆ
ಷೇರು ಮಾರುಕಟ್ಟೆಯಲ್ಲಿನ ಚೇತರಿಕೆ ಹಿನ್ನೆಲೆಯಲ್ಲಿ ಮಂಗಳವಾರ ಡಾಲರ್ ಎದುರು ರೂಪಾಯಿ 49 ಪೈಸೆ ಸುಧಾರಿಸಿ ವಿನಿಮಯ ಮೌಲ್ಯ 75.64 ಆಗಿತ್ತು. ಮಂಗಳವಾರ ಕಚ್ಚಾ ತೈಲ ಬೆಲೆ ಶೇಕಡಾ 1.66 ಏರಿಕೆಯಾಗಿ ಬ್ಯಾರಲ್ ಒಂದರ ಬೆಲೆ 2,082 ರೂಪಾಯಿ ಆಗಿತ್ತು.