800 ಅಂಶ ಪುಟಿಯಿತು ಸೆನ್ಸೆಕ್ಸ್​, ನಿಫ್ಟಿ 8,400ರ ಆಸುಪಾಸಿನಲ್ಲಿ...

Bombay Stock Exchange 29 NOV 19
Published on

ಮುಂಬೈ: ಕರೊನಾ ಸಂಕಷ್ಟದಿಂದಾಗಿ ನಷ್ಟದ ಹಾದಿಯಲ್ಲೇ ಸಾಗುತ್ತಿರುವ ಜಾಗತಿಕ ಷೇರುಪೇಟೆ ಏಳುಬೀಳುಗಳನ್ನು ದಾಖಲಿಸುತ್ತ ಸಾಗಿದೆ. ಮಂಗಳವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 800 ಅಂಶ ಏರಿಕೆ ತೋರಿಸಿದರೆ, ನಿಫ್ಟಿ 8,400ರ ಆಸುಪಾಸಿನಲ್ಲಿ ವಹಿವಾಟು ಮುಂದುವರಿಸಿದೆ. ಸೆನ್ಸೆಕ್ಟ್ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್​, ಎಚ್​ಡಿಎಫ್​ಸಿ, ಇನ್​ಫೋಸಿಸ್​ ಕಂಪನಿಯ ಷೇರುಗಳು ತೋರಿದ ಚೇತರಿಕೆ ಪರಿಣಾಮ ಬಿಎಸ್​ಇಯಲ್ಲಾಗಿದ್ದು, ಏರಿಕೆಗೆ ಕಾರಣವಾಗಿದೆ.

ಮೂವತ್ತು ಷೇರುಗಳ ಸೆನ್ಸೆಕ್ಸ್​ ಇಂಟ್ರಾ ಟ್ರೇಡಿಂಗ್​ನಲ್ಲಿ 29,316.80 ಅಂಶ ಗರಿಷ್ಠಕ್ಕೆ ಏರಿ, ಬಳಿಕ 505.20 ಅಂಶ ಏರಿಕೆಯೊಂದಿಗೆ 28, 945.52ರಲ್ಲೂ, ನಿಫ್ಟಿ 199.85 ಅಂಶ ಏರಿ 8,480.95 ಅಂಶದಲ್ಲಿ ವಹಿವಾಟು ಮುಂದುವರಿಸಿವೆ. ಟಾಟಾ ಸ್ಟೀಲ್​, ಎಚ್​ಡಿಎಫ್​ಸಿ, ಏಕ್ಸಿಸ್​ ಬ್ಯಾಂಕ್, ಎಂಆ್ಯಂಡ್ ಎಂ, ರಿಲಯನ್ಸ್ ಇಂಡಸ್ಟ್ರೀಸ್​, ಒಎನ್​ಜಿಸಿ, ಐಟಿಸಿ, ಎಚ್​ಸಿಎಲ್​ ಟೆಕ್​, ಟೈಟಾನ್ ಕಂಪನಿಯ ಷೇರುಗಳು ಶೇಕಡ 3ರಷ್ಟು ಏರಿಕೆ ದಾಖಲಿಸಿವೆ. ಇನ್ನೊಂದೆಡೆ, ಇಂಡಸ್​ಇಂಡ್​ ಬ್ಯಾಂಕ್​ ಷೇರುಗಳು ಶೇಕಡ 15 ಕುಸಿದರೆ, ಬಜಾಜ್ ಫೈನಾನ್ಸ್​, ಬಜಾಜ್ ಆಟೋ, ಮಾರುತಿ ಕಂಪನಿ ಷೇರುಗಳು ನಷ್ಟ ಅನುಭವಿಸಿವೆ.

ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ 1,357.27 ಅಂಶ ಅಥವಾ ಶೇಕಡ 4.61 ಇಳಿಕೆ ತೋರಿ 28,440.32ರಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇನ್ನು ನಿಫ್ಟಿ 379.15 ಅಂಶ ಅಥವಾ ಶೇಕಡ 4.38 ಇಳಿದು 8,281.10 ಯಲ್ಲಿ ವಹಿವಾಟು ಮುಗಿಸಿತ್ತು. ತಾತ್ಕಾಲಿಕ ಡೇಟಾ ಪ್ರಕಾರ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕ್ಯಾಪಿಟಲ್ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿ ಮಾರ್ಪಟ್ಟಿದ್ದು, ಸೋಮವಾರ 4,363.61 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net