ಮೂರು ದಿನದ ವಹಿವಾಟಿನಲ್ಲಿ ಚೇತರಿಕೆ ತೋರಿದ ಷೇರು ಸೂಚ್ಯಂಕಗಳು- ಸೆನ್ಸೆಕ್ಸ್​ 353 ಅಂಶ ಏರಿಕೆ, ನಿಫ್ಟಿ ಮತ್ತೆ 12,000ದ ಮಟ್ಟಕ್ಕೆ

Stock Market
Published on

ಮುಂಬೈ: ಭಾರತೀಯ ಷೇರುಪೇಟೆ ಕಳೆದ ಮೂರು ದಿನಗಳ ಅವಧಿಯಲ್ಲಿ ಚೇತರಿಕೆ ತೋರಿದ್ದು, ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಬುಧವಾರವೂ ಏರಿಕೆಯ ಹಾದಿಯಲ್ಲಿ ಸಾಗಿ 353 ಅಂಶ ಏರಿಕೆ ದಾಖಲಿಸಿದೆ. ಇದೇ ವೇಳೆ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ನಿಫ್ಟಿ ಮತ್ತೆ 12,000ದ ಮಟ್ಟ ತಲುಪಿದೆ.

ಜನವರಿ ತಿಂಗಳಲ್ಲಿ ಭಾರತದ ಸೇವಾ ಕ್ಷೇತ್ರದ ಚಟುವಟಿಕೆ ಏಳು ವರ್ಷದ ಗರಿಷ್ಠ ಮಟ್ಟ ತಲುಪಿದ ದಾಖಲೆ ಬರೆದಿದೆ ಎಂಬ ವರದಿ ಮಾರುಕಟ್ಟೆಯ ಸೆಂಟಿಮೆಂಟನ್ನು ಜಾಗೃತಗೊಳಿಸಿದೆ. ಇದರ ಪರಿಣಾಮ, ಬಿಎಸ್​ಇ ಸೆನ್ಸೆಕ್ಸ್​ 353.28 ಅಂಶ (0.87%) ಏರಿಕೆ ದಾಖಲಿಸಿ 41,142.66 ರಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಗರಿಷ್ಠ 41,154.66 ಅಂಶ ತಲುಪಿತ್ತು. ಇದೇ ವೇಳೆ, ಎನ್​ಎಸ್​ಇ ಸೂಚ್ಯಂಕ ನಿಫ್ಟಿ 109.50 ಅಂಶ (0.91%) ಏರಿಕೆಯೊಂದಿಗೆ 12,089.15 ಅಂಶದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಟಾಟಾ ಸ್ಟೀಲ್​ ಷೇರುಗಳು ಶೇಕಡ 5.14 ಏರಿಕೆ ದಾಖಲಿಸಿದರೆ, ಭಾರ್ತಿ ಏರ್​ಟೆಲ್​, ಎಚ್​ಡಿಎಫ್​ಸಿ, ಟಿಸಿಎಸ್​, ಎಲ್​ಆ್ಯಂಡ್​ಟಿ, ಎಸ್​ಬಿಐ, ರಿಲಯನ್ಸ್​ ಇಂಡಸ್ಟ್ರೀಸ್ ಷೇರುಗಳು ಲಾಭ ದಾಖಲಿಸಿವೆ. ಇನ್ನೊಂದೆಡೆ, ಹೀರೋ ಮೋಟೋಕಾರ್ಪ್​ ಷೇರುಗಳು ಗರಿಷ್ಠ ಶೇಕಡ 3.83ನಷ್ಟ ಅನುಭವಿಸಿದರೆ, ಪವರ್​ಗ್ರಿಡ್​, ಮಾರುತಿ, ಏಷ್ಯನ್ ಪೇಂಟ್ಸ್​, ನೆಸ್ಟ್ಲೆ ಇಂಡಿಯಾ ಷೇರುಗಳು ಕೂಡ ನಷ್ಟ ದಾಖಲಿಸಿವೆ.

ಕರೆನ್ಸಿ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯ ಇಂಟ್ರಾ ಡೇ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು 2ಪೈಸೆ ಏರಿಕೆಯಾಗಿದ್ದು, 71.23ರ ದರದಲ್ಲಿ ವಹಿವಾಟು ನಡೆದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net