ದೇಶೀಯ ಷೇರು ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ನಷ್ಟ; ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ನಿಫ್ಟಿ ಕುಸಿತ

Bambay Exchange 9 March 20
Published on

ದೇಶೀಯ ಷೇರು ಮಾರುಕಟ್ಟೆಯಲ್ಲಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ತೀವ್ರ ನಷ್ಟವುಂಟಾಗಿದೆ. ಕೊರೊನಾ ವೈರಸ್​ ಆತಂಕ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇಂದು ಮಾನದಂಡ (ಬೆಂಚ್​ಮಾರ್ಕ್​) ಸೂಚ್ಯಂಕಗಳು ಸರಿಸುಮಾರು ಶೇ.3ರಷ್ಟು ಕುಸಿದಿದ್ದೇ ಈ ನಷ್ಟಕ್ಕೆ ಕಾರಣ.

ವಹಿವಾಟು ಶುರುವಾದ ಕೆಲವೇ ನಿಮಿಷಗಳಲ್ಲಿ ಎಸ್​ ಆ್ಯಂಡ್ ಪಿ ಸೆನ್ಸೆಕ್ಸ್​ ಸೂಚ್ಯಂಕವು 1,176.49 ಅಂಶಗಳಷ್ಟು ಕುಸಿದು, 36,400.13ಕ್ಕೆ ತಲುಪಿತು.

ಹಾಗೇ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್​ಎಸ್​ಇ)ದ ಸೂಚ್ಯಂಕ ನಿಫ್ಟಿಯೂ ಸಹ ಇದ್ದಕ್ಕಿದ್ದಂತೆ ಕುಸಿದು 10,655.19 ಅಂಶಕ್ಕೆ ತಲುಪಿದೆ.ಇದು ಕಳೆದ ಮುಕ್ತಾಯದ ವಹಿವಾಟಿನ ನಿಫ್ಟಿ ಸೂಚ್ಯಂಕಕ್ಕಿಂತ 334.35 ಅಂಶ ಕಡಿಮೆ.

ಇಂದು ಬೆಳಗ್ಗೆ 9.21ರ ವಹಿವಾಟಿನಲ್ಲಿ ಸೆನ್ಸೆಕ್ಸ್​ 1,139.71 ಅಂಶ ಕುಸಿದು ( ಶೇ,3.3) 36,436.91ಕ್ಕೆ ಹಾಗೂ ನಿಫ್ಟಿ 325.85 ಪಾಯಿಂಟ್‌ಗಳಷ್ಟು ಕಡಿಮೆಯಾಗಿ ( ಶೇ.2.97) 10,663.60 ಕ್ಕೆ ತಲುಪಿದೆ.

ಸದ್ಯ ಯೆಸ್ ಬ್ಯಾಂಕ್​ ಬಿಕ್ಕಟ್ಟು ಕೂಡ ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ. ಈ ಬ್ಯಾಂಕ್​ನ ಷೇರುಗಳು ಶೇ.23ರಷ್ಟು ತ್ವರಿತ ಏರಿಕೆ ಕಂಡಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net