

ಮುಂಬೈ: ಕರೊನಾ ಕರಿಛಾಯೆ ಷೇರುಪೇಟೆ ಮೇಲೆ ಹಿಡಿತ ಬಿಗಿಗೊಳಿಸಿದ್ದು, ಗುರುವಾರ ಆರಂಭಿಕ ವಹಿವಾಟಿನಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್(ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ 1,800ಕ್ಕೂ ಹೆಚ್ಚು ಅಂಶ ಕುಸಿತ ಕಂಡಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್(ಎನ್ಎಸ್ಇ) ಸೂಚ್ಯಂಕ ನಿಫ್ಟಿ 8,000 ಅಂಶಕ್ಕಿಂತಲೂ ಕೆಳಕ್ಕೆ ಕುಸಿದು ಹೂಡಿಕೆದಾರರಲ್ಲಿ ಕಳವಳ ಮೂಡಿಸಿದೆ.
ಬೆಳಗ್ಗೆ 9.24ರ ಹೊತ್ತಿಗೆ ಸೆನ್ಸೆಕ್ಸ್ 1,991.01 ಅಂಶ ಕುಸಿತ ಕಂಡು 26,878.50ಯಲ್ಲೂ, ನಿಫ್ಟಿ 557.40 ಅಂಶ ಕುಸಿತ ಕಂಡು 7,911.40ಯಲ್ಲೂ ವಹಿವಾಟು ಆರಂಭಿಸಿದ್ದವು. ಸೆನ್ಸೆಕ್ಸ್ ಬುಧವಾರ ಸಂಜೆ 28,869.51ರಲ್ಲಿ ವಹಿವಾಟು ಮುಗಿಸಿತ್ತು. ಗುರುವಾರ ಬೆಳಗ್ಗೆ 27,773.36ರಲ್ಲಿ ವಹಿವಾಟು ಶುರುಮಾಡಿತ್ತು. ನಿಫ್ಟಿ ನಿನ್ನೆ ಮುಕ್ತಾಯಗೊಂಡ ಅಂಶಕ್ಕಿಂತಲೂ ಶೇಕಡ 6.58 ಕುಸಿತವನ್ನು ಗುರುವಾರ ಬೆಳಗ್ಗೆ ದಾಖಲಿಸಿದೆ.
ಇದರೊಂದಿಗೆ ಮೂರವರ್ಷಗಳ ಕನಿಷ್ಠಮಟ್ಟಕ್ಕೆ ಜಾರಿವೆ ಸೆನ್ಸೆಕ್ಸ್ ಮತ್ತು ನಿಫ್ಟಿ. ಗುರುವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ಹೂಡಿಕೆದಾರರು ಕಳೆದುಕೊಂಡ ಹಣದ ಮೌಲ್ಯ ಬರೋಬ್ಬರಿ 7.14 ಲಕ್ಷ ಕೋಟಿ ರೂಪಾಯಿ. (ಏಜೆನ್ಸೀಸ್)