

ಮುಂಬೈ: ಕೊರೊನಾ ವೈರಸ್ ಸೋಂಕಿನ ಪರಿಣಾಮ ಆರ್ಥಿಕತೆ ಮೇಲೆ ಆಗುತ್ತಿರುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಅದು ಕಳವಳದ ರೂಪದಲ್ಲಿ ವ್ಯಕ್ತವಾಗಿದ್ದು, ಹೂಡಿಕೆ ಹಿಂಪಡೆತ ಜೋರಾದ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಮತ್ತೆ ಕರಡಿ ಕುಣಿತ ಜೋರಾಗಿ ಬ್ಲಡ್ಬಾತ್ ಕಂಡುಬಂದಿದೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್(ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ವಹಿವಾಟು ಆರಂಭವಾಗುತ್ತಿದ್ದಂತೆ ಒಂದೇ ಸಲ 1,400ಕ್ಕೂ ಹೆಚ್ಚು ಕುಸಿತ ಕಂಡರೆ, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್(ನಿಫ್ಟಿ) 300ಕ್ಕೂ ಹೆಚ್ಚು ಅಂಶ ಕುಸಿದಿದೆ.
ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1, 459.52 ಅಂಶ ಇಳಿದಿತ್ತು, ತರುವಾಯ 1052.33 ಅಂಶ ಇಳಿದು 37,418.28ರಲ್ಲೂ ನಿಫ್ಟಿ 318.30 ಅಂಶ ಕುಸಿದು 10,950.70ಯಲ್ಲೂ ವಹಿವಾಟು ಮುಂದುವರಿಸಿದೆ. ಈ ಹಿಂದಿನ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 61.13 ಅಂಶ ಏರಿ 38,470.61ರಲ್ಲಿ ವಹಿವಾಟು ಮುಗಿಸಿತ್ತು. ಇದೇ ರೀತಿ ನಿಫ್ಟಿ 18 ಅಂಶ ಏರಿ 11,269ರಲ್ಲಿ ವಹಿವಾಟು ಕೊನೆಗೊಳಿಸಿತ್ತು.
ಸೆನ್ಸೆಕ್ಸ್ ಪಟ್ಟಿಯಲ್ಲಿ ಎಸ್ಬಿಐ ಷೇರುಗಳು ಶೇಕಡ 6 ಕುಸಿದರೆ, ಉಳಿದ ಕಂಪನಿಗಳಾದ ಇಂಡಸ್ಇಂಡ್ ಬ್ಯಾಂಕ್, ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್, ಏಕ್ಸಿಸ್ ಬ್ಯಾಂಕ್, ಅಲ್ಟ್ರಾ ಟೆಕ್ ಸಿಮೆಂಟ್ಗಳು ಕೂಡ ನಷ್ಟದಲ್ಲಿ ಸಾಗಿವೆ. ಶಾಂಘೈ, ಹಾಂಕಾಂಗ್, ಸಿಯೋಲ್, ಟೋಕಿಯೋ ಪೇಟೆಗಳಲ್ಲೂ ಶೇಕಡ 3ರ ಕುಸಿತ ದಾಖಲಾಗಿದೆ.
ಷೇರುಪೇಟೆಯಲ್ಲಿ ಲಭ್ಯ ತಾತ್ಕಾಲಿಕ ಮಾಹಿತಿ ಪ್ರಕಾರ, ಗುರುವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2,476.75 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇದೇ ರೀತಿ ದೇಶಿ ಸಾಂಸ್ಥಿಕ ಹೂಡಿಕೆದಾರರು 2,510.89 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಇದೇ ವೇಳೆ, ಯಸ್ ಬ್ಯಾಂಕ್ ಸ್ಥಿತಿ ಸಂಕಷ್ಟಕ್ಕೆ ತಲುಪಿದ ಕಾರಣ, ಈ ಬ್ಯಾಂಕಿನ ಗ್ರಾಹಕರು ಹಣ ನಗದೀಕರಿಸುವುದಕ್ಕೆ 50,000 ರೂಪಾಯಿಗಳ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೇರಿದೆ. ಪರಿಣಾಮ, ಯೆಸ್ ಬ್ಯಾಂಕ್ ಷೇರುಗಳು ಶೇಕಡ 25 ಕುಸಿದವು. (ಏಜೆನ್ಸೀಸ್)