ಆರ್​ಬಿಐ ವಿತ್ತೀಯ ನೀತಿ ಪ್ರಕಟಿಸಿದ ಬೆನ್ನಲ್ಲೇ 163 ಅಂಶ ಏರಿಕೆಯೊಂದಿಗೆ ದಿನದ ವಹಿವಾಟು ಮುಗಿಸಿದ ಸೆನ್ಸೆಕ್ಸ್​

Stock exchange mumbai 21 JAN 20
Published on

ಮುಂಬೈ: ಸತತ ನಾಲ್ಕನೇ ದಿನವೂ ಏರಿಕೆಯನ್ನು ಮುಂದುವರಿಸಿದ ಬಾರತೀಯ ಷೇರುಪೇಟೆ ಸೂಚ್ಯಂಕಗಳು, ದಿನದ ವಹಿವಾಟನ್ನು ಕೂಡ ಏರಿಕೆಯೊಂದಿಗೇ ಮುಗಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್​ (ಆರ್​ಬಿಐ) ಗುರುವಾರ ವಿತ್ತೀಯ ನೀತಿ ಪ್ರಕಟಿಸಿದ್ದು, ಇದು ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ದಿನದ ವಹಿವಾಟಿನ ಅಂತ್ಯಕ್ಕೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ 163 ಅಂಶ ಏರಿಕೆಯೊಂಧಿಗೆ ವಹಿವಾಟು ಮುಗಿಸಿದೆ.

2019-20ನೇ ಸಾಲಿನ ಆರನೇ ದ್ವೈಮಾಸಿಕ ವಿತ್ತೀಯ ನೀತಿ ಪರಾಮರ್ಶೆಯಲ್ಲಿ ಆರ್​ಬಿಐ, ಜಿಡಿಪಿ ಬೆಳವಣಿಗೆ ದರವನ್ನು ಈ ಹಣಕಾಸು ವರ್ಷಕ್ಕೆ ಶೇಕಡ 5 ಎಂಬುದನ್ನು ಹಾಗೆಯೇ ಉಳಿಸಕೊಂಡಿದೆ. ಮುಂದಿನ ವರ್ಷಕ್ಕೆ ಶೇಕಡ 6 ಎಂದು ನಿಗದಿಪಡಿಸಿದೆ. ಈ ಬೆಳವಣಿಗೆ ಕಾರಣ, ಷೇರುಪೇಟೆ ಏರಿಕೆ ಮುಂದುವರಿಸಿದ್ದು, ಸೆನ್ಸೆಕ್ಸ್​ ದಿನದ ವಹಿವಾಟಿನ ಅಂತ್ಯಕ್ಕೆ 163.37 ಅಂಶ (0.40%) ಏರಿಕೆಯೊಂದಿಗೆ 41,306.03 ಅಂಶ ತಲುಪಿದೆ. ಇದೇ ವೇಳೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 48.80 ಅಂಶ(0.40%) ಏರಿಕೆಯೊಂದಿಗೆ 12,137.95ರಲ್ಲಿ ವಹಿವಾಟು ಕೊನೆಗೊಳಿಸಿದೆ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂಡಸ್​ಇಂಡ್ ಬ್ಯಾಂಕ್ ಷೇರುಗಳು ಶೇಕಡ 4ಕ್ಕೂ ಹೆಚ್ಚು ಏರಿಕೆ ದಾಖಲಿಸಿದ್ದು, ಎಸ್​ಬಿಐ, ಬಜಾಜ್ ಫೈನಾನ್ಸ್​, ಭಾರ್ತಿ ಏರ್​ಟೆಲ್​, ಏಕ್ಸಿಸ್ ಬ್ಯಾಂಕ್​, ಸನ್ ಫಾರ್ಮಾ, ಎಚ್​ಡಿಎಫ್​ಸಿ, ಪವರ್​ ಗ್ರಿಡ್ ಷೇರುಗಳು ಲಾಭಗಳಿಸಿವೆ.

ಇದೇ ವೇಳೆ, ಟೈಟಾನ್, ಇನ್​ಫೋಸಿಸ್​, ಐಟಿಸಿ, ಕೊಟಾಕ್ ಬ್ಯಾಂಕ್ ಏಷ್ಯನ್ ಪೇಂಟ್ಸ್ ಷೇರುಗಳು ನಷ್ಟ ಅನುಭವಿಸಿವೆ. ರೆಪೋದರಕ್ಕೆ ಸ್ಪಂದಿಸುವ ಹಣಕಾಸು ಮತ್ತು ಬ್ಯಾಂಕಿಂಗ್ ಷೇರುಗಳು ಬಿಎಸ್​ಇ ಬ್ಯಾಂಕೆಕ್ಸ್​ನಲ್ಲಿ ಶೇಕಡ 1.21 ಏರಿಕೆ ದಾಖಲಿಸಿವೆ. ಆದಾಗ್ಯೂ ರಿಯಾಲ್ಟಿ ಷೇರುಗಳು ನಷ್ಟ ಅನುಭವಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net