ಕೇಂದ್ರ ಬಜೆಟ್ ಮುನ್ನಾದಿನ ಸೆನ್ಸೆಕ್ಸ್​ 190 ಅಂಶ ಕುಸಿತ: ನಿಫ್ಟಿ 12,000ಕ್ಕಿಂತಲೂ ಕೆಳಕ್ಕೆ..

Stock exchange mumbai 21 JAN 20
Published on

ಮುಂಬೈ: ಕೇಂದ್ರ ಸರ್ಕಾರ ಆರ್ಥಿಕ ಸಮೀಕ್ಷೆ ಪ್ರಕಟಿಸುತ್ತಲೇ ಕುಸಿತ ದಾಖಲಿಸಿದ ಷೇರುಪೇಟೆಯಲ್ಲಿ ದಿನದ ವಹಿವಾಟಿನ ಅಂತ್ಯಕ್ಕೆ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 190 ಅಂಶ ಕುಸಿತ ದಾಖಲಿಸಿದೆ. ಇದೇ ವೇಳೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​(ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 12,000ಕ್ಕಿಂತಲೂ ಕೆಳಕ್ಕೆ ಕುಸಿದಿದೆ.

ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್​ 41,154.49 ಅಂಶದ ಗರಿಷ್ಠ ಮಟ್ಟಕ್ಕೂ, 40,671.01 ಅಂಶಗಳ ಕನಿಷ್ಠಮಟ್ಟಕ್ಕೂ ತಲುಪಿತ್ತು. ಕೊನೆಗೆ ದಿನದ ವಹಿವಾಟಿನ ಅಂತ್ಯಕ್ಕೆ 190.33 ಅಂಶ (0.47%) ಕುಸಿತ ಕಂಡು 40,723.49ರಲ್ಲಿ ವಹಿವಾಟು ಮುಗಿಸಿದೆ. ಇದೇ ರೀತಿ, ನಿಫ್ಟಿ 73.70 ಅಂಶ(0.61%) ಇಳಿಕೆ ದಾಖಲಿಸಿದ್ದು, 11,962.10 ಅಂಶದಲ್ಲಿ ವಹಿವಾಟು ಮುಗಿಸಿದೆ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಒಎನ್​ಜಿಸಿ ಷೇರು ಗರಿಷ್ಠ 5.8% ನಷ್ಟ ಅನುಭವಿಸಿದರೆ, ಪವರ್​ಗ್ರಿಡ್​, ಎಚ್​ಸಿಎಲ್​ ಟೆಕ್​, ಟಿಸಿಎಸ್​, ಟಾಟಾ ಸ್ಟೀಲ್​, ರಿಲಯನ್ಸ್ ಇಂಡಸ್ಟ್ರೀಸ್​ ಷೇರುಗಳು ಕೂಡ ನಷ್ಟ ಅನುಭವಿಸಿವೆ. ಇನ್ನೊಂದೆಡೆ, ಕೊಟಾಕ್ ಬ್ಯಾಂಕ್​, ಎಸ್​ಬಿಐ, ಇಂಡಸ್​ ಇಂಡ್ ಬ್ಯಾಂಕ್, ಭಾರ್ತಿ ಏರ್​ಟೆಲ್​, ಟೆಕ್​ ಮಹೀಂದ್ರಾ ಷೇರುಗಳು ಲಾಭಗಳಿಸಿವೆ.

ಜಿಯೋಜಿತ್ ಫಿನಾನ್ಶಿಯಲ್ ಸರ್ವೀಸಸ್​ನ ಎಕನಾಮಿಸ್ಟ್​ ದೀಪ್ತಿ ಮೇರಿ ಮ್ಯಾಥ್ಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಂಕಷ್ಟದ ಆರ್ಥಿಕ ಸನ್ನಿವೇಶದ ಸೂಚನೆಯನ್ನು ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು ನೀಡಿವೆ. ಇದು ಮಾರುಕಟ್ಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net