ಷೇರುಪೇಟೆಯಲ್ಲಿ ಕರಡಿ ಕುಣಿತ: ಮೆಟಲ್, ಐಟಿ ಷೇರುಗಳಿಗೆ ಭಾರಿ ನಷ್ಟ, ಸೆನ್ಸೆಕ್ಸ್​ ಒಂದೇ ದಿನ 1,448 ಅಂಶ ಕುಸಿತ

stock-market-bear 28 FEB 20
Published on

ಮುಂಬೈ: ಕಳೆದ ಆರು ದಿನಗಳ ಅವಧಿಯಲ್ಲಿ ನಿರಂತರ ಕುಸಿತ ಕಾಣುತ್ತಲೇ ಬಂದಿರುವ ಭಾರತೀಯ ಷೇರುಪೇಟೆಯಲ್ಲಿ ಶುಕ್ರವಾರ ಕರಡಿ ಕುಣಿತ ಜೋರಾಗಿ ಬ್ಲಡ್ ಬಾತ್​ ಕಾಣಿಸಿಕೊಂಡಿತ್ತು. ಜಾಗತಿಕ ಮಟ್ಟದ ಟ್ರೆಂಡ್ ಇಲ್ಲೂ ಅನುರಣಿಸಿದ್ದು, ಕೊರೊನಾ ವೈರಸ್ ಸೋಂಕಿನ ಭೀತಿ ಪೇಟೆಯನ್ನು ತಲ್ಲಣಗೊಳಿಸಿದೆ. ಚೀನಾದ ಈ ಸೋಂಕು ಜಾಗತಿಕವಾಗಿ 83,000ಕ್ಕೂ ಹೆಚ್ಚು ಜನರನ್ನು ಕಾಡಿದೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ ಶುಕ್ರವಾರ ಒಂದೇ ದಿನ 1,448 ಅಂಶ ಕುಸಿತ ಕಂಡಿದೆ. ಇಂಟ್ರಾ ಡೇ ವಹಿವಾಟಿನಲ್ಲಿ ಗರಿಷ್ಠ 1,525 ಅಂಶ ಕುಸಿತ ಕಂಡ ಸೆನ್ಸೆಕ್ಸ್​, ಅಲ್ಪ ಚೇತರಿಕೆ ತೋರಿ ಕೊನೆಗೆ ಶೇಕಡ 3.64 ಅಥವಾ 1,448.37 ಅಂಶ ಕುಸಿತದೊಂದಿಗೆ ದಿನದ ವಹಿವಾಟನ್ನು 38,297.29ರಲ್ಲಿ ಕೊನೆಗೊಳಿಸಿದೆ. ಇದೇ ರೀತಿ, ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 431.55 ಅಂಶ ಅಥವಾ ಶೇಕಡ 3.71 ಕುಸಿತ ಕಂಡು 11,201.75ರಲ್ಲಿ ವಹಿವಾಟು ಮುಗಿಸಿದೆ.

ಸೆನ್ಸೆಕ್ಸ್ ಪಟ್ಟಿಯಲ್ಲಿ ಟೆಕ್ ಮಹಿಂದ್ರಾ ಗರಿಷ್ಠ ನಷ್ಟ ಅನುಭವಿಸಿದೆ. ಟಾಟಾ ಸ್ಟೀಲ್​, ಮಹಿಂದ್ರಾ ಆ್ಯಂಡ್ ಮಹಿಂದ್ರಾ, ಎಚ್​ಸಿಎಲ್​ ಟೆಕ್​, ಇನ್​ಫೋಸಿಸ್​, ಎಸ್​ಬಿಐ, ಬಜಾಜ್ ಫೈನಾನ್ಸ್​ ಷೇರುಗಳು ನಷ್ಟದ ಯಾದಿಯಲ್ಲಿ ನಂತರದ ಸ್ಥಾನಗಳಲ್ಲಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ವಾರದ ಅವಧಿಯಲ್ಲಿ ಅಂದಾಜು 9,389 ಕೋಟಿ ರೂಪಾಯಿ ಮೌಲ್ಯದ ಷೇರು ಮಾರಾಟ ಮಾಡಿದ್ದಾರೆ. ಇದು ಕೂಡ ಬ್ಲಡ್​ಬಾತ್​ಗೆ ಕಾರಣ ಎಂದು ಪರಿಣತರು ವಿಶ್ಲೇಷಿಸಿದ್ದಾರೆ. ಇನ್ನು, ಶಾಂಘೈ, ಹಾಂಕಾಂಗ್​, ಸಿಯೋಲ್ ಮತ್ತು ಟೋಕಿಯೋಗಳ ಮಾರುಕಟ್ಟೆ ಕೂಡ ಶೇಕಡ 3.71ರಷ್ಟು ನಷ್ಟ ಅನುಭವಿಸಿವೆ. ಯುರೋಪ್​ನ ಷೇರುಪೇಟೆ ಶುಕ್ರವಾರ ಬೆಳಗ್ಗೆ ವಹಿವಾಟಿನಲ್ಲಿ ಶೇಕಡ 4 ನಷ್ಟ ಅನುಭವಿಸಿದೆ. ವಾಲ್​ಸ್ಟ್ರೀಟ್​ನ ಓವರ್​ನೈಟ್ ಟ್ರೇಡ್​ನಲ್ಲಿ ದ ಡೌ ಜೋನ್ಸ್​ ಇಂಡಸ್ಟ್ರಿಯಲ್ ಆ್ಯವರೇಜ್​ 1,190.95 ಅಂಶ ಒಂದೇ ದಿನ ಕುಸಿತ ಕಂಡು ದಾಖಲೆ ಬರೆದಿದೆ.

ಕರೆನ್ಸಿ ಮಾರುಕಟ್ಟೆಯಲ್ಲಿ ಇಂಟ್ರಾ ಡೇ ವಹಿವಾಟಿನ ವೇಳೆ ಭಾರತೀಯ ರೂಪಾಯಿ ಮೌಲ್ಯ ಅಮೆರಿಕದ ಡಾಲರ್​ ಎದುರು 55 ಪೈಸೆ ಕುಸಿತ ಕಂಡು 72.16ರಲ್ಲಿ ವಹಿವಾಟು ಮುಂದುವರಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net