ಯೆಸ್​ ಬ್ಯಾಂಕ್​ನಲ್ಲಿ ಹೂಡಿಕೆ ಮಾಡಲು ತಾತ್ತ್ವಿಕ ಒಪ್ಪಿಗೆ ನೀಡಿದ ಎಸ್​ಬಿಐ ಆಡಳಿತ ಮಂಡಳಿ

yes-bank-crisis RBI SBI 6 MAR 20
Published on

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ, ಸಂಕಷ್ಟಕೀಡಾಗಿರುವ ಯಸ್ ಬ್ಯಾಂಕ್​ನಲ್ಲಿ ಹೂಡಿಕೆ ಮಾಡುವ ಪ್ರಸ್ತಾವನೆಗೆ ಭಾರತೀಯ ಸ್ಟೇಟ್ ಬ್ಯಾಂಕ್​ನ ಆಡಳಿತ ಮಂಡಳಿ ತಾತ್ತ್ವಿಕ ಒಪ್ಪಿಗೆ ನೀಡಿದೆ. ಗುರುವಾರ ಈ ಬಗ್ಗೆ ಕ್ಷಿಪ್ರ ಸಭೆ ನಡೆಸಿದ ಆಡಳಿತ ಮಂಡಳಿ, ತನ್ನ ನಿರ್ಧಾರವನ್ನು ಸೆಬಿಗೂ ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಸಂಕಷ್ಟಕ್ಕೀಡಾಗಿರುವ ಯೆಸ್​ ಬ್ಯಾಂಕನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಒಂದು ತಿಂಗಳ ಮಟ್ಟಿಗೆ ಯೆಸ್ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯಿಂದ ಹಣ ವಿತ್​ಡ್ರಾ ಮಾಡುವಾಗ ಗರಿಷ್ಠ ಮಿತಿ 50,000 ರೂಪಾಯಿಯನ್ನು ಆರ್​ಬಿಐ ನಿಗದಿ ಪಡಿಸಿದೆ. ಎಸ್​ಬಿಐ ಆಡಳಿತ ಮಂಡಳಿ ಸಭೆಯಲ್ಲಿ ಯೆಸ್​ ಬ್ಯಾಂಕ್​ನಲ್ಲಿ ಹೂಡಿಕೆಗೆ ಇರುವ ಅವಕಾಶದ ಬಗ್ಗೆ ವಿಸ್ತೃತವಾದ ಚರ್ಚೆ ನಡೆದಿದೆ. ಸದ್ಯದ ವರದಿ ಪ್ರಕಾರ, ಎಸ್​ಬಿಐ, ಎಲ್​ಐಸಿ ಕಂಪನಿಗಳು ಒಟ್ಟಾಗಿ ಯೆಸ್ ಬ್ಯಾಂಕ್​ನ ಶೇಕಡ 49 ಪಾಲುದಾರಿಕೆ ಹೊಂದುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿ ಅವುಗಳಿಗೆ ರವಾನಿಸಿದೆ.

ಈ ವರ್ಷ ಆರಂಭದಲ್ಲಿ ದಾವೋಸ್​ನ ಶೃಂಗದಲ್ಲಿ ಎಸ್​ಬಿಐ ಚೇರ್​ಮನ್ ರಜನೀಶ್ ಕುಮಾರ್ ಮಾತನಾಡಿದ ವೇಳೆ, ಯೆಸ್ ಬ್ಯಾಂಕ್​ನಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ 2 ಲಕ್ಷ ಕೋಟಿ ರೂಪಾಯಿಗಳ ಠೇವಣಿ ಇದ್ದು, ಅದು ನಷ್ಟಕ್ಕೀಡಾಗಲು ಬಿಡುವುದಿಲ್ಲ. ಅದರ ಹೂಡಿಕೆ ಟೆಕ್ನಾಲಜಿ ಚೆನ್ನಾಗಿದ್ದು, ಬ್ರಾಂಡ್​ಗೂ ಉತ್ತಮ ಹೆಸರು ಇದೆ ಎಂದು ಹೇಳಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net