ಇನ್ನು ದಿನದ 24 ತಾಸಿನಲ್ಲೂ ಆರ್​ಟಿಜಿಎಸ್ ಸೇವೆ

RBI
Published on

ಮುಂಬೈ: ದಿನದ 24 ತಾಸು (247) ವಾಸ್ತವ ಸಮಯದ ಒಟ್ಟು ಪಾವತಿ ವ್ಯವಸ್ಥೆ (ಆರ್​ಟಿಜಿಎಸ್) ಸೇವೆ ಭಾನುವಾರ ಮತ್ತು ಸೋಮವಾರದ ಮಧ್ಯರಾತ್ರಿ 12.30ರಿಂದ ಕಾರ್ಯಾರಂಭವಾಗಿದೆ. ಸಣ್ಣ ಮೊತ್ತದ ಡಿಜಿಟಲ್ ವರ್ಗಾವಣೆಯ ನೆಫ್ಟಿ 247 ಸೇವೆ ಕಾರ್ಯಾರಂಭ ಮಾಡಿದ ಒಂದು ವರ್ಷದಲ್ಲಿ ಆರ್​ಟಿಜಿಎಸ್ 247365 ಸೇವೆಯು ದಿನಪೂರ್ತಿ ಲಭ್ಯವಾಗಿದೆ. ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಟ್ವೀಟ್ ಮಾಡಿದ್ದಾರೆ. ಆರ್​ಟಿಜಿಎಸ್ ಸೇವೆ ದಿನಪೂರ್ತಿ ಒದಗಿಸಲಾಗುವುದು ಎಂದು ಆರ್​ಬಿಐ ಕಳೆದ ಅಕ್ಟೋಬರ್​ನಲ್ಲಿ ಘೋಷಿಸಿತ್ತು. 2004ರ ಮಾರ್ಚ್ 26ರಂದು ಆರ್​ಟಿಜಿಎಸ್ ಸೇವೆ ನಾಲ್ಕು ಬ್ಯಾಂಕ್​ಗಳಲ್ಲಿ ಮೊದಲು ಆರಂಭವಾಯಿತು. ಪ್ರಸ್ತುತ 6.35 ಲಕ್ಷ ಸಂಖ್ಯೆಯ ವಹಿವಾಟು ನಿತ್ಯ ನಡೆಯುತ್ತಿದ್ದು, ಅಂದಾಜು -ಠಿ; 4.17 ಲಕ್ಷ ಕೋಟಿ ಮೊತ್ತ 237 ಬ್ಯಾಂಕ್​ಗಳ ಮಧ್ಯೆ ವಿನಿಮಯವಾಗುತ್ತಿದೆ.

ಚೆಕ್ ಪಾವತಿ ಹೊಸ ನಿಯಮ ಜ.1ರಿಂದ ಜಾರಿ: ಚೆಕ್ ವಂಚನೆ ತಡೆಯಲು- 50 ಸಾವಿರ ರೂ. ಮತ್ತು ಅದಕ್ಕೂ ದೊಡ್ಡ ಮೊತ್ತದ ಪಾವತಿಗೆ ಆರ್​ಬಿಐ ಸೂಚಿಸಿರುವ ಹೊಸ ನಿಯಮ ಜನವರಿ 1ರಿಂದ ಜಾರಿಗೆ ಬರಲಿದೆ. ಕಳೆದ ಆಗಸ್ಟ್​ನಲ್ಲೇ ಆರ್​ಬಿಐ ಪಾಸಿಟಿವ್ ಪೇ ಸಿಸ್ಟಮ್ ಅನ್ನು ಅನುಮೋದಿಸಿದ್ದು, ಚೆಕ್ ನಗದೀಕರಣಕ್ಕೂ ಮುನ್ನ ಮರುದೃಢೀಕರಣ ಮಾಡುವುದು ಅಗತ್ಯವಾಗಿದೆ. ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ನಿಯಮವನ್ನು ವಿನ್ಯಾಸಗೊಳಿಸ ಲಾಗಿದ್ದು,ಚೆಕ್​ನಲ್ಲಿ ಕನಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಸೂಚಿಸುವ ಸಿಟಿಎಸ್ -2010 ಮಾನದಂಡವು ಇರುತ್ತದೆ. ಈ ನಿಯಮದ ಪ್ರಕಾರ, ಚೆಕ್ ಅನ್ನು ನೀಡುವ ಮೊದಲು ಅದರ ಸಂಖ್ಯೆ, ದಿನಾಂಕ, ಪಾವತಿಸುವವರ ಹೆಸರು, ಖಾತೆ ಸಂಖ್ಯೆ, ಮೊತ್ತ, ಇತ್ಯಾದಿ ಮಾಹಿತಿಗಳನ್ನು ಬ್ಯಾಂಕ್​ಗೆ ನೀಡಬೇಕಾಗುತ್ತದೆ.

ದಾಖಲೆ ಮಟ್ಟದಲ್ಲಿ ವಿದೇಶಿ ಹೂಡಿಕೆ

ಆಕರ್ಷಕ ಮೌಲ್ಯ ಹಾಗೂ ಅಮೆರಿಕ ಡಾಲರ್ ದುರ್ಬಲತೆ ಇನ್ನಿತರ ಕಾರಣಗಳಿಂದಾಗಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆ ಹೆಚ್ಚುತ್ತಿದ್ದು ಈ ವರ್ಷದಲ್ಲಿ ಇದುವರೆಗೆ (ಡಿ.11) -1.42 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬಂದಿದೆ. 2002ರ ನಂತರ ಕ್ಯಾಲೆಂಡರ್ ವರ್ಷವೊಂದರಲ್ಲಿ ಆಗಿರುವ ದೊಡ್ಡ ಹೂಡಿಕೆ ಇದಾಗಿದೆ.

ಆದರೂ ಕರೊನಾ ಸಾಂಕ್ರಾಮಿಕತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಯ ನಡುವೆ ವಿದೇಶಿ ಹೂಡಿಕೆದಾರರು ಒಂದು ಲಕ್ಷ ಕೋಟಿ ರೂಪಾಯಿಗಿಂತ ಸ್ವಲ್ಪ ಹೆಚ್ಚಿನ ಮೊತ್ತವನ್ನು ವಾಪಸ್ ಪಡೆದಿರುವ ವಿದ್ಯಮಾನವೂ ದಾಖಲಾಗಿದೆ. ಹೂಡಿಕೆಯ ಒಟ್ಟಾರೆ ಸನ್ನಿವೇಶದಲ್ಲಿ ಪ್ರಮುಖ ಬದಲಾವಣೆಯೇನೂ ಆಗದಿದ್ದರೆ ಇನ್ನೂ ಕೆಲವು ತಿಂಗಳು ಇದೇ ರೀತಿಯ ಪ್ರವೃತ್ತಿ ಮುಂದುವರಿಯಬಹುದು ಎಂಬುದು ಷೇರು ಪೇಟೆ ತಜ್ಞರ ನಿರೀಕ್ಷೆಯಾಗಿದೆ. ಕೋವಿಡ್-19 ಲಸಿಕೆ ಆವಿಷ್ಕಾರಕ್ಕೆ ಸಂಬಂಧಿಸಿ ಕೆಲವು ಮಹತ್ವದ ವಿದ್ಯಮಾನಗಳು ನಡೆದಿರುವುದರಿಂದ ಭಾರತಕ್ಕೆ ಅದರ ಲಾಭ ಆಗಲಿದೆ. ಆರ್ಥಿಕತೆಯ ಚೇತರಿಕೆಯಿಂದ ವಿದೇಶಿ ಹೂಡಿಕೆದಾರರಲ್ಲಿ ವಿಶ್ವಾಸ ವೃದ್ಧಿಯಾಗಲಿದೆ ಎಂದು ಷೇರುಪೇಟೆ ತಜ್ಞರೊಬ್ಬರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net