ಆರಲ್ಲ.. ಹನ್ನೊಂದು ಲಕ್ಷ ಕೋಟಿ ರೂಪಾಯಿ ಕೊಚ್ಚಿ ಹೋಯ್ತು... ಕಣ್ಣೀರಿಡುತ್ತಿದ್ದಾರೆ ಹೂಡಿಕೆದಾರರು

Blood bath in stock market 12 MAR 20
Published on

ಮುಂಬೈ: ಕರೋನಾ ವೈರಸ್ ಸೋಂಕು ಜಾಗತಿಕವಾಗಿ ವ್ಯಾಪಿಸಿದ ಕಾರಣ ಅರ್ಥ ವ್ಯವಸ್ಥೆಗಳೆಲ್ಲವೂ ಏರುಪೇರಾಗಿದ್ದು, ಷೇರುಪೇಟೆಯಲ್ಲಿ ಕರಡಿ ಕುಣಿತ ಜೋರಾಗಿದೆ. ಗುರುವಾರದ ವಹಿವಾಟಿನಲ್ಲಿ ರಕ್ತಪಾತವೇ ಸಂಭವಿಸಿದ್ದು, ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ಸೆನ್ಸೆಕ್ಸ್​ 2,500ಕ್ಕೂ ಹೆಚ್ಚು ಅಂಶ ಕುಸಿದರೆ, ನ್ಯಾಷನಲ್ ಸ್ಟಾಕ್​ ಎಕ್ಸ್​ಚೇಂಜ್​ ಸೂಚ್ಯಂಕ ನಿಫ್ಟಿ 10,000 ಅಂಶಕ್ಕಿಂತ ಕೆಳಕ್ಕೆ ಕುಸಿಯಿತು. ಈ ಕುಸಿತದ ಕಾರಣ ಹೂಡಿಕೆದಾರರು ಒಂದೇ ಸಲ ಬರೋಬ್ಬರಿ 11 ಲಕ್ಷ ಕೋಟಿ ರೂಪಾಯಿ ಹಣವನ್ನು ಕಳೆದುಕೊಂಡು ದುಃಖಿತರಾಗಿದ್ದಾರೆ.

ಗುರುವಾರ ವಹಿವಾಟು ಆರಂಭವಾಗಿ ಬೆಳಗ್ಗೆ 11.13ರ ಹೊತ್ತಿಗೆ ಸೆನ್ಸೆಕ್ಸ್​ 2,547.03 ಅಂಶ ಇಳಿದು 33,150.37ರಲ್ಲಿ, ನಿಫ್ಟಿ 758.25 ಅಂಶ ಇಳಿದು 9,700.15 ಅಂಶದಲ್ಲಿ ವಹಿವಾಟು ನಡೆಸುತ್ತಿತ್ತು. ವಹಿವಾಟು ಇಳಿಕೆಯ ಟ್ರೆಂಡ್​ ಮುಂದುವರಿದಿದ್ದು, ಗುರುವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್​ 1,821.27 ಅಂಶ ಕುಸಿದರೆ, ನಿಫ್ಟಿ 486.75 ಅಂಶ ಕುಸಿದಿತ್ತು.

ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ರಾತ್ರಿ ಕರೋನಾ ಸೋಂಕಿನ ವಿಚಾರವಾಗಿ ವಿವಿಧ ರಾಷ್ಟ್ರಗಳು ನಿಷ್ಕ್ರಿಯವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಷೇರುಪೇಟೆಗಳಲ್ಲಿ ಸೆಲ್​ ಆಫ್​ ಪ್ರಕ್ರಿಯೆ ತೀವ್ರಗೊಂಡಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಬ್ರಿಟನ್ ಹೊರತು ಪಡಿಸಿ ಯುರೋಪ್​ ನಿಂದ ಆಗಮಿಸುವವರಿಗೆ 30 ದಿನಗಳ ನಿಷೇಧ ಹೇರಿದ್ದು ಕೂಡ ಪರಿಣಾಮ ಬೀರಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net