ಚಿಲ್ಲರೆ ಹಣದುಬ್ಬರ ಜನವರಿಯಲ್ಲಿ ಆರು ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ

Inflation 12 FEB 20
Published on

ನವದೆಹಲಿ: ಸರ್ಕಾರಿ ಡೇಟಾ ಪ್ರಕಾರ ಜನವರಿ ತಿಂಗಳಲ್ಲಿ ಆಹಾರ ಧಾನ್ಯಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಆರು ವರ್ಷದ ಗರಿಷ್ಠ ಮಟ್ಟಕ್ಕೆ ಅಂದರೆ ಶೇಕಡ 7.59ಕ್ಕೆ ತಲುಪಿದೆ.

ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಬುಧವಾರ ಬಿಡುಗಡೆ ಮಾಡಿರುವ ಡೇಟಾ ಪ್ರಕಾರ, ಗ್ರಾಹಕ ದರ ಸೂಚ್ಯಂಕ ಆಧಾರಿತ ಹಣದುಬ್ಬರ 2019ರ ಡಿಸೆಂಬರ್​ನಲ್ಲಿ ಶೇಕಡ 7.35, 2019ರ ಜನವರಿಯಲ್ಲಿ ಇದು ಶೇಕಡ 1.97 ರಷ್ಟು ಇತ್ತು. ಇದಕ್ಕೂ ಮುನ್ನ 2014ರ ಮೇ ತಿಂಗಳಲ್ಲಿ ಇದು ಶೇಕಡ 8.33 ಆಗಿತ್ತು.

ಈ ವರ್ಷದ ಜನವರಿಯಲ್ಲಿ ಒಟ್ಟಾರೆ ಆಹಾರ ಹಣದುಬ್ಬರ ಶೇಕಡ 13.63 ಇತ್ತು. ಇದು ಡಿಸೆಂಬರ್​ನಲ್ಲಿದ್ದ 14.19ಕ್ಕೆ ಹೋಲಿಸಿದರೆ ಕಡಿಮೆ. ಇದೇ ರೀತಿ ಜನವರಿ ತಿಂಗಳ ತರಕಾರಿಗಳ ಹಣದುಬ್ಬರ ಪ್ರಮಾಣ ಶೇಕಡ 50.19 ಇತ್ತು. ಧಾನ್ಯ ಮತ್ತು ಸಂಬಂಧಿತ ಉತ್ಪನ್ನಗಳ ಹಣದುಬ್ಬರ ಶೇಕಡ 16.71ಕ್ಕೆ ತಲುಪಿದೆ.

ಪ್ರೊಟೀನ್ ಜಾಸ್ತಿ ಇರುವ ಉತ್ಪನ್ನಗಳಾದ ಮಾಂಸ, ಮೀನುಗಳ ಹಣದುಬ್ಬರ ಶೇಕಡ 10.50 ಏರಿಕೆಯಾಗಿದ್ದು, ಮೊಟ್ಟೆಯ ಹಣದುಬ್ಬರ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 10.41 ಏರಿಕೆಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net