

ನವದೆಹಲಿ: ಈ ವರ್ಷದ ಜನವರಿಯಲ್ಲಿ ಶೇ. 7.59ಕ್ಕೆ ಜಿಗಿದಿದ್ದ ಚಿಲ್ಲರೆ ಹಣದುಬ್ಬರದ ಪ್ರಮಾಣ ಫೆಬ್ರವರಿಯಲ್ಲಿ ಶೇ. 6.58ಕ್ಕೆ ಇಳಿಕೆಯಾಗಿದೆ. ಆಹಾರ ಪದಾರ್ಥಗಳ ಬೆಲೆ ತಗ್ಗಿರುವುದು ಇದಕ್ಕೆ ಕಾರಣ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ತಿಳಿಸಿದೆ.
ಜನವರಿಯಲ್ಲಿ ಆಹಾರ ಹಣದುಬ್ಬರದ ಪ್ರಮಾಣ ಶೇ. 13.63 ಇತ್ತು. ಇದು ಫೆಬ್ರವರಿಯಲ್ಲಿ ಶೇ. 10.81ಕ್ಕೆ ತಗ್ಗಿದೆ. ಹಣದುಬ್ಬರದ ಪ್ರಮಾಣವನ್ನು ಶೇ. 4ರ ಮಿತಿಯಲ್ಲಿ ಇರಿಸುವಂತೆ ಸರ್ಕಾರ ಆರ್ಬಿಐಗೆ ಸೂಚಿಸಿದೆ. ಆದರೆ, ಆರ್ಥಿಕತೆ ಮಂದಗತಿಯ ಜತೆಗೆ ಕರೊನಾ ಸೋಂಕಿನ ಆತಂಕದಿಂದ ಷೇರುಪೇಟೆ, ವ್ಯಾಪಾರೋದ್ಯಮಗಳು ಹಿನ್ನಡೆ ಅನುಭವಿಸುತ್ತಿವೆ. ಹೀಗಾಗಿ ಹಣದುಬ್ಬರ ಪ್ರಮಾಣ ಸರ್ಕಾರ ನಿರೀಕ್ಷಿಸಿದ ಮಟ್ಟಕ್ಕೆ ಬರುತ್ತಿಲ್ಲ. ಈ ಮಧ್ಯೆ, ದೇಶದ ಕೈಗಾರಿಕಾ ಉತ್ಪಾದನೆ ಫೆಬ್ರವರಿಯಲ್ಲಿ ಶೇ. 2ಕ್ಕೆ ಏರಿದೆ. ಇದು ಜನವರಿಯಲ್ಲಿ ಶೇ. 1.6 ಇತ್ತು.