

ಮುಂಬೈ: ಜಾಗತಿಕ ಅತಿಶ್ರೀಮಂತರ ಪೈಕಿ ಮುಂಚೂಣಿಯಲ್ಲಿರುವ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ನ ನಿವ್ವಳ ಲಾಭದಲ್ಲಿ ಶೇ.39 ಕುಸಿತವಾಗಿದೆ. ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ 2019-2020ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟಾರೆ ಲಾಭದಲ್ಲಿ 6,348 ಕೋಟಿ ರೂ. ಕಡಿಮೆಯಾಗಿದೆ.
ಕಳೆದ ವರ್ಷ ಮಾರ್ಚ್ಗೆ ಅಂತ್ಯಗೊಂಡಿದ್ದ ತ್ರೈಮಾಸಿಕದಲ್ಲಿ 10,362 ಕೋಟಿ ರೂ. ಲಾಭ ಬಂದಿರುವುದಾಗಿ ಕಂಪನಿ ಘೋಷಿಸಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತ ರಿಲಯನ್ಸ್ ಕಂಪನಿಯ ನಿವ್ವಳ ಲಾಭ ಕುಸಿಯಲು ಕಾರಣ ಎನ್ನಲಾಗಿದೆ.
ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಮಾರ್ಚ್ಗೆ ಅಂತ್ಯಗೊಂಡ 2029-2020ನೇ ಸಾಲಿನ ವಿತ್ತೀಯ ವರ್ಷದಲ್ಲಿ ಕಂಪನಿಯ ಒಟ್ಟಾರೆ ಆದಾಯ 1,42,565 ಕೋಟಿ ರೂ.ನಿಂದ ಶೇ.2 ಅಂದರೆ 3,282 ಕೋಟಿ ರೂ. ಕಡಿಮೆಯಾಗಿ 1,39,283 ಕೋಟಿ ರೂ.ಗೆ ತಲುಪಿದೆ.
ಇದೇ ವೇಳೆ ರಿಲಯನ್ಸ್ ಇಂಡಸ್ಟ್ರೀಸ್ ರೈಟ್ಸ್ ಇಶ್ಯೂ ಮೂಲಕ 53,125 ಕೋಟಿ ರೂ. ಹೂಡಿಕೆ ಸಂಗ್ರಹಿಸಲು ನಿರ್ಧರಿಸಿದೆ. ಭಾರತದಲ್ಲೇ ಇದು ಗರಿಷ್ಠ ಹೂಡಿಕೆ ಸಂಗ್ರಹವಾಗಲಿರುವುದಾಗಿ ಹೇಳಲಾಗಿದೆ.