ಅಯೋಧ್ಯೆಯಲ್ಲಿ ಅಮಿತಾಬ್ ಬಚ್ಚನ್ ಕಣ್ಣು: ಆಡಿದ ಒಂದೇ ಮಾತಿಗೆ ಮರುದಿನವೇ ಹರಿದು ಬಂತು 15 ಕೋಟಿ! ಏನಿದು ಸೀಕ್ರೆಟ್? Amitabh Bachchan

Amitabh Bachchan ಚಿತ್ರ Instagram
Amitabh Bachchan ಚಿತ್ರ Instagram
Published on
Amitabh Bachchan: ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಇಂದು ಕೇವಲ ಆಧ್ಯಾತ್ಮಿಕ ಕೇಂದ್ರಗಳಾಗಿ ಉಳಿದಿಲ್ಲ, ಬದಲಾಗಿ ರಿಯಲ್​ ಎಸ್ಟೇಟ್​ ಹೂಡಿಕೆಯ ಅತ್ಯಂತ ಪ್ರಮುಖ ಆಕರ್ಷಣೀಯ ತಾಣಗಳಾಗಿ ಹೊರಹೊಮ್ಮುತ್ತಿವೆ. ಇತ್ತೀಚೆಗೆ ನಡೆದ ರಿಯಲ್ ಎಸ್ಟೇಟ್ ಸಮಾವೇಶದಲ್ಲಿ ಮಾತನಾಡಿದ ದಿ ಹೌಸ್ ಆಫ್ ಅಭಿನಂದನ್ ಲೋಧಾ ಸಂಸ್ಥೆಯ ಸಂಸ್ಥಾಪಕ ಅಭಿನಂದನ್ ಲೋಧಾ, ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅಯೋಧ್ಯೆಯಲ್ಲಿ ಜಮೀನು ಖರೀದಿಸಲು ತಮ್ಮನ್ನು ವೈಯಕ್ತಿಕವಾಗಿ ಸಂಪರ್ಕಿಸಿದ ಆಸಕ್ತಿದಾಯಕ ಕಥೆಯೊಂದನ್ನು ಹಂಚಿಕೊಂಡಿದ್ದಾರೆ.
2023ರಲ್ಲಿ ತಾವು ಆಸ್ಟ್ರೇಲಿಯಾದಲ್ಲಿದ್ದಾಗ ಮಧ್ಯರಾತ್ರಿ 3 ಗಂಟೆಗೆ ಅಮಿತಾಬ್ ಬಚ್ಚನ್ ನನಗೆ ಕರೆ ಮಾಡಿ ನಾನು ಉತ್ತರ ಪ್ರದೇಶದವನು, ನನಗೆ ಅಯೋಧ್ಯೆಯಲ್ಲಿ ಜಮೀನು ಬೇಕು ಎಂದು ಕೇಳಿಕೊಂಡರು. ತಕ್ಷಣವೇ 15,000 ಚದರ ಅಡಿ ಜಾಗವನ್ನು 15 ಕೋಟಿ ರೂಪಾಯಿಗೆ ನಿಗದಿಪಡಿಸಲಾಯಿತು. ಅವರು ಮರುದಿನವೇ ಸಂಪೂರ್ಣ ಹಣವನ್ನು ಪಾವತಿಸಿದ್ದರು ಎಂದು ಲೋಧಾ ತಿಳಿಸಿದ್ದಾರೆ.

ಬಿಗ್ ಬಿ ರಿಯಲ್ ಎಸ್ಟೇಟ್: ಅಯೋಧ್ಯೆ, ಅಲಿಬಾಗ್ ಹೂಡಿಕೆ ವಿವರ

ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ತಮ್ಮ ಹೂಡಿಕೆಯನ್ನು ನಿರಂತರವಾಗಿ ವಿಸ್ತರಿಸುತ್ತಿದ್ದು, ಇತ್ತೀಚೆಗೆ ಮಾರ್ಚ್ 2026 ರಲ್ಲಿ HoABL ಸಂಸ್ಥೆಯಿಂದ 35 ಕೋಟಿ ರೂಪಾಯಿ ಮೌಲ್ಯದ 2.67 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಇದು ಅವರು ಅಯೋಧ್ಯೆಯಲ್ಲಿ ಮಾಡಿರುವ ಮೂರನೇ ಹೂಡಿಕೆಯಾಗಿದೆ. ಇದಕ್ಕೂ ಮುನ್ನ ಮೇ 2025 ರಲ್ಲಿ 40 ಕೋಟಿ ರೂಪಾಯಿ ವೆಚ್ಚದಲ್ಲಿ 25,000 ಚದರ ಅಡಿ ಪ್ಲಾಟ್ ಮತ್ತು 2024 ರಲ್ಲಿ ದಿ ಸರಯೂ ಯೋಜನೆಯಲ್ಲಿ 14.5 ಕೋಟಿ ರೂಪಾಯಿಗೆ 10,000 ಚದರ ಅಡಿ ಪ್ಲಾಟ್ ಖರೀದಿಸಿದ್ದರು.
ಅಯೋಧ್ಯೆ ಮಾತ್ರವಲ್ಲದೆ, ಮಹಾರಾಷ್ಟ್ರದ ಅಲಿಬಾಗ್‌ನಲ್ಲಿರುವ HoABL ನ ಯೋಜನೆಯಲ್ಲೂ ಬಿಗ್ ಬಿ 10 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ಇಲ್ಲಿ ಬಾಲಿವುಡ್ ತಾರೆಯರಾದ ಕೃತಿ ಸನೋನ್ ಮತ್ತು ಕಾರ್ತಿಕ್ ಆರ್ಯನ್ ಕೂಡ ಆಸ್ತಿ ಹೊಂದಿದ್ದಾರೆ. ಪ್ರಸ್ತುತ ಈ ಸಂಸ್ಥೆಯ ಗ್ರಾಹಕರಲ್ಲಿ ಶೇ. 65 ಕ್ಕಿಂತ ಹೆಚ್ಚು ಮಂದಿ ಪ್ರಮುಖ ಕಂಪನಿಗಳ ಸಿಇಒಗಳು ಮತ್ತು ಬಾಲಿವುಡ್ ಗಣ್ಯರಾಗಿದ್ದಾರೆ ಎಂಬುದು ವಿಶೇಷ.

ಹಿರಿಯ ನಾಗರಿಕರ ಆಸರೆ: ಆಧ್ಯಾತ್ಮಿಕ ತಾಣಗಳತ್ತ ಒಲವು!

ಧಾರ್ಮಿಕ ಪ್ರವಾಸೋದ್ಯಮದ ಭಾರಿ ಬೆಳವಣಿಗೆಯು ರಿಯಲ್ ಎಸ್ಟೇಟ್ ವಲಯಕ್ಕೆ ಹೊಸ ದಾರಿಯನ್ನು ತೋರಿಸುತ್ತಿದೆ ಎಂದು ಲೋಧಾ ವಿಶ್ಲೇಷಿಸಿದ್ದಾರೆ. ಜಾಗತಿಕವಾಗಿ ವ್ಯಾಟಿಕನ್ ಸಿಟಿಗೆ ವರ್ಷಕ್ಕೆ 1 ಕೋಟಿ ಪ್ರವಾಸಿಗರು ಭೇಟಿ ನೀಡಿದರೆ, ಅಯೋಧ್ಯೆಗೆ ಸುಮಾರು 25 ಕೋಟಿ ಪ್ರವಾಸಿಗರು ಬರುತ್ತಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಯು ಭೇಟಿ ನೀಡುವುದರಿಂದ ಸ್ಥಳೀಯ ಆರ್ಥಿಕತೆ ಚುರುಕಾಗಲಿದ್ದು, ಮುಂಬರುವ ದಿನಗಳಲ್ಲಿ ಇಂತಹ ಪವಿತ್ರ ಕ್ಷೇತ್ರಗಳ ಸುತ್ತಮುತ್ತ ಹಿರಿಯ ನಾಗರಿಕರ ವಸತಿ ಸಮುಚ್ಚಯಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಲಿದೆ.
ಭೂಮಿಯ ಮೌಲ್ಯ ಹೆಚ್ಚಾಗುತ್ತಿದ್ದಂತೆ ಜನರು ಜಾಗವನ್ನು ಮಾರಾಟ ಮಾಡಲು ಹಿಂಜರಿಯುತ್ತಿದ್ದು, ಇದು ದೀರ್ಘಕಾಲೀನ ಮೌಲ್ಯ ಸೃಷ್ಟಿಗೆ ಕಾರಣವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಲಿಯಾಸೆಸ್ ಫೋರಸ್ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಅಯೋಧ್ಯೆಯ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಅಭೂತಪೂರ್ವ ಬದಲಾವಣೆಯನ್ನು ಕಾಣುತ್ತಿದೆ. ಇಲ್ಲಿನ ಭೂಮಿಯ ಬೆಲೆಯು ಶೇ. 19 ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರವನ್ನು (CAGR) ಹೊಂದಿದ್ದು, 2035 ರ ವೇಳೆಗೆ ಇದು ಶೇ. 25 ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ.
ಕಳೆದ ಐದು ವರ್ಷಗಳಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ರಸ್ತೆ ಮತ್ತು ರೈಲು ಸಂಪರ್ಕ ಹಾಗೂ ಭವ್ಯ ರಾಮ ಮಂದಿರ ನಿರ್ಮಾಣದಂತಹ ಮೂಲಸೌಕರ್ಯ ಯೋಜನೆಗಳಿಂದಾಗಿ ಸರಯೂ ನದಿ ತೀರ ಮತ್ತು ರಾಮ ಮಂದಿರ ಕಾರಿಡಾರ್ ಸುತ್ತಮುತ್ತಲಿನ ಭೂಮಿಯ ಬೆಲೆ 4.5 ಪಟ್ಟು ಹೆಚ್ಚಾಗಿದೆ.
2020ರಲ್ಲಿ ಆರಂಭವಾದ ದಿ ಹೌಸ್ ಆಫ್ ಅಭಿನಂದನ್ ಲೋಧಾ ಸಂಸ್ಥೆಯು ಈಗಾಗಲೇ ಐದು ವರ್ಷಗಳಲ್ಲಿ 13 ಮಿಲಿಯನ್ ಚದರ ಅಡಿ ಭೂಮಿಯನ್ನು ಯಶಸ್ವಿಯಾಗಿ ಮಾರಾಟ ಮಾಡಿದ್ದು, ಪ್ರಸ್ತುತ ದೇಶದ ಐದು ರಾಜ್ಯಗಳಲ್ಲಿ 25 ಮಿಲಿಯನ್ ಚದರ ಅಡಿ ಪ್ರದೇಶವನ್ನು ಸಕ್ರಿಯವಾಗಿ ಅಭಿವೃದ್ಧಿಪಡಿಸುತ್ತಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net