

ಇಂಧನ ದರ ಏರಿಕೆಯಿಂದಾಗಿ ಹಣದುಬ್ಬರ ಹೆಚ್ಚಿದ್ದರೂ ಜಾಗತಿಕ ಕೇಂದ್ರೀಯ ಬ್ಯಾಂಕ್ಗಳ ಬಡ್ಡಿದರ ಏರಿಕೆ ಮತ್ತು ಆ ಕುರಿತ ಗಂಭೀರ ಚರ್ಚೆಗಳು ಅರ್ಥಹೀನ. ತೈಲ ಬೆಲೆ ಏರಿಕೆಯೊಂದೇ ಸಾರ್ವತ್ರಿಕ ಹಣದುಬ್ಬರಕ್ಕೆ ಎಂದಿಗೂ ಕಾರಣವಾಗುವುದಿಲ್ಲ; ಈಗಿನಂತೆ ಹಣದ ಪೂರೈಕೆಯ ಬೆಳವಣಿಗೆ ನಿಯಂತ್ರಿತವಾಗಿದ್ದಾಗ, ಅದು ಉಳಿದ ಸರಕುಗಳ ಬೆಲೆಗಳನ್ನು ತಗ್ಗಿಸಿಬಿಡುತ್ತದೆ. ಬಡ್ಡಿದರ ಹೆಚ್ಚಳವೆಲ್ಲ ನಕಾರಾತ್ಮಕವಲ್ಲ; ಆದರೆ ಅತಿಯಾದ ಏರಿಕೆಯು ಬ್ಯಾಂಕುಗಳು ಸಾಲ ಕೊಡುವುದರ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಆರ್ಥಿಕ ಅಭಿವೃದ್ಧಿಗೆ ಧಕ್ಕೆಯಾಗಬಹುದು.
ಯಾವಾಗ ಏರಿಸಬೇಕು?: ತೈಲ ಬೆಲೆ ಏರಿಕೆಯ ಆತಂಕದಿಂದಾಗಿ ಬಡ್ಡಿದರ ಹೆಚ್ಚಳದ ಗದ್ದಲವು ಜೋರಾಗಿದ್ದು, ಇದೇ ಪ್ರಶ್ನೆ ಈಗ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಮತ್ತು ವಿಶ್ವದ ಇತರ ಕೇಂದ್ರೀಯ ಬ್ಯಾಂಕರ್ಗಳ ನಿದ್ದೆಗೆಡಿಸಿದೆ. ಅವರ ಅತ್ಯುತ್ತಮ ಹೆಜ್ಜೆ ಯಾವುದು? ಏನನ್ನೂ ಮಾಡದಿರುವುದೇ ಅತ್ಯುತ್ತಮ ಹೆಜ್ಜೆ. ಒಂದೆರಡು ಬಾರಿಯ ಬಡ್ಡಿದರ ಹೆಚ್ಚಳದಿಂದ ಕರ್ನಾಟಕದ ಆರ್ಥಿಕತೆ ಅಥವಾ ಭಾರತದ ಜಿಡಿಪಿಗೆ ದೊಡ್ಡ ನಷ್ಟವೇನೂ ಆಗದು, ಆದರೆ ಈ ನಿರ್ಧಾರ ಸಂಪೂರ್ಣ ಅನವಶ್ಯಕ ಮತ್ತು ತಪ್ಪು.
ಯುದ್ಧದಿಂದಾಗಿ ಹೆಚ್ಚುತ್ತಿರುವ ಕಚ್ಚಾತೈಲದ ಬೆಲೆ, ಎಲ್ಲ ವಸ್ತುಗಳ ಬೆಲೆಯನ್ನೂ ಏರಿಸಿಬಿಡುತ್ತದೆ ಮತ್ತು ಇತ್ತೀಚಿನ ವರ್ಷಗಳ ಭೀಕರ ಹಣದುಬ್ಬರ ಮತ್ತೆ ತಲೆದೋರುತ್ತದೆ ಎಂಬ ಭೀತಿ ವಿಶ್ವದ ಹಣಕಾಸು ನೀತಿ ನಿರೂಪಕರಲ್ಲಿದೆ. ‘ಹಣದುಬ್ಬರದ ಒತ್ತಡ’ವನ್ನು ಸರಿದೂಗಿಸಲು ಬಡ್ಡಿದರ ಏರಿಕೆ ಅನಿವಾರ್ಯವೆಂದು ಅವರು ಭಾವಿಸಿದ್ದಾರೆ. ಅವರ ಈ ಆಲೋಚನೆ ತಪ್ಪಾಗಿದ್ದರೂ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್, ಆಸ್ಟ್ರೇಲಿಯಾದ ರಿಸರ್ವ್ ಬ್ಯಾಂಕ್ ಮತ್ತಿತರ ಬ್ಯಾಂಕ್ಗಳು ಈಗಾಗಲೇ ಬಡ್ಡಿದರ ಏರಿಸಿರುವುದನ್ನು ತಡೆಯಲಾಗಲಿಲ್ಲ. ಮತ್ತಷ್ಟು ಏರಿಕೆಯ ಚರ್ಚೆ ಜಾಗತಿಕವಾಗಿ ಜೋರಾಗಿದೆ.
ಆಗಸ್ಟ್ ತಿಂಗಳ ಹಣದುಬ್ಬರ ಹೆಚ್ಚಾದ ನಂತರ ಭಾರತದಲ್ಲೂ ಬಡ್ಡಿದರ ಏರಿಕೆಯ ಮಾತುಗಳು ಕೇಳಿಬರುತ್ತಿವೆ. ಅದಕ್ಕೂ ಮುನ್ನ ಬಂದ ಆರ್ಬಿಐ ಸಭೆಯ ವಿವರಗಳು ಸಹ ಅಧಿಕಾರಿಗಳು ಬಡ್ಡಿದರ ಹೆಚ್ಚಿಸುವ ಮೂಡ್ನಲ್ಲಿದ್ದಾರೆ ಎಂಬುದನ್ನು ತೋರಿಸಿದ್ದವು. ಡೆಪ್ಯುಟಿ ಗವರ್ನರ್ ಪೂನಂ ಗುಪ್ತಾ ಅವರು ಹಣದುಬ್ಬರ ಹೀಗೆಯೇ ಹೆಚ್ಚಾದರೆ 2026ರಲ್ಲಿ ಬಡ್ಡಿದರ ಹೆಚ್ಚಿಸಬೇಕಾಗಬಹುದು ಎಂದು ಹೇಳಿದ್ದಾರೆ. ಗವರ್ನರ್ ಮಲ್ಹೋತ್ರಾ ಅವರು ಮೂಲ ಬೆಲೆ ಏರಿಕೆಯ ಒತ್ತಡ ಕಡಿಮೆಯಿದೆ ಎಂದು ತಿಳಿಸಿದರೂ, ತೈಲ ಬೆಲೆಗಳ ಕಾರಣದಿಂದಾಗಿ ಮುಂದಿನ ಸಭೆಯಲ್ಲಿ ಹಣದುಬ್ಬರದ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸುವುದಾಗಿ ಹೇಳಿದ್ದಾರೆ.
ಇದೆಲ್ಲವೂ ವ್ಯರ್ಥ ಆಲೋಚನೆ. ತೈಲ ಬೆಲೆ ಹೆಚ್ಚಾದ ಮಾತ್ರಕ್ಕೆ ನಿಜವಾದ ಹಣದುಬ್ಬರ ಸೃಷ್ಟಿಯಾಗುವುದಿಲ್ಲ. ಇದು ಪರ್ಯಾಯ ಬಳಕೆಯನ್ನು ಹೆಚ್ಚಿಸುತ್ತದೆ ಹಾಗೂ ಇತರ ವಸ್ತುಗಳ, ಮುಖ್ಯವಾಗಿ ಐಷಾರಾಮಿ ಉತ್ಪನ್ನಗಳ ಬೆಲೆಗಳು ಕುಸಿಯುತ್ತವೆ. ಅಂಕಿ-ಅಂಶಗಳು ಇದನ್ನೇ ದೃಢಪಡಿಸುತ್ತವೆ. ಜಾಗತಿಕ ಮಟ್ಟದಲ್ಲಿ ಅಮೆರಿಕದ ಆರ್ಥಿಕ ಶಕ್ತಿಯನ್ನೇ ನೋಡಿ. ಯುದ್ಧ ತೀವ್ರತೆ ಹಿನ್ನೆಲೆಯಲ್ಲಿ ಮೂರು ತಿಂಗಳಲ್ಲಿ ಇಂಧನ ವೆಚ್ಚ ಶೇ. 24.8ರಷ್ಟು ಏರಿಕೆ ಕಂಡಿತು. ಇದರಿಂದಾಗಿ ಅಮೆರಿಕದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರವು ಫೆಬ್ರವರಿಯ ಶೇ. 2.4ರಿಂದ ಮೇ ತಿಂಗಳಿನಲ್ಲಿ ಶೇ. 4.2ಕ್ಕೆ ಜಿಗಿಯಿತು. ಪ್ರಸ್ತುತ ಯುಎಸ್ ಇಂಧನ ವೆಚ್ಚಗಳು ವಾರ್ಷಿಕ ಶೇ. 14.7ರಷ್ಟು ಏರಿಕೆಯಲ್ಲಿವೆ. ಸಿಪಿಐ? ಪ್ರಸ್ತುತ ಇದು ಶೇ. 3.4ಕ್ಕೆ ಇಳಿದಿದೆ. ಗ್ರಾಹಕರು ಹೊಂದಿಕೊಂಡಾಗಿದೆ. ಕಷ್ಟಕರವೇ ಸರಿ, ಆದರೆ ಹಣದುಬ್ಬರವನ್ನೇನೂ ತರದು.
ಇಂಧನ ಬಿಟ್ಟು ಲೆಕ್ಕ ಹಾಕಿದರೆ, ಅಮೆರಿಕದ ಹಣದುಬ್ಬರ, ಈ ವರ್ಷ ಪೂರ್ತಿ ಶೇ. 2.5ರಿಂದ ಶೇ. 2.9ರಷ್ಟೇ ದಾಖಲಾಗಿದೆ; ಫೆಡ್ ಗುರಿಗೆ ಸನಿಹದಲ್ಲಿದೆ. ಆಗಸ್ಟ್ನಲ್ಲಿ ಇದು ಶೇ. 2.5ರಷ್ಟಿದ್ದು, ಜುಲೈನ ಶೇ. 2.6ಕ್ಕಿಂತ ಕಡಿಮೆಯಿದೆ. ತೈಲ ಬೆಲೆಯ ಪರಿಣಾಮ ಬೇರೆಲ್ಲೂ ತಟ್ಟಲೇ ಇಲ್ಲ.
ಭಾರತದಲ್ಲಿ?: ಹೆಚ್ಚಿದ ಇಂಧನ ದರ ಮತ್ತು ಇಂಧನದಿಂದಾಗಿ ಏರಿದ ಆಹಾರ ವೆಚ್ಚಗಳ ಕಾರಣದಿಂದಾಗಿ, ಸಿಪಿಐ ಹಣದುಬ್ಬರವು ಫೆಬ್ರವರಿಯ ವಾರ್ಷಿಕ ಶೇ. 3.2ರಿಂದ ಆಗಸ್ಟ್ ತಿಂಗಳಲ್ಲಿ ಶೇ. 4.8ಕ್ಕೆ ಜಿಗಿಯಿತು. ರಾಷ್ಟ್ರೀಯ ಆಹಾರ ಹಣದುಬ್ಬರವು ಜುಲೈ ತಿಂಗಳ ವಾರ್ಷಿಕ ಶೇ. 5.5ರಿಂದ ಆಗಸ್ಟ್ನಲ್ಲಿ ಶೇ.6.0ಕ್ಕೆ ತೀವ್ರಗೊಂಡಿತು. ಶೇ.7.6ರ ಆಹಾರ ಹಣದುಬ್ಬರದೊಂದಿಗೆ ಕರ್ನಾಟಕ, ದೇಶದಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಆದರೆ, ಏರಿಳಿತದ ಆಹಾರ ಮತ್ತು ಇಂಧನ ವೆಚ್ಚಗಳನ್ನು ಹೊರತುಪಡಿಸುವ ಭಾರತದ ‘ಕೋರ್’ ಹಣದುಬ್ಬರವು, ವಾರ್ಷಿಕ ಶೇ.4.2ರಲ್ಲಿ ಅಷ್ಟೇನೂ ಬದಲಾಗಿಲ್ಲ (ವಿಶ್ಲೇಷಕರ ಅಂದಾಜಿನ ಪ್ರಕಾರ). ಹಾಗಿದ್ದರೂ, ಹೆಚ್ಚಿನ ಬೆಲೆಗಳು ಭಾರತದ ಎರಡನೇ ತ್ರೖೆಮಾಸಿಕದ ಜಿಡಿಪಿಯು ವಾರ್ಷಿಕ ಶೇ.7.8ರಷ್ಟು ಬೆಳವಣಿಗೆಯನ್ನು ತಡೆಯಲಿಲ್ಲ. ಇಂಧನ ಬೆಲೆ ಹೆಚ್ಚಿದ್ದರೂ ಕರ್ನಾಟಕ ಸರ್ಕಾರ ಬಲವಾದ ಜಿಎಸ್ಡಿಪಿ ಬೆಳವಣಿಗೆಯ ನಿರೀಕ್ಷೆಯಲ್ಲಿದೆ.
ಹೌದು, ಇರಾನ್ ಯುದ್ಧದ ಭೀತಿಯು ತೈಲ ಬೆಲೆಯನ್ನು 100 ಡಾಲರ್ ದಾಟುವಂತೆ ಮಾಡಿದೆ. ಆದರೆ ಇದು ಏಪ್ರಿಲ್ನ ಗರಿಷ್ಠ 138 ಡಾಲರ್ಗಿಂತ ಗಮನಾರ್ಹವಾಗಿ ಕಡಿಮೆಯಿದೆ. ಮೇ ತಿಂಗಳ ನನ್ನ ಅಂಕಣದಲ್ಲಿ ಹೇಳಿದಂತೆಯೇ, ಆ ಏರಿಕೆ ಬೇಗನೇ ಯುದ್ಧಪೂರ್ವ ಮಟ್ಟಕ್ಕೆ ಕುಸಿಯಿತು. ಇತ್ತೀಚಿನ ಈ ಸಣ್ಣ ಏರಿಕೆಗಳೂ ಹೆಚ್ಚು ದಿನ ಉಳಿಯವು. ಹಣಕಾಸು ಅಧಿಕಾರಿಗಳು ತೈಲ ಬೆಲೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು, ತಮ್ಮ ಆಡಳಿತದ ಕಡೆಗೆ ಗಮನಹರಿಸಬೇಕು. 2022ರಲ್ಲಿ ಕಂಡುಬಂದ ತೀವ್ರ ಬೆಲೆ ಏರಿಕೆಗೆ ಇಂಧನ ಬೆಲೆಗಳು ಕಾರಣವಲ್ಲ. ಕರೊನಾ ಲಾಕ್ಡೌನ್ ಸಮಯದಲ್ಲಿ ಸೆಂಟ್ರಲ್ ಬ್ಯಾಂಕುಗಳು ಮಾರುಕಟ್ಟೆಗೆ ಅತಿಯಾಗಿ ಹಣ ಹರಿಸಿದ್ದೇ ಅದಕ್ಕೆ ನಿಜವಾದ ಕಾರಣ ಎಂದು ನನ್ನ ಮೇ ತಿಂಗಳ ಲೇಖನದಲ್ಲೂ ತಿಳಿಸಿದ್ದೆ. ಈಗ ಜಾಗತಿಕವಾಗಿ ಮತ್ತು ಭಾರತದಲ್ಲಿ ಹಣದ ಪೂರೈಕೆಯು ಸಾಮಾನ್ಯ ಮಟ್ಟದಲ್ಲಿದೆ.
ದರ ಏರಿಕೆ ಯಾವಾಗಲೂ ಹಾನಿಕಾರಕವೇನಲ್ಲ. ಅಲ್ಪಾವಧಿ ಮತ್ತು ದೀರ್ಘಾವಧಿ ಬಡ್ಡಿದರಗಳ ನಡುವಿನ ವ್ಯತ್ಯಾಸವಾದ ಈಲ್ಡ್ ಕರ್ವ್ ಮೇಲೆ ಪರಿಣಾಮ ಬೀರುವ ಮೂಲಕ, ಅವು ಸಾಲ ನೀಡಿಕೆಯ ಪ್ರಕ್ರಿಯೆಯನ್ನು ನಿಯಂತ್ರಿಸುತ್ತವೆ. ಬ್ಯಾಂಕುಗಳು ದೀರ್ಘಾವಧಿ ಸಾಲಗಳನ್ನು ನೀಡಲು ಅಲ್ಪಾವಧಿಯ ನಿಧಿಯನ್ನು (ಉದಾಹರಣೆಗೆ ಠೇವಣಿಗಳು) ಬಳಸಿಕೊಳ್ಳುತ್ತವೆ. ದೀರ್ಘಾವಧಿ ದರಗಳು ಅಲ್ಪಾವಧಿ ದರಗಳಿಗಿಂತ ಹೆಚ್ಚಾದಾಗ, ಹೊಸ ಸಾಲಗಳು ಲಾಭದಾಯಕವಾಗಿರುತ್ತವೆ. ಈ ರೀತಿಯ ಕಡಿದಾದ ಈಲ್ಡ್ ಕರ್ವ್ ಸಾಲ ನೀಡಿಕೆಯನ್ನು ಹೆಚ್ಚಿಸಿ ಅಭಿವೃದ್ಧಿಗೆ ನೆರವಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಭಾರತದ ಸೂಕ್ಷ ್ಮ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಅನುಕೂಲ. ಅಲ್ಪಾವಧಿ ದರಗಳು ದೀರ್ಘಾವಧಿಯನ್ನು ಮೀರಿದರೆ, ಈಲ್ಡ್ ಕರ್ವ್ ತಲೆಕೆಳಗಾಗುತ್ತದೆ. ಸಾಲ ನೀಡಿಕೆ ನಷ್ಟದಾಯಕವಾಗಿ, ಆರ್ಥಿಕ ಹಿಂಜರಿತದ ಎಚ್ಚರಿಕೆ ರವಾನಿಸುತ್ತದೆ.
ಈಗ ಹಾಗಿಲ್ಲ. 2026ರ ಆರಂಭದಲ್ಲಿ ಭಾರತದ 10 ವರ್ಷದ ಈಲ್ಡ್, 3 ತಿಂಗಳ ದರಕ್ಕಿಂತ ಶೇ.1.31 ಪಾಯಿಂಟ್ ಹೆಚ್ಚಿತ್ತು. ಜಾಗತಿಕ ದೀರ್ಘಾವಧಿ ದರ ಏರಿಕೆಯಿಂದಾಗಿ, ಈ ಅಂತರವೀಗ ಶೇ.1.80 ಪಾಯಿಂಟ್ಗೆ ಏರಿದೆ. ಅಮೆರಿಕದ ಅಂತರ 0.54ರಿಂದ 0.96 ಶೇಕಡಾವಾರು ಪಾಯಿಂಟ್ಗೆ
ಹೆಚ್ಚಿದೆ. ದರ ಏರಿಸುತ್ತಿರುವ ಯುರೋಜೋನ್ನ ಜರ್ಮನಿಯಲ್ಲಿ ಈ ಅಂತರ 1.03 ಶೇಕಡಾವಾರು ಪಾಯಿಂಟ್ ಇದೆ. ಫ್ರಾನ್ಸ್ನದ್ದೋ? 1.82. ಆದರೆ ದರ ಏರಿಕೆಗಳ ಮಧ್ಯೆ ಕೇಂದ್ರ ಬ್ಯಾಂಕುಗಳ ಆಯ್ಕೆಯ ಅವಕಾಶ ಕುಗ್ಗುತ್ತಿದೆ. ತಪ್ಪುಗಳಿಂದ ಪಾಠ ಕಲಿತು, ದರಗಳನ್ನು ವಿಪರೀತ ಏರಿಸುವ ಮುನ್ನ ಈಲ್ಡ್ ಕರ್ವ್ಗಳ ಬಗ್ಗೆ ಗಮನವಹಿಸಬೇಕು.