ಆರ್​ಬಿಐ ವಿತ್ತೀಯ ನೀತಿ ಪ್ರಕಟ: ರೆಪೋ ದರ ಸ್ಥಿರ

shaktikanta-das-pti 6 MAR 20
Published on

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್​(ಆರ್​ಬಿಐ)ನ ಮಾನಿಟರಿ ಪಾಲಿಸಿ ಕಮಿಟಿ ಸಭೆ ಕಳೆದ ಎರಡು ದಿನಗಳಿಂದ ನಡೆದಿದ್ದು, ಇಂದು ವಿತ್ತೀಯ ನೀತಿಯನ್ನು ಪ್ರಕಟಿಸಿದೆ. ಇದರಂತೆ, ರೆಪೋದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅಂದರೆ ಪ್ರಸ್ತುತ ಚಾಲ್ತಿಯಲ್ಲಿ ಇರುವ ಶೇಕಡ 4 ರ ರೆಪೋದರ ಹಾಗೆಯೇ ಮುಂದುವರಿಯಲಿದ್ದು, ಪರಿಷ್ಕರಣೆಗೆ ಅವಕಾಶವನ್ನು ಆರ್​ಬಿಐ ಇಟ್ಟುಕೊಂಡಿದೆ. ರಿವರ್ಸ್​ ರೆಪೋದರವೂ ಸ್ಥಿರವಾಗಿದ್ದು ಶೇಕಡ 3.35 ದರ ಮುಂದುವರಿಯಲಿದೆ. ಆರ್​ಬಿಐ ರೆಪೋದರವನ್ನು ಕಳೆದ ಫೆಬ್ರವರಿಯಿಂದ ಈಚೆಗೆ 115 ಮೂಲಾಂಶ ಕಡಿಮೆಗೊಳಿಸಿದೆ.

ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ವಿಷಯವನ್ನು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ಇದುವರೆಗೆ 250 ಮೂಲಾಂಶ ರೆಪೋ ದರ ಇಳಿಕೆ ಮಾಡಿದ್ದರಿಂದ ಹಣಕಾಸು ವ್ಯವಸ್ಥೆಯಲ್ಲಿ ಬಡ್ಡಿದರವೂ ಸಾಕಷ್ಟು ಕಡಿಮೆಯಾಗಿದೆ. ಸಾಲ ಪಡೆಯುವವರ ಪ್ರಮಾಣ ಕಳೆದ ಹತ್ತುವರ್ಷದ ಅವಧಿಗೆ ಹೋಲಿಸಿದರೆ ಶೇಕಡ 10 ಇಳಿಕೆ ಆಗಿದೆ. ಆರ್ಥಿಕ ಸ್ಥಿತಿಗತಿ ನೋಡಿಕೊಂಡು ನೀತಿ ಪರಿಷ್ಕರಣೆಗೆ ಅವಕಾಶ ಇದೆ ಎಂದು ಹೇಳಿದರು.

ದೇಶದ ಜಿಡಿಪಿ ಬೆಳವಣಿಗೆ ದರವು ಈ ಹಣಕಾಸು ವರ್ಷದ ಅವಧಿಯಲ್ಲಿ ನೆಗೆಟಿವ್ ವಲಯದಲ್ಲಿ ಇರಲಿದೆ. ಹಣದುಬ್ಬರ ಪ್ರಮಾಣ ಸದ್ಯ ಹೆಚ್ಚಾಗಿರಲಿದ್ದು, ಈ ವರ್ಷಾಂತ್ಯದ ವೇಳೆಗೆ ಸಹಜಸ್ಥಿತಿಗೆ ಬರಲಿದೆ. ಹಣಕಾಸು ವಲಯದ ಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರ್​ಬಿಐ ಗಮನಹರಿಸಿದೆ ಮತ್ತು ಬೆಳವಣಿಗೆಯನ್ನು ಬೆಂಬಲಿಸುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ದಾಸ್ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net