ಸತತ ನಾಲ್ಕನೇ ಬಾರಿ ರೆಪೋ ದರ ಏರಿಸಿದ RBI: ಬ್ಯಾಂಕ್​ ಸಾಲಗಾರರಿಗೆ ಇಎಂಐ ಮತ್ತಷ್ಟು ದುಬಾರಿ

RBI
Published on

ನವದೆಹಲಿ: ಸತತ ನಾಲ್ಕನೇ ಬಾರಿಗೆ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ತನ್ನ ರೆಪೋ ದರವನ್ನು ಏರಿಕೆ ಮಾಡಿದೆ. ಶುಕ್ರವಾರ (ಸೆ.30) 50 ಮೂಲ ಅಂಶಗಳ ಏರಿಕೆಯೊಂದಿಗೆ ಶೇ. 5.90ಕ್ಕೆ ರೆಪೋ ದರವನ್ನು ಆರ್​ಬಿಐ ಹೆಚ್ಚಳ ಮಾಡಿದೆ.

ರೆಪೋ ದರ ಏರಿಕೆಯಿಂದ ಗೃಹ, ವಾಹನ ಸಾಲಗಳ ಬ್ಯಾಂಕ್​ಗಳ ಇಎಂಐ ಮೊತ್ತ ಮತ್ತಷ್ಟು ದುಬಾರಿಯಾಗಲಿದ್ದು, ಜನ ಸಾಮಾನ್ಯರ ಜೇಬಿಗೆ ಹೊರೆಯಾಗಲಿದೆ. ಆದರೆ, ನಿಶ್ಚಿತ ಠೇವಣಿ ಇರಿಸುವವರಿಗೆ ಕೊಂಚ ಪ್ರಯೋಜನವಾಗಲಿದೆ.

ಪ್ರಸ್ತುತ ಹಣಕಾಸು ವರ್ಷದಲ್ಲಿ ನಾಲ್ಕನೇ ಬಾರಿಗೆ ರೆಪೋ ದರ ಏರಿಕೆಯಾಗಿದೆ. ಆರ್​ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ)ಯ ಮೂರು ದಿನಗಳ ಸಭೆಯ ಬಳಿಕ ರೆಪೋ ದರ ಏರಿಕೆ ನಿರ್ಧಾರವನ್ನು ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್ ಶುಕ್ರವಾರ ಪ್ರಕಟಿಸಿದ್ದಾರೆ. ಆರ್ಥಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಹಣದುಬ್ಬರವನ್ನು ಗುರಿಯೊಳಗೆ ಇರಿಸಿಕೊಳ್ಳುವತ್ತ ಗಮನಹರಿಸಲು ಎಂಪಿಸಿ ನಿರ್ಧರಿಸಿದೆ ಎಂದು ಶಕ್ತಿಕಾಂತ್ ದಾಸ್​ ಹೇಳಿದ್ದಾರೆ.

ಕಳೆದ ಆಗಸ್ಟ್​ನಲ್ಲಿ 50 ಮೂಲ ಅಂಶಗಳ ಏರಿಕೆಯೊಂದಿಗೆ ಶೇ. 5.40ಕ್ಕೆ ಆರ್​ಬಿಐ ರೆಪೋ ದರ ಹೆಚ್ಚಳ ಮಾಡಲಾಗಿತ್ತು. ಮೇ ತಿಂಗಳಲ್ಲಿ 40 ಮೂಲ ಅಂಶದೊಂದಿಗೆ ಶೇ 4.40 ರಷ್ಟು ಹೆಚ್ಚಿಸಿತ್ತು. ನಂತರ ಜೂನ್‌ನಲ್ಲಿ 50 ಮೂಲ ಅಂಶಗಳೊಂದಿಗೆ ಶೇ. 4.90 ಕ್ಕೆ ಏರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net