

ನವದೆಹಲಿ: ಕೋವಿಡ್ 19 ಸೋಂಕು ಮತ್ತು ಲಾಕ್ಡೌನ್ಗಳು ಜನಜೀವನದ ಮೇಲೆ ಅಗಾಧವಾದ ಪರಿಣಾಮ ಬೀರಿದೆ. ಆರೋಗ್ಯ ಸಂಕಷ್ಟವನ್ನಷ್ಟೇ ಅಲ್ಲ, ಆರ್ಥಿಕ ಸಂಕಷ್ಟವನ್ನೂ ತಂದೊಡ್ಡಿದೆ. ಇಂತಹ ಸನ್ನಿವೇಶದಲ್ಲಿ ಮೋದಿ ಸರ್ಕಾರ ಹೊಸದೊಂದು ಸಾಲ ಯೋಜನೆಯನ್ನು ರೂಪಿಸಿದೆ. ಈ ಸಾಲ ಯೋಜನೆಯ ಫಲಾನುಭವಿಗಳು ಬೀದಿಬದಿಯ ವ್ಯಾಪಾರಿಗಳು.
ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಇವಿಷ್ಟು ನಿಮ್ಮ ಬಳಿ ಇರಲಿ 1ಅಗತ್ಯ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳಿ - ದಾಖಲೆಗಳ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ 2 ನಿಮ್ಮ ಮೊಬೈಲ್ ನಂಬರ್ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದನ್ನು ಖಾತರಿ ಪಡಿಸಿಕೊಳ್ಳಿ. 3 ಸಾಲ ಪಡೆಯುವುದಕ್ಕೆ ನೀವು ಅರ್ಹರೇ ಎಂಬುದನ್ನು ಅರಿಯಲ್ಲಿ ಇಲ್ಲಿ ಕ್ಲಿಕ್ಕಿಸಿ
ಪಿಎಂ ಸ್ಟ್ರೀಟ್ ವೆಂಡರ್ಸ್ ಆತ್ಮನಿರ್ಭರ್ ನಿಧಿ (PM SVANidhi) ಎಂಬುದು ಸಾಲ ಯೋಜನೆಯ ಹೆಸರು. 2020ರ ಜೂನ್ 1ರಂದು ಚಾಲ್ತಿಗೆ ಬಂದ ಈ ಯೋಜನೆ ಪ್ರಧಾನ ಮಂತ್ರಿ ಘೋಷಿಸಿದ ಆತ್ಮನಿರ್ಭರ ಪ್ಯಾಕೇಜ್ನ ಭಾಗವಾಗಿದೆ. ಕೇಂದ್ರ ಸರ್ಕಾರ ಜುಲೈ 17ರಂದು ಇದರ ಮೊಬೈಲ್ ಆ್ಯಪ್ ಕೂಡ ಬಿಡುಗಡೆ ಮಾಡಿದೆ. 2020ರ ಮಾರ್ಚ್ 24 ಅಥವ ಅದಕ್ಕೂ ಮೊದಲೇ ಬೀದಿ ಬದಿ ವ್ಯಾಪಾರದಲ್ಲಿ ತೊಡಗಿದ್ದ 50 ಲಕ್ಷಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಈ ಯೋಜನೆಯ ಫಲಾನುಭವಿಗಳು. ಈ ಯೋಜನೆಯ ಪ್ರಕಾರ ಫಲಾನುಭವಿಗಳಿಗೆ 10,000 ರೂಪಾಯಿ ತನಕ ಕೆಲಸದ ಬಂಡವಾಳ ರೂಪದಲ್ಲಿ ಸಾಲ ಸಿಗಲಿದೆ. ಇದನ್ನು ಒಂದು ವರ್ಷದ ಅವಧಿಯಲ್ಲಿ ಮಾಸಿಕ ಕಂತುಗಳ ರೂಪದಲ್ಲಿ ಮರುಪಾವತಿಸಬೇಕು.
ಬೀದಿಬದಿ ವ್ಯಾಪರಸ್ಥರ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? 1 www.pmsvanidhi.mohua.gov.in ವೆಬ್ಸೈಟ್ ಓಪನ್ ಮಾಡಿ ಅಥವಾ ಇಲ್ಲಿ ಕ್ಲಿಕ್ಕಿಸಿ 2 ಅಪ್ಲೈ ಫಾರ್ ಎ ಲೋನ್ ಎಂದು ಬರೆದುಕೊಂಡಿರುವುದರ ಮೇಲೆ ಕ್ಲಿಕ್ ಮಾಡಿ 3 ನಿಮ್ಮ ಮೊಬೈಲ್ ನಂಬರ್ ಮತ್ತು ಕ್ಯಾಪ್ಚಾವನ್ನು ದಾಖಲಿಸಿ. 4 ಕೆಟಗರಿ ಆಯ್ಕೆ ಮಾಡಿಕೊಂಡು ಅಗತ್ಯ ವಿವರಗಳನ್ನು ಭರ್ತಿ ಮಾಡಿ 5 ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
ಸರಿಯಾದ ಸಮಯದಲ್ಲಿ ಅಥವಾ ಅದಕ್ಕೂ ಮುಂಚಿತವಾಗಿಯೇ ಸಾಲ ಮರುಪಾವತಿ ಮಾಡಿದರೆ ನೇರ ನಗದು ವರ್ಗಾವಣೆ ಯೋಜನೆ ಮೂಲಕ ಫಲಾನುಭವಿಯ ಬ್ಯಾಂಕ್ ಖಾತೆಗೆ ಶೇಕಡ 7 ವಾರ್ಷಿಕ ಬಡ್ಡಿಯ ಸಹಾಯಧನ ಜಮೆಯಾಗಲಿದೆ. ಮುಂಚಿತವಾಗಿ ಸಾಲ ಮರುಪಾವತಿ ಮಾಡಿದರೆ ಯಾವುದೇ ಶುಲ್ಕ ಅಥವಾ ದಂಡ ಪಾವತಿಸಬೇಕಾಗಿಲ್ಲ. ಡಿಜಿಟಲ್ ವಹಿವಾಟು ನಡೆಸಿದರೆ ಇದೇ ಯೋಜನೆಯಲ್ಲಿ ಫಲಾನುಭವಿಯ ಖಾತೆಗೆ ಪ್ರತಿ ತಿಂಗಳೂ 100 ರೂಪಾಯಿ ತನಕ ಕ್ಯಾಶ್ ಬ್ಯಾಕ್ ಇನ್ಸೆಂಟಿವ್ ಲಭ್ಯವಾಗುತ್ತದೆ.
ಅರ್ಹತೆ ಏನು: ಬೀದಿಬದಿ ವ್ಯಾಪಾರಿಗಳ ಕಾಯ್ದೆ 2014ರ ಪ್ರಕಾರ ಬೀದಿಬದಿ ವ್ಯಾಪಾರಸ್ಥರು ಸ್ಥಳೀಯಾಡಳಿತದ ಪರವಾನಗಿ ಅಥವಾಗ ಗುರುತಿನ ಚೀಟಿ ಹೊಂದಿರಬೇಕು. ಅದರಲ್ಲಿ ಸರ್ವೇ ರೆಫರೆನ್ಸ್ ನಂಬರ್ ಇದ್ದು, ಅದನ್ನು ಸಾಲದ ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ.