

ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಸತತ ಮೂರನೆ ದಿನವೂ ಏರಿಕೆಯಾಗಿದೆ. ದೆಹಲಿಯಲ್ಲಿ ಭಾನುವಾರ ಪೆಟ್ರೋಲ್ ದರ ಲೀಟರಿಗೆ 8 ಪೈಸೆ ಮತ್ತು ಡೀಸೆಲ್ ದರ 19 ಪೈಸೆ ಹೆಚ್ಚಳವಾಗಿದೆ. ಇದರೊಂದಿಗೆ ಎರಡು ತಿಂಗಳ ನಂತರ ಸತತ ಮೂರು ದಿನಗಳಲ್ಲಿ ಒಟ್ಟು ಪೆಟ್ರೋಲ್ ಬೆಲೆ ಲೀಟರಿಗೆ 49 ಪೈಸೆ ಹೆಚ್ಚಳವಾದರೆ, ಡೀಸೆಲ್ ದರ ಲೀಟರಿಗೆ 71 ಪೈಸೆ ಹೆಚ್ಚಾಗಿದೆ.
ತೈಲ ಕಂಪನಿಗಳ ಡೇಟಾ ಪ್ರಕಾರ, ದೆಹಲಿಯಲ್ಲಿ ಭಾನುವಾರ ಪೆಟ್ರೋಲ್ ದರ ಲೀಟರಿಗೆ 81.46 ರೂಪಾಯಿ ಆಗಿದೆ. ನಿನ್ನೆ 81.38 ರೂಪಾಯಿ ಇತ್ತು. ಡೀಸೆಲ್ ದರ 70.88 ರೂಪಾಯಿಯಿಂದ 71.07 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ 88.09 ರೂಪಾಯಿಯಿಂದ 88.16 ರೂಪಾಯಿಗೂ, ಡೀಸೆಲ್ ದರ 77.34 ರೂಪಾಯಿಯಿಂದ 77.54 ರೂಪಾಯಿಗೂ ಏರಿಕೆಯಾಗಿದೆ.
ರಾಜ್ಯದಲ್ಲಿ ನಾಲ್ಕನೇ ದಿನವೂ ಏರಿಕೆ: ಬೆಂಗಳೂರಿನಲ್ಲಿ ಪೆಟ್ರೋಲ್ ದರ ನಿನ್ನೆ 84.10 ರೂಪಾಯಿ ಇದ್ದದ್ದು ಇಂದು 84.18 ರೂಪಾಯಿ ಆಗಿದೆ. ಡೀಸೆಲ್ ದರ 75.14 ರೂಪಾಯಿ ಇದ್ದದ್ದು 74.34 ರೂಪಾಯಿ ಆಗಿದೆ. ಒಟ್ಟು ನಾಲ್ಕು ದಿನಗಳ ಅವಧಿಯಲ್ಲಿ ಪೆಟ್ರೋಲ್ ದರ 49 ಪೈಸೆ, ಡೀಸೆಲ್ ದರ 71 ಪೈಸೆ ಪ್ರತಿ ಲೀಟರ್ ಮೇಲೆ ಹೆಚ್ಚಳವಾಗಿದೆ.