

ನವದೆಹಲಿ: ವಾರ್ಷಿಕ 50 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುವ ವ್ಯಾಪಾರಿ/ಉದ್ದಿಮೆಗಳು ಡಿಜಿಟಲ್ ಪಾವತಿ ಬಳಕೆ ಮಾಡದಿದ್ದರೆ ಫೆ. 1ರಿಂದ ದಿನಕ್ಕೆ 5 ಸಾವಿರ ರೂ. ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ. ನಗದು ರಹಿತ ಆರ್ಥಿಕತೆಗೆ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಹಕರು ಡಿಜಿಟಲ್ ಮಾಧ್ಯಮದ ಮೂಲಕ ಪಾವತಿಸಲು ಬಯಸಿದರೆ ಅದನ್ನು ನಿರಾಕರಿಸುವ ಉದ್ದಿಮೆಗಳು ದಂಡ ತೆರಬೇಕಾಗುತ್ತದೆ. ವಾರ್ಷಿಕ 50 ಕೋಟಿ ರೂ.ವಹಿವಾಟು ನಡೆಸುವ ವ್ಯಾಪಾರಿಗಳು ಮತ್ತು ಉದ್ದಿಮೆಗಳು ಜನವರಿ 31ರೊಳಗೆ ಡಿಜಿಟಲ್ ಪಾವತಿ ಸ್ವೀಕರಿಸುವ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಸುತ್ತೋಲೆ ತಿಳಿಸಿದೆ.
ಹಣಕಾಸು ಕಾಯ್ದೆಯ 271ಡಿಬಿ ಕಲಂ ಅನ್ವಯ ದಿನಕ್ಕೆ 5 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ ಎಂದು ಸಿಬಿಡಿಟಿ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ. ಡಿಜಿಟಲ್ ಮಾಧ್ಯಮಗಳಾದ ರುಪೇ, ಯುಪಿಐ ಮೂಲಕ ಸ್ವೀಕರಿಸುವ ಪಾವತಿಗಳಿಗೆ ವ್ಯಾಪಾರಿಗಳು ಬ್ಯಾಂಕ್ಗಳಿಗೆ ಕಟ್ಟಬೇಕಾಗಿದ್ದ ವಹಿವಾಟು ಶುಲ್ಕವನ್ನು (ಎಂಡಿಆರ್) ಸರ್ಕಾರ ರದ್ದು ಮಾಡಿದೆ. ಬಹುತೇಕ ಈ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತಿತ್ತು.