ಪ್ಯಾರಾಸಿಟಮಲ್ ಬೆಲೆಯಲ್ಲಿ ಶೇ. 40 ಜಿಗಿತ: ಕೊರೊನಾ ವೈರಸ್ ಪರಿಣಾಮ ಕಚ್ಚಾ ಸಾಮಗ್ರಿ ಆಮದು ಬಹುತೇಕ ಸ್ಥಗಿತ

Tablets
Published on

ನವದೆಹಲಿ: ಚೀನಾದಲ್ಲಿ ಮಾರಕ ಕರೊನಾ ವೈರಸ್ ಹಾವಳಿಯಿಂದಾಗಿ ಕಚ್ಚಾವಸ್ತುಗಳ ಸರಬರಾಜಿನಲ್ಲಿ ಏರು ಪೇರಾಗಿರುವುದರಿಂದ ಭಾರತದಲ್ಲಿ ಇದರ ಪರಿಣಾಮ ಗೋಚರವಾಗುತ್ತಿದೆ. ಔಷಧ ತಯಾರಿಕೆಯಿಂದ ಹಿಡಿದು ಮೊಬೈಲ್ ಫೋನ್ ವರೆಗೆ ಹಲವು ಕ್ಷೇತ್ರಗಳ ಮೇಲೆ ಇದು ಪರಿಣಾಮ ಬೀರಿದೆ.

ಭಾರತದಲ್ಲಿ ನೋವು ನಿವಾರಕವಾಗಿ ಬಳಸಲಾಗುವ ಪ್ಯಾರಾಸಿಟಮಲ್ ಔಷಧ ಬೆಲೆಗಳು ಈಗಾಗಲೇ ಶೇ. 40 ಏರಿಕೆಯಾಗಿದೆ. ವಿವಿಧ ಬ್ಯಾಕ್ಟೀರಿಯಾ ಸೋಂಕುಗಳ ಚಿಕಿತ್ಸೆಗೆ ಬಳಸುವ ಆಂಟಿಬಯೊಟಿಕ್ ಆದ ಅಜಿತ್ರೊಮೈಸಿನ್ ಬೆಲೆ ಶೇ. 70 ಹೆಚ್ಚಾಗಿದೆ. ಮುಂದಿನ ತಿಂಗಳ ಮೊದಲ ವಾರದೊಳಗೆ ಸರಬರಾಜು ಪುನಾರಂಭವಾಗದಿದ್ದರೆ ಔಷಧ ತಯಾರಿಕೆ ಉದ್ಯಮ ತೀವ್ರ ಕೊರತೆ ಎದುರಿಸುವ ಸಂಭವವಿದೆ. ಸೋಂಕಿನಿಂದ ತತ್ತರಿಸಿರುವ ಚೀನಾದಲ್ಲಿ ಉತ್ಪಾದನೆ ಪ್ರಕ್ರಿಯೆ ನಿಧಾನಗೊಂಡಿದೆ. ಜನರು ದೇಶಕ್ಕೆ ಬರುವುದು ಹಾಗೂ ಹೊರಗೆ ಹೋಗುವುದರ ಮೇಲೆ ನಿರ್ಬಂಧ ವಿಧಿಸಿರುವುದರಿಂದ ಔಷಧ ವಲಯದ ಮೇಲೂ ಪರಿಣಾಮ ಬೀರಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಬಹಳಷ್ಟು ಔಷಧಗಳ ಬೆಲೆ ಗಗನಮುಖಿಯಾಗಬಹುದು ಎನ್ನಲಾಗಿದೆ.

ಮೊಬೈಲ್ ಉತ್ಪಾದನೆಗೆ ಹೊಡೆತ: ಚೀನಾದಲ್ಲಿ ಉತ್ಪಾದನಾ ಪ್ರಕ್ರಿಯೆ ನಿಧಾನಗೊಂಡಿರುವುದರಿಂದ ಭಾರತದ ಕೆಲವು ಮೊಬೈಲ್ ತಯಾರಿಕೆ ಕಂಪನಿಗಳು ಸಮಸ್ಯೆ ಎದುರಿಸುತ್ತಿವೆ ಎಂದು ಭಾರತ ಸೆಲ್ಯುಲರ್ ಮತ್ತು ಇಲೆಕ್ಟ್ರಾನಿಕ್ಸ್ ಸಂಘದ ಅಧ್ಯಕ್ಷ ಪಂಕಜ್ ಮಹೀಂದ್ರೂ ಹೇಳಿದ್ದಾರೆ. ಕರೊನಾ ಪರಿಣಾಮ ಈಗಾಗಲೇ ಕಾಣುತ್ತಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ಉತ್ಪಾದನೆಯನ್ನೇ ನಿಲ್ಲಿಸಬೇಕಾಗಬಹುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net