

ಮುಂಬೈ: ಕರೊನಾ ಸೋಂಕು ವ್ಯಾಪಕವಾಗುತ್ತಿದ್ದಂತೆ ಲಾಕ್ಡೌನ್ ಘೋಷಣೆ ಆದ ನಂತರದಲ್ಲಿ ಉಂಟಾದ ಆರ್ಥಿಕ ಹಿಂಜರಿತಕ್ಕೆ ಉತ್ತೇಜನ ನೀಡುವ ಸಲುವಾಗಿ ಕರೊನಾ ಸ್ಕೀಮ್ ಜಾರಿಗೊಳಿಸಲಾಗಿದೆ. ಇದರಂತೆ, 2020ರ ಮಾರ್ಚ್ 1ರ ತನಕ ಯಾರು ಯಾವುದೇ ಸುಸ್ಥಿ ಇಲ್ಲದೆ ನಿರಂತರವಾಗಿ ಸಾಲ ಮರುಪಾವತಿ ಮಾಡುತ್ತ ಬಂದಿದ್ದಾರೋ ಅವರಿಗಷ್ಟೇ ಕರೊನಾ ಸ್ಕೀಮ್ ಬೆನಿಫಿಟ್ ಸಿಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸ್ಪಷ್ಟಪಡಿಸಿದೆ.
ಆರ್ಬಿಐ ತನ್ನ ಆಗಸ್ಟ್ 6ನೇ ತಾರೀಕಿನ ಸುತ್ತೋಲೆಯ ವಿಚಾರದಲ್ಲಿ ನಿನ್ನೆ ರಾತ್ರಿ ಈ ಸ್ಪಷ್ಟೀಕರಣ ನೀಡಿದೆ. 2020ರ ಮಾರ್ಚ್ 1ಕ್ಕೆ ಅನ್ವಯವಾಗುವಂತೆ ಮೂವತ್ತು ದಿನಕ್ಕಿಂತ ಹೆಚ್ಚು ದಿನ ಸಾಲ ಮರುಪಾವತಿಸದೇ ಉಳಿಸಿಕೊಂಡ ಸಾಲಗಳನ್ನು ಕರೊನಾ ಸ್ಕೀಮ್ನಲ್ಲಿ ಸಾಲ ಪುನಾರಚನೆಗೆ ಅವಕಾಶ ಇರುವುದಿಲ್ಲ. ಅಂತಹ ಸಾಲಗಳನ್ನು 2019ರ ಜೂನ್ 7ರ ಫ್ರೇಮ್ವರ್ಕ್ ಪ್ರಕಾರ ಪುನಾರಚನೆ ಮಾಡಿಕೊಳ್ಳಬಹುದು ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
ಇದೇ ರೀತಿ, ಬೇರೆ ಬೇರೆ ಕೆಟಗರಿಯ ಸಾಲಗಳಿಗೆ ಅವುಗಳಿಗೆ ಅನ್ವಯವಾಗುವ ನಿಯಮ ಪ್ರಕಾರ ಪುನಾರಚಣೆಗೆ ಅವಕಾಶವಿದೆ. ಎಲ್ಲ ಸಾಲಗಳನ್ನೂ ಕರೊನಾ ಸ್ಕೀಮ್ ಅಧೀನ ತರಲಾಗದು. ಬೃಹತ್ ಪ್ರಮಾಣದ ಸಾಲಗಳು ಅಂದರೆ ವಿವಿಧ ಬ್ಯಾಂಕ್ಗಳಿಂದ ಒಬ್ಬನೇ ವ್ಯಕ್ತಿ, ಸಂಸ್ಥೆ ಸಾಲ ಪಡೆದಿದ್ದರೆ, ಅವುಗಳ ಲೆಕ್ಕಾಚಾರವನ್ನು ಎಲ್ಲ ಬ್ಯಾಂಕುಗಳು ಸೇರಿ ಇಂಟರ್ ಕ್ರೆಡಿಟರ್ ಅಗ್ರಿಮೆಂಟ್ ಮಾಡಿಕೊಂಡು ನಡೆಸಬೇಕು ಎಂದು ಆರ್ಬಿಐ ಹೇಳಿದೆ. (ಏಜೆನ್ಸೀಸ್)