ಈರುಳ್ಳಿ ದರದಲ್ಲಿ ತುಸು ಏರಿಕೆ

onion
Published on

ಬೆಂಗಳೂರು : ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ದರ ತುಸು ಏರಿಕೆ ಕಂಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತಮ ಗುಣಮಟ್ಟದ ಈರುಳ್ಳಿ ಮಾರುಕಟ್ಟೆಯಲ್ಲಿ ಆವಕವಾಗದೆ ಸಮಸ್ಯೆಯುಂಟಾಗಿದೆ.

ಉತ್ತಮ ಗುಣಮಟ್ಟದ ಈರುಳ್ಳಿ ಕೇವಲ ಶೇ.10 ಮಾತ್ರ ಮಾರುಕಟ್ಟೆಗೆ ಆವಕವಾಗುತ್ತಿದ್ದು, ಮಧ್ಯಮ ಗುಣಮಟ್ಟದ ಈರುಳ್ಳಿ ಶೇ.90 ರಷ್ಟು ಗುರುವಾರ ಆವಕವಾಗಿದೆ. 250 ಟ್ರಕ್‌ಗಳಲ್ಲಿ ಯಶವಂತಪುರ ಮಾರುಕಟ್ಟೆಗೆ 36,726 ಚೀಲ (50ಕೆ.ಜಿ) ಮತ್ತು ದಾಸನಪುರ ಉಪಮಾರುಕಟ್ಟೆಗೆ 13,659 ಚೀಲ ಪೂರೈಕೆಯಾಗಿದೆ.

ಸಗಟು ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟ ಈರುಳ್ಳಿ 2,700 ರಿಂದ 2,800 ರೂ.ಗೆ (100 ಕೆ.ಜಿ.) ಮತ್ತು ಮಧ್ಯಮ ಗುಣಮಟ್ಟದ ಈರುಳ್ಳಿ 1,500 ರಿಂದ 2,000 ರೂ.ಗಳಿಗೆ (100 ಕೆ.ಜಿ) ಮಾರಾಟವಾಗಿದೆ. ನಗರದ ಬಹುತೇಕ ಚಿಲ್ಲರೆ ವ್ಯಾಪಾರಸ್ಥರು ಉತ್ತಮ ಗುಣಮಟ್ಟದ ಈರುಳ್ಳಿಯನ್ನು ಕೆ.ಜಿಗೆ 40 ರೂ.ಗಳಂತೆ ಮಾರಾಟ ಮಾಡುತ್ತಿದ್ದಾರೆ. ಇದು ಗ್ರಾಹಕರಿಗೆ ತುಸು ಹೊರೆಯಾಗಿ ಪರಿಣಮಿಸಿದೆ ಎಂದು ಯಶವಂತಪುರ ಸಗಟು ಈರುಳ್ಳಿ ವರ್ತಕರ ರವಿಶಂಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net