

ನವದೆಹಲಿ: ವಿದೇಶಿ ಹೂಡಿಕೆ ರಕ್ಷಣೆಗೆ ಕೇಂದ್ರ ಸರ್ಕಾರ ಹೊಸ ಕಾಯ್ದೆ ರೂಪಿಸಲು ಚಿಂತನೆ ನಡೆಸಿದೆ. ಹೂಡಿಕೆ ಒಪ್ಪಂದದಲ್ಲಿನ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವ ಮೂಲಕ ಹೊರದೇಶಗಳಿಂದ ಹೆಚ್ಚಿನ ಬಂಡವಾಳ ಹರಿದುಬರುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಣಕಾಸು ಸಚಿವಾಲಯ 40 ಪುಟಗಳ ಕರಡನ್ನು ಸಿದ್ಧಪಡಿಸಿದೆ ಎನ್ನಲಾಗಿದೆ.
ವಿವಾದ ಇತ್ಯರ್ಥಕ್ಕೆ ಮಧ್ಯಸ್ಥಿಕೆದಾರರ ನೇಮಕ ಮತ್ತು ತ್ವರಿತಗತಿ ನ್ಯಾಯಾಲಯಗಳ ಸ್ಥಾಪಿಸುವ ಪ್ರಸ್ತಾವವನ್ನು ಹಣಕಾಸು ಸಚಿವಾಲಯ ಮಾಡಿದೆ. ಈ ಕರಡಿನ ಬಗ್ಗೆ ವಿವಿಧ ಸಚಿವಾಲಯಗಳ ಅಭಿಪ್ರಾಯ ಪಡೆದುಕೊಂಡ ನಂತರ ಅಗತ್ಯ ಟಿಪ್ಪಣಿಯೊಂದಿಗೆ ಮಸೂದೆಯನ್ನು ಪ್ರಸ್ತಾಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಕೆಲವು ರಾಜ್ಯಗಳು ಒಪ್ಪಂದವಾಗಿರುವ ಯೋಜನೆಗಳನ್ನು ಮರುಪರಿಶೀಲನೆ ಮತ್ತು ರದ್ದು ಮಾಡುವುದಾಗಿ ಬೆದರಿಸುತ್ತಿವೆ. ಇದರಿಂದ ವಿದೇಶಿ ಹೂಡಿಕೆದಾರರಲ್ಲಿ ಆತಂಕ ಮನೆ ಮಾಡಿದೆ. ಇದನ್ನು ದೂರ ಮಾಡಲು ಇಂಥ ಸುಧಾರಣೆಗಳು ಅವಶ್ಯಕ ಎಂದು ಹಣಕಾಸು ಸಚಿವಾಲಯ ಹೇಳಿದೆ.