ಮೈಸೂರು- ಚೆನ್ನೈ ಹೈಸ್ಪೀಡ್ ರೈಲು ಯೋಜನೆಗೆ ಚಾಲನೆ - 450 ಕಿ.ಮೀ. ಮಾರ್ಗದಲ್ಲಿ ಅನುಷ್ಠಾನ

High speed train
Published on

ಬೆಂಗಳೂರು : ಮೈಸೂರು- ಬೆಂಗಳೂರು- ಚೆನ್ನೈ ಹೈಸ್ಪೀಡ್ ರೈಲು ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗಿದ್ದು, ಅದಕ್ಕೆ ಪೂರ್ವಭಾವಿಯಾಗಿ ಕಾಮಗಾರಿ ನಡೆಯಲಿರುವ ಮಾರ್ಗದ ಸಮೀಕ್ಷೆ ನಡೆಸಲು ರಾಷ್ಟ್ರೀಯ ಹೈಸ್ಪೀಡ್ ರೈಲ್ ಸಂಸ್ಥೆ ಮುಂದಾಗಿದೆ. ರೈಲು ಸಂಪರ್ಕ ಜಾಲವನ್ನು ಸದೃಢವಾಗಿಸುವ ಸಲುವಾಗಿ ದೇಶದ 7 ಮಾರ್ಗಗಳಲ್ಲಿ ಹೈಸ್ಪೀಡ್ ರೈಲು ಕಾರಿಡಾರ್ ನಿರ್ವಿುಸಲಾಗುತ್ತಿದೆ. ಅವುಗಳಲ್ಲಿ ಬೆಂಗಳೂರು ಮೂಲಕ ಹಾದುಹೋಗುವ 450 ಕಿ.ಮೀ. ಮೈಸೂರು- ಚೆನ್ನೈ ಮಾರ್ಗವೂ ಸೇರಿದೆ. ಇತ್ತೀಚೆಗಷ್ಟೇ ಯೋಜನೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಮೊದಲ ಹಂತವಾಗಿ ಯೋಜನೆ ಜಾರಿಯಾಗುವ ಮಾರ್ಗದಲ್ಲಿ ಸರ್ವೆ ನಡೆಸಲು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅದರಲ್ಲಿ ಟೆಲಿಕಾಂ ಟವರ್, ವಿದ್ಯುತ್ ತಂತಿ, ಗ್ಯಾಸ್ ಪೈಪ್​ಲೈನ್, ಮೇಲ್ಸೇತುವೆ, ಕೆಳರಸ್ತೆ ಸೇರಿ ಹಲವು ವಿಷಯಗಳ ಅಧ್ಯಯನ ನಡೆಸಲಾಗುತ್ತದೆ. ಹೈಸ್ಪೀಡ್ ರೈಲು ಯೋಜನೆಗೆ ಅಗತ್ಯವಿರುವ ಭೂಸ್ವಾಧೀನ ಹೊಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೀಡುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಸದ್ಯ ರಾಷ್ಟ್ರೀಯ ಹೈ ಸ್ಪೀಡ್ ರೈಲ್ ಸಂಸ್ಥೆ ಕರೆದಿರುವ ಟೆಂಡರ್ ಪಡೆಯುವವರು ಯೋಜನೆಗೆ ಅಗತ್ಯವಿರುವ ಭೂಮಿಯ ಬಗ್ಗೆಯೂ ಮಾಹಿತಿ ನೀಡಬೇಕಿದೆ. ಅದನ್ನಾಧರಿಸಿ ಭೂಸ್ವಾಧೀನ ಮಾಡುವ ಕುರಿತಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಕೇವಲ ಒಂದೂವರೆ ಗಂಟೆ ಪ್ರಯಾಣ : ಹೈಸ್ಪೀಡ್ ರೈಲು ಮಾರ್ಗದಲ್ಲಿ ಪ್ರತಿ ಗಂಟೆಗೆ ಗರಿಷ್ಠ 320 ಕಿ.ಮೀ. ವೇಗದಲ್ಲಿ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಹೀಗಾಗಿ ಹೈಸ್ಪೀಡ್ ರೈಲಿನ ಮೂಲಕ ಮೈಸೂರಿನಿಂದ ಬೆಂಗಳೂರಿಗೆ 30ರಿಂದ 45 ನಿಮಿಷಗಳಲ್ಲಿ ತಲುಪಲಿದ್ದು, ಅಂದಾಜು 1 ಗಂಟೆ 30 ನಿಮಿಷಗಳಲ್ಲಿ ಚೆನ್ನೈಗೆ ತಲುಪಲಿದೆ.  ಯೋಜನೆ ಪ್ರಕಾರ ಮೈಸೂರು ಮತ್ತು ಚೆನ್ನೈ ನಡುವೆ ಕೇವಲ 9 ನಿಲ್ದಾಣಗಳಲ್ಲಿ ಹೈಸ್ಪೀಡ್ ರೈಲು ನಿಲುಗಡೆ ಇರಲಿದೆ. ಮೈಸೂರಿನಿಂದ ಹೊರಡುವ ರೈಲು ಮಂಡ್ಯ, ಚನ್ನಪಟ್ಟಣ, ಬೆಂಗಳೂರು, ಬಂಗಾರಪೇಟೆ, ಚಿತ್ತೂರು, ಅರಕೋಣಂ, ಪೋನಮಲ್ಲೆ ಮತ್ತು ಚೆನ್ನೈನಲ್ಲಿ ರೈಲು ನಿಲ್ಲಲಿದೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net