

ನವದೆಹಲಿ: ಕರೊನಾ ಸಂದರ್ಭದ ಸಾಲದ ಕಂತು ಪಾವತಿ (ಇಎಂಐ) ಮುಂದೂಡಿಕೆ ವಿನಾಯಿತಿ ಅವಧಿಯ (ಮಾರಟೋರಿಯಂ) ಚಕ್ರಬಡ್ಡಿ ಮನ್ನಾ ಕುರಿತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಇದನ್ನು ನವೆಂಬರ್ 5ರೊಳಗೆ ಜಾರಿ ಮಾಡುವಂತೆ ಸಾಲದಾತ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚಿಸಿದೆ. ಈ ಮೂಲಕ ಸಾಲಗಾರರಿಗೆ ದಸರಾ-ದೀಪಾವಳಿ ಉಡುಗೊರೆ ನೀಡಿದ್ದು, ಮಾರಟೋರಿಯಂ ಆಯ್ಕೆ ಮಾಡಿಕೊಂಡವರು ಮತ್ತು ಇಎಂಐ ಕಟ್ಟಿದವರು ಇಬ್ಬರಿಗೂ ಪ್ರಯೋಜನವಾಗಲಿದೆ.
ಈ ಉದ್ದೇಶಕ್ಕಾಗಿ ಸರ್ಕಾರ 6,500 ಕೋಟಿ ರೂಪಾಯಿಯನ್ನು ವಿನಿಯೋಗಿಸುತ್ತಿದ್ದು, ಸಾಲ ನೀಡಿದ ಸಾರ್ವಜನಿಕ ವಲಯದ ಬ್ಯಾಂಕ್, ಸಹಕಾರಿ ಬ್ಯಾಂಕ್, ಪ್ರಾದೇಶಿಕ ಬ್ಯಾಂಕ್, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿ), ವಸತಿ ಹಣಕಾಸು ಸಂಸ್ಥೆ, ಕಿರು ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಈ ಸೌಲಭ್ಯವನ್ನು ಮೊದಲು ಒದಗಿಸಿ ನಂತರ ಅದನ್ನು ಸರ್ಕಾರದಿಂದ ಮರುಪಾವತಿ (ಕ್ಲೇಮ್ ಪಡೆಯಬಹುದು ಎಂದು ಸಚಿವಾಲಯದ ಹಣಕಾಸು ಸೇವಾ ಇಲಾಖೆ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.
ಯಾರಿಗೆ ಲಾಭ : ಗೃಹ, ಶಿಕ್ಷಣ, ವಾಹನ, ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ (ಎಂಎಸ್ಎಂಇ) ಸಾಲ, ವೃತ್ತಿಪರರು ಪಡೆದ ವೈಯಕ್ತಿಕ ಸಾಲ, ಗೃಹೋಪಯೋಗಿ ವಸ್ತುಗಳ ಮೇಲಿನ ಸಾಲ, ಅನುಭೋಗ ಸಾಲ ಮತ್ತು ಮತ್ತು ಕ್ರೆಡಿಟ್ ಕಾರ್ಡ್ನ ಬಾಕಿ.