ಹಾಲು ಉತ್ಪಾದನೆ ಉತ್ತೇಜಿಸಲು ಖರೀದಿ ದರ 2 ರೂಪಾಯಿ ಹೆಚ್ಚಳ

13-klr-11 Komul
Published on

ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದಕರನ್ನು ಉತ್ತೇಜಿಸುವ ಸಲುವಾಗಿ ಕೋಚಿಮುಲ್‌ನಿಂದ ಹಾಲು ಖರೀದಿ ದರವನ್ನು ಲೀಟರ್‌ಗೆ 2ರೂ. ಹೆಚ್ಚಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರೂ ಆಗಿರುವ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಕೋಚಿಮುಲ್ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಲು ಸಂಗ್ರಹ ಕಡಿಮೆಯಾಗಿದ್ದರಿಂದ ಫೆ.16ರಿಂದ ಅನ್ವಯವಾಗುವಂತೆ 2ರೂ. ಹೆಚ್ಚುವರಿ ನೀಡಲಾಗುವುದು. ಮುಂದೆ ಪರಿಸ್ಥಿತಿ ನೋಡಿಕೊಂಡು ದರ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಗುಣಮಟ್ಟದ ಹಾಲು ಶೇಖರಣೆ ಹೆಚ್ಚಿಸಲು ಉತ್ತೇಜಿಸುವ ಸಲುವಾಗಿ ಶೇ.3.5 ಫ್ಯಾಟ್ ಮತ್ತು ಶೇ.8.5 ಎಸ್‌ಎನ್‌ಎಫ್ ಆಧಾರದ ಮೇರೆಗೆ ಉತ್ಪಾದಕರಿಗೆ ಲೀಟರ್‌ಗೆ 26 ರೂ. ಪಾವತಿಸಲಾಗುತ್ತಿದ್ದು, ಇದೇ ಮಾನದಂಡ ಅನುಸರಿಸಲಾಗುವುದು ಎಂದರು.

ಹಸಿರು ಮೇವಿನ ಕೊರತೆ ನೀಗಿಸಲು ಉಚಿತವಾಗಿ ಮೇವಿನ ಬೀಜ ಹಾಗೂ ಎಕರೆಗೆ 3,000 ರೂ. ಸಹಾಯಧನ ನೀಡಲಾಗುವುದು. ಮೇವು ಬೀಜ ಪಡೆದುಕೊಳ್ಳುವವರು ಕಡ್ಡಾಯವಾಗಿ ಸಂಘದ ಷೇರುದಾರರಾಗಿರಬೇಕು ಎಂದರು.

ಹಾಲು ಉತ್ಪಾದನೆ ಮಾಡಲು ಆಸಕ್ತಿಯುಳ್ಳ ಅರ್ಹ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಿ ಒಕ್ಕೂಟದ ಸಹಭಾಗಿತ್ವದಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ಕಾಯಕ ಯೋಜನೆಯಡಿ ಶೂನ್ಯಬಡ್ಡಿ ದರದಲ್ಲಿ 75,000 ರೂ.ನಿಂದ 1 ಲಕ್ಷ ರೂ.ವರೆಗೆ ಮಿಶ್ರತಳಿ ಹಸು ಖರೀದಿಸಲು ಸಾಲ ನೀಡಲು ಒಕ್ಕೂಟ ಮುಂದಾಗಿದೆ ಎಂದರು.

ಒಕ್ಕೂಟದಲ್ಲಿ ಹಿಂದೆ ಪ್ರತಿದಿನ 11.50 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿತ್ತು. ಪ್ರಸ್ತುತ ಕಡಿಮೆಯಾಗಿರುವ ಕಾರಣ ಸಿಬ್ಬಂದಿ ವೆಚ್ಚ ಕಡಿಮೆ ಮಾಡಲು ಪ್ರೋರೇಟಾ ಆಧಾರದಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದರು.

ಒಕ್ಕೂಟದ ನಿರ್ದೇಶಕರಾದ ವಿ. ಮಂಜುನಾಥರೆಡ್ಡಿ, ಕಾಂತರಾಜ್, ಅಶ್ವತ್ಥರೆಡ್ಡಿ, ಡಿ.ವಿ.ಹರೀಶ್, ಹನುಮೇಶ್, ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ವಿ.ತಿಪ್ಪಾರೆಡ್ಡಿ ಹಾಜರಿದ್ದರು.

ಎದುರು ಮಾತನಾಡಿದ್ರೆ ಉತ್ತರ ನೀಡುವೆ: ನನ್ನ ನಾಯಕರು, ನನ್ನ ಪಕ್ಷದ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡಿದರೆ ತಕ್ಕ ಉತ್ತರ ನೀಡುವೆ ಎಂದು ಕೆ.ವೈ.ನಂಜೇಗೌಡ ರೈಲ್ವೆ ಕೋಚ್ ವಿಚಾರದಲ್ಲಿ ಸಂಸದ ಎಸ್.ಮುನಿಸ್ವಾಮಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು. ರೈಲ್ವೆ ಕೋಚ್ ಫ್ಯಾಕ್ಟರಿ ವಿಚಾರದಲ್ಲಿ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ವಿರುದ್ಧ ಸಂಸದರ ಆರೋಪಕ್ಕೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ನಾಯಕರು ರಿಯಲ್ ಎಸ್ಟೇಟ್ ಮಾಡುವವರಲ್ಲ. ಅಂತಹ ಕೆಲಸವನ್ನು ಯಾರು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಕೋಚ್ ಫ್ಯಾಕ್ಟರಿ ಬದಲು ಕಾರ್ಯಾಗಾರ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಕುರಿತು ಮಾಜಿ ಸಂಸದರು ಮತ್ತು ಕೆ.ಆರ್.ರಮೇಶ್‌ಕುಮಾರ್ ಹೇಳಿದ್ದಕ್ಕೆ ನನ್ನ ಸಂಪೂರ್ಣ ಸಹಮತ ಇದೆ ಎಂದರು.

ಕೋಚಿಮುಲ್‌ಗೆ ಸಂಸದರು, ಅವಿಭಜಿತ ಜಿಲ್ಲೆಯ ಮಂತ್ರಿಗಳು, ಶಾಸಕರು ಯಾವುದೇ ಸಮಯದಲ್ಲಾದರೂ ಭೇಟಿ ನೀಡಲಿ. ಆಹ್ವಾನಿಸಲು ನಾವು ಸಿದ್ಧ. ಯಾವುದೇ ಅಂಜಿಕೆ ಇಲ್ಲ. ಅವರಿಂದ ಒಕ್ಕೂಟಕ್ಕೆ ಆಗುವ ಸಹಕಾರ ಪಡೆದುಕೊಳ್ಳಲು ತಯಾರಾಗಿದ್ದೇವೆ. ಕೆ.ವೈ.ನಂಜೇಗೌಡ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net