

ಬೆಂಗಳೂರು : ಶಿವಾಜಿನಗರದ ರಸೇಲ್ ಮಾರುಕಟ್ಟೆಯ ಬಳಿ ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ಮಾಡುತ್ತಾ ವಾಹನಗಳು ಹಾಗೂ ಪಾದಾಚಾರಿಗಳ ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತಿದ್ದ ವ್ಯಾಪಾರಿಗಳನ್ನು ಬಿಬಿಎಂಪಿ ಮಾರ್ಷಲ್‌ಗಳು ತೆರವುಗೊಳಿಸಿದ್ದಾರೆ.
ರಸೇಲ್ ಮಾರುಕಟ್ಟೆ ಮುಂಭಾಗದ ರಸ್ತೆಯಲ್ಲಿ ವ್ಯಾಪಾರಿಗಳು ನಡು ರಸ್ತೆಯಲ್ಲಿ ತರಕಾರಿ, ಹಣ್ಣಿನ ಬುಟ್ಟಿಗಳನ್ನು ಇಟ್ಟುಕೊಂಡು ಹಾಗೂ ವಾಹನ ನಿಲ್ಲಿಸಿಕೊಂಡು ವ್ಯಾಪಾರ ನಡೆಸುತ್ತಿದ್ದರು. ಇದರಿಂದ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಹಲವು ದೂರುಗಳು ಕೇಳಿಬಂದಿದ್ದವು.
ಹೀಗಾಗಿ, ಭಾನುವಾರ ಬಿಬಿಎಂಪಿ ಮಾರ್ಷಲ್‌ಗಳು ರಸ್ತೆಗಳಲ್ಲಿ ವ್ಯಾಪಾರ ನಡೆಸುತ್ತಿದ್ದವರನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು. ಜತೆಗೆ, ಪುನಃ ರಸ್ತೆಯಲ್ಲಿ ವ್ಯಾಪಾರಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್ ತಿಳಿಸಿದ್ದಾರೆ.