ರವಿ, ಕವಿ ಕಾಣದ್ದನ್ನ ಯಕ್ಷಿಣಿಗಾರ ಕಾಣಿಸಬಲ್ಲ!

edit 2
Published on

ದೊಡ್ಡ ದೊಡ್ಡ ಕನಸುಗಳನ್ನೇ ಕಾಣಿ. ಕನಸು ಕಾಣುವುದೇ ಹೌದಾದರೆ ವಿಮಾನದಲ್ಲೇ ಹೋಗಿ. ಸೈಕಲ್​ನಲ್ಲಿ ಹೋಗುವ ಕನಸನ್ನು ಕಾಣಬೇಡಿ. ಕನಸಲ್ಲಿ ಹೋಳಿಗೆ, ಮೃಷ್ಟಾನ್ನವನ್ನೇ ತಿನ್ನಿ, ಮಂಡಕ್ಕಿ ತಿನ್ನಬೇಡಿ. ಶ್ರೀಮಂತರಾಗಲು ಜೀವನದಲ್ಲಿ ಪ್ರಯತ್ನ ಮುಂದುವರಿಸಿ, ಎಲ್ಲೂ ನಿಲ್ಲದಿರಿ, ಧೃತಿಗೆಡದಿರಿ. ಒಂದು ಫೀಲ್ಡನ್ನು ಆರಿಸಿಕೊಳ್ಳಿ. ಅದರಲ್ಲಿರುವ ಸಾಧಕ-ಬಾಧಕಗಳ ಬಗ್ಗೆ ಪರಿಣತರೊಂದಿಗೆ ರ್ಚಚಿಸಿ. ಆತ್ಮೀಯರೊಂದಿಗೆ ಸಮಾಲೋಚಿಸಿ. ಕೆಲವರು ಅಧೈರ್ಯದ ಮಾತುಗಳನ್ನಾಡಬಹುದು. ಅದರಿಂದ ಹೆದರಬೇಡಿ, ಹಿಂಜರಿಯಬೇಡಿ.

ನಾನು ಮ್ಯಾಜಿಕ್ ರಂಗವನ್ನು ಆರಿಸಿಕೊಂಡಾಗ ಅನೇಕರು ಮೂಗು ಮುರಿದದ್ದಿದೆ- ಈ ವಿದ್ಯೆಯಿಂದ ಅದು ಹೇಗೆ ಕೋಟಿಗಟ್ಟಲೆ ಹಣ ಮಾಡಲು ಸಾಧ್ಯ ಎಂದು. ನಾನು ಇದಕ್ಕೆ ಕಿವಿಗೊಡಲಿಲ್ಲ. ಕನಸು ಕಾಣ್ತಿದ್ದೆ. ಗುರಿ ಸ್ಪಷ್ಟವಾಗಿತ್ತು. ಹಾಗಾಗಿಯೇ ಇಂದು ನನ್ನ ಕೋಟ್ಯಂತರ ರೂಪಾಯಿಗಳ ಮ್ಯಾಜಿಕ್ ಸಾಮಗ್ರಿಗಳು 27 ದೇಶಗಳಿಗೆ ರಫ್ತಾಗುವುದು ಸಾಧ್ಯವಾಯ್ತು.

ಡೈರೆಕ್ಟರ್, ನಟನಾಗುವುದೇ ನಿಮ್ಮ ಗುರಿಯಾಗಿದ್ದಲ್ಲಿ ದಿನಕ್ಕೆ 10 ಸಿನಿಮಾ ನೋಡಿ. ಆದರೆ ಒಂದು ಮಾತು. ಇಂತಹ ಕನಸನ್ನು ಪ್ರತಿಯೊಬ್ಬರೂ ಕಾಣ್ತಾರೆ. ಆದರೆ ಈ ರಂಗದಲ್ಲಿ ಉತ್ತುಂಗಕ್ಕೆ ಏರಿದವರೆಷ್ಟು ಮಂದಿ ಇದ್ದಾರೆ? ಉದಾಹರಣೆಗೆ, ನಮ್ಮ ರಾಜ್ಯದಲ್ಲೇ ನೋಡಿ. ಎಷ್ಟು ಜನ ರಾಜ್​ಕುಮಾರ್, ಯಶ್, ದರ್ಶನ್​ಗಳಿದ್ದಾರೆ? ಸರಿಯಾಗಿ ಲೆಕ್ಕ ಹಾಕಿದಲ್ಲಿ ಈ ಸಂಖ್ಯೆ ಹತ್ತನ್ನು ಮೀರಲಿಕ್ಕಿಲ್ಲ. ಇದು ಕೂಡ ಎಷ್ಟು ಜನರಲ್ಲಿ 10 ಮಂದಿ? ಆರು ಕೋಟಿ ಕನ್ನಡಿಗರಲ್ಲಿ! ಇಂತಹ ರಂಗದಲ್ಲಿ ಹೆಸರು ಗಳಿಸೋದು, ನಂತರ ಅದನ್ನು ಉಳಿಸಿಕೊಳ್ಳೋದು ಬಹಳ ಕಷ್ಟ. ನಾನು ಹೀರೋ ಆಗ್ಬೇಕು ಅಂತ ಸಿಕ್ಕಾಪಟ್ಟೆ ಪ್ರಯತ್ನ ಮಾಡಿ ಸೋತಿದ್ದೀನಿ. ಪುಟ್ಟಣ್ಣ ಕಣಗಾಲ್, ಸಿದ್ಧಲಿಂಗಯ್ಯ, ತಮಿಳಿನ ಬಾಲಚಂದರ್, ಭಾಗ್ಯರಾಜ್ ಮುಂತಾದವರು ನನಗೆ ಆಶ್ವಾಸನೆ ಕೊಟ್ಟರೂ ನನ್ನಿಂದ ಆ ರಂಗದಲ್ಲಿ ಗೆಲ್ಲಲಾಗಲಿಲ್ಲ. ಕೋಕಿಲಾ ಮೋಹನ್ ಕೂಡ ನನ್ನ ಒಟ್ಟಿಗೆ ಪ್ರಯತ್ನಿಸುತ್ತಿದ್ದ. ಮೊನ್ನೆ ಗಣೇಶ್ ಕಾಸರಗೋಡು ಅವರ ಪುಸ್ತಕ ಬಿಡುಗಡೆ ಸಮಯದಲ್ಲಿ ಸಿಕ್ಕಾಗ ಆತ ಗೆದ್ದಿದ್ದು ತಿಳಿಯಿತು. ನಾನು ಆ ರಂಗದಲ್ಲಿ ಸೋತು ಗೆದ್ದಿದ್ದೀನಿ. ಯಾಕೆಂದು ಮುಂದೆ ತಿಳಿಸುತ್ತೇನೆ. ಎಲ್ಲ ಯೋಗ್ಯತೆ ಇದ್ದು ಸೋತವರು ನೂರಾರು ಯುವಕರು. ಉದಾಹರಣೆಗೆ ಅಶೋಕ್, ರಾಮಕೃಷ್ಣ, ವಿಶ್ವವಿಜೇತ, ಟೈಗರ್ ಪ್ರಭಾಕರ್, ಉದಯ್ ಹುತ್ತಿನಗದ್ದೆ ಮುಂತಾದವರು.

ನೀವು ಸಿನಿಮಾ ಸೇರಬೇಕು ಅಂತ ಊರು ಬಿಡ್ತೀರಾ, ಆದ್ರೆ ಬೆಂಗಳೂರು ಸೇರಿದ ಕೂಡಲೇ ಹೊಟ್ಟೆಪಾಡಿಗೆ ಹೋಟೆಲ್ ಕೆಲಸಕ್ಕೆ ಸೇರಿಕೊಳ್ತೀರಾ. ಹೀಗೆ ಮಾಡಬಾರ್ದು. ನೀವು ಪೂರ್ಣಾವಧಿ ಆ ರಂಗದಲ್ಲಿ ಇದ್ರೆ ಮಾತ್ರ ಅದ್ರಲ್ಲಿ ಪರಿಪೂರ್ಣತೆ ಹೊಂದಬಹುದು. ಆದರೂ ಸಿನಿಮಾ ರಂಗ ಮಾತ್ರ ಒಂದು ತರಹದ ಗ್ಯಾಂಬ್ಲಿಂಗೇ. ನಮ್ಮ ಸಿನಿಮಾ ನಿರ್ದೇಶಕರನ್ನೇ ಗಮನಿಸಿ. ಸಿದ್ಧಲಿಂಗಯ್ಯನಂಥೋರು ‘ಬಂಗಾರದ ಮನುಷ್ಯ’, ‘ಭೂತಯ್ಯನ ಮಗ ಅಯ್ಯು’, ‘ಭೂಲೋಕದಲ್ಲಿ ಯಮರಾಜ’ (ಇದರಲ್ಲಿ ನಾನು ನಟಿಸಿದ್ದೆ) ಮುಂತಾದ ಅತ್ಯುತ್ತಮ ಚಿತ್ರಗಳನ್ನು ನೀಡಿದ್ರೂ ಅವರ ಚಿತ್ರ ‘ಹೇಮಾವತಿ’ ಸೋತಿದ್ರಿಂದ ಅವರು ತೆರೆಯ ಹಿಂದೆ ಸರಿಯಬೇಕಾಯ್ತು. ಭಾರ್ಗವರವರು 49 ಉತ್ತಮ ಚಿತ್ರಗಳನ್ನು ಮಾಡಿದ್ರೂ, 50ನೇ ಚಿತ್ರ ಕೈಕೊಟ್ಟಾಗ ಅವರೂ ಮೂಲೆ ಸೇರಿದ್ರು. ದ್ವಾರಕೀಶ್ ಅದೆಷ್ಟೋ ಒಳ್ಳೆಯ ಸಿನಿಮಾಗಳನ್ನು ಮಾಡಿದ್ರು. ಯಾವುದೋ ಒಂದು ಚಿತ್ರ ಅವರ ಸಂಪೂರ್ಣ ಸೋಲಿಗೆ ಕಾರಣವಾಯ್ತು.

ಚಿತ್ರರಂಗದಲ್ಲಿ ಸಾಕಷ್ಟು ಮೂಢನಂಬಿಕೆಗಳಿವೆ. ಯಾವುದೋ ಒಂದು ಚಿತ್ರ ನೆಲಕಚ್ಚಿದಲ್ಲಿ ಅದಕ್ಕೆ ಸಂಬಂಧಪಟ್ಟವರನ್ನು Iron leg ಅಂತ ಕರೆದು ತಲೆ ಎತ್ತದಂತೆ ಮಾಡ್ತಾರೆ. ಬೇರೆ ಯಾವ ರಂಗದಲ್ಲೂ ಹೀಗಿಲ್ಲ. ಹತ್ತು ವ್ಯವಹಾರಗಳನ್ನು ಮಾಡ್ತಾರೆ. ಅದರಲ್ಲಿ ಒಂಬತ್ತು ವ್ಯವಹಾರ ಸ್ಥಗಿತಗೊಂಡ್ರೂ ಉಳಿದ ಒಂದರಲ್ಲಿ ಉಳಿದುಕೊಳ್ತಾರೆ. ಪ್ರೊಡ್ಯೂಸರ್​ಗಳು ಯಾವುದೋ ಒಂದು ಚಿತ್ರಕ್ಕೆ ಯದ್ವಾತದ್ವಾ ಖರ್ಚು ಮಾಡ್ತಾರೆ. ಅದು ಸೋತಲ್ಲಿ ಮುಂದಿನ ಚಿತ್ರಗಳಿಗೆ ಹಣವಿರೋದಿಲ್ಲ.

ಇವತ್ತು ವ್ಯಾಪಾರಿ, ಮ್ಯಾಜಿಶಿಯನ್, ಶ್ರೀಮಂತ ಎಂದೆಲ್ಲ ಕರೆಸಿಕೊಳ್ಳುತ್ತಿರುವ ನಾನು ಈ ಮಟ್ಟಕ್ಕೇರಲು ಎಷ್ಟು ಕಷ್ಟಪಟ್ಟೆ ಗೊತ್ತಾ? ಮ್ಯಾಜಿಕ್ ರಂಗಕ್ಕಿಳಿದಾಗ ಇನ್ನೂ ಮೀಸೆ ಮೂಡದ ಬಾಲಕನಾಗಿದ್ದೆ. ‘ಮೀಸೇನೇ ಬಂದಿಲ್ಲಾ, ಅದೇನ್ ಮ್ಯಾಜಿಕ್ ಮಾಡ್ತೀಯಾ’ ಎಂಬ ಮೂದಲಿಕೆಯ ಮಾತುಗಳನ್ನು ಕೇಳಿ ಸಹಿಸ್ಕೊಂಡೆ. ಆದ್ರೂ ನನ್ನ ಸರ್ಟಿಫಿಕೇಟ್​ಗಳನ್ನೆಲ್ಲ ತೋರಿಸಿ ಚಾನ್ಸ್ ಗಿಟ್ಟಿಸಿಕೊಳ್ತಿದ್ದೆ. ಕ್ರೇಪ್​ಹೇರ್​ನಿಂದ ನಕಲಿ ಮೀಸೆ ಇಟ್ಕೊಂಡು ಮ್ಯಾಜಿಕ್ ಮಾಡ್ತಿದ್ದೆ. ಆದ್ರೆ ಮುಂದೊಂದು ದಿನ ಅವಾರ್ಡ್, ಸರ್ಟಿಫಿಕೇಟ್​ಗಳೆಲ್ಲ ನಿಷ್ಪ್ರಯೋಜಕವೆಂದು ತಿಳಿದು ಎಸೆದುಬಿಟ್ಟೆ. ನನ್ನ ವಿವರ ಇಷ್ಟಕ್ಕೇ ಇರಲಿ...

ಕಷ್ಟಪಟ್ಟು ಒಂದು ರೀತೀಲಿ ದುಡಿದ ದುಡ್ಡನ್ನು ಇನ್ನೊಂದು ರೀತಿ ಇನ್ವೆಸ್ಟ್ ಮಾಡ್ಬೇಡಿ. ಉದಾಹರಣೆಗೆ, ಒಂದು ಹೋಟೆಲ್ ಮಾಡಿ ಗಳಿಸಿದ ದುಡ್ಡಲ್ಲಿ ಇನ್ನೊಂದು ಹೋಟೆಲ್ ಮಾಡ್ಬೇಡಿ, ಏಕೆಂದರೆ ಎರಡನ್ನೂ ನಿಭಾಯಿಸಲು ಸಾಧ್ಯವಾಗದೆ ಅದನ್ನು ಮುಚ್ಚುವ ಪರಿಸ್ಥಿತಿ ಬಂದೀತು. ಹೀಗೆ ಒಂದು ವ್ಯವಹಾರದಲ್ಲಿ ದುಡಿದ ದುಡ್ಡನ್ನು ಇನ್ನೊಂದರಲ್ಲಿ ಕಳೆದ ಹಲವು ಉದಾಹರಣೆಗಳಿವೆ. ವಿಜಯ ಮಲ್ಯ ಮದ್ಯದಲ್ಲಿ ದುಡಿದ ಹಣವನ್ನು ಏರ್​ಲೈನ್ಸ್​ನಲ್ಲಿ ಕಳೆದುಕೊಳ್ಳಲಿಲ್ಲವೇ? ಅಷ್ಟೇಕೆ, ನನ್ನ ಆಪ್ತಮಿತ್ರ ಮಂಡ್ಯದ ಪ್ರೀತಂ ಶೆಣೈ, ನಾನು ಎಷ್ಟು ಬೇಡವೆಂದರೂ ಗುರುಪ್ರಸಾದ್​ರವರ ‘ಎರಡನೇಯ ಸಲ’ ಅನ್ನೋ ಸಿನಿಮಾಕ್ಕೆ ಹಣ ತೊಡಗಿಸಿ ಸಾಲಗಾರರ ಕಾಟ ತಡೆಯಲಾರದೆ ತನ್ನ ಮನೆಯನ್ನೂ ಮಾರಿ ಕೊನೆಗೆ ಗೂಡ್ಸ್ ರೈಲಿಗೆ ತಲೆ ಕೊಟ್ಟು ತಲೆ ಒಡೆದರೂ ಅದೃಷ್ಟವಶಾತ್ ಉಳಿದುಕೊಂಡರು. ನನ್ನ ಸಲಹೆಯಂತೆ ಮತ್ತೆ ಅವರು ಪರಿಸರಸ್ನೇಹಿ ಹತ್ತಿಯ ಚೀಲದ ಡಿಸ್ಟ್ರಿಬ್ಯೂಶನನ್ನು ಆರಂಭಿಸಿ ಯಶಸ್ಸನ್ನು ಗಳಿಸಿ ಮೈಸೂರಿನಲ್ಲಿ ಸುಖವಾಗಿದ್ದಾರೆ.

ನಿಮ್ಮದಲ್ಲದ ಉದ್ಯಮದಲ್ಲಿ ಕೈಯಾಡಿಸ್ಬೇಡಿ. ನೀವು ಅದನ್ನೇ ವೃತ್ತಿಯನ್ನಾಗಿ ಕೈಗೊಳ್ಳಬೇಕೆಂದಿದ್ದಲ್ಲಿ ಮಾತ್ರ ಸಂಪೂರ್ಣ ಪ್ರಯತ್ನ ಕೈಗೊಳ್ಳಿ. ಉದಾಹರಣೆಗೆ, ನೀವು ವಿದೇಶಕ್ಕೆ ಹೋಗ್ತೀರಾ, ಕಡಿಮೆ ಬೆಲೆಗೆ ಸಿಗುತ್ತೆ ಅಂತ ಯಾವುದೋ ಕ್ಯಾಮೆರಾ ತಂದು ಇಲ್ಲಿ ಮಾರಿದ್ರೆ ದುಡ್ಡಾಗುತ್ತೇಂತ ಅಂದುಕೊಳ್ತೀರಿ. ಇಲ್ಲಿ ತಂದಾಗ ಅಯ್ಯೋ, ಇದು ರಷ್ಯನ್ ಕ್ಯಾಮೆರಾ, ಯೂಸ್​ಲೆಸ್. ಇಲ್ಲಿ ಇದಕ್ಕೆ ಕವಡೆ ಕಿಮ್ಮತ್ತೂ ಇಲ್ಲ ಎಂದಾಗ ನಿಮಗೇನನ್ನಿಸ್ಬೇಕು? ಯಾಕಂದ್ರೆ ನಿಮಗೆ ಕ್ಯಾಮೆರಾ ಬಗ್ಗೆ ಯಾವುದೇ ಅನುಭವವಿಲ್ಲದೆ ಈ ವ್ಯವಹಾರ ಮಾಡಿ ಮೋಸ ಹೋಗಿರ್ತೀರಾ. ನಾನೊಮ್ಮೆ ಇದೇ ರೀತಿ ಮೋಸ ಹೋಗಿದ್ದೆ. ಬೆಂಗಳೂರಿನಲ್ಲಿ 60 ರೂಪಾಯಿಗೆ ಸಿಗುವ ಫಿಲ್ಮ್ ಚೆನ್ನೈನಲ್ಲಿ 30 ರೂಪಾಯಿಗೆ ಸಿಕ್ಕಿದ ಕಾರಣ ರಾಶಿಗಟ್ಟಲೆ ಖರೀದಿಸಿ ತಂದಿದ್ದೆ. ನಂತರ ನನಗೆ ಗೊತ್ತಾಯ್ತು ಅದು ಸಿನಿಮಾ ರೀಲಿಗೆ ಉಪಯೋಗಿಸುವ ಫಿಲ್ಮೆಂದು. ಪರಿಣಾಮ ನನ್ನ ಅಷ್ಟೂ ದುಡ್ಡು ಹೋಯ್ತು. ಹೀಗೆ ನಿಮಗೆ ಅನುಭವವಿಲ್ಲದ ವಿಷಯದಲ್ಲಿ ವ್ಯವಹಾರ ಮಾಡ್ಬೇಡಿ.

ಬಹುತೇಕ ಜನರು ತಾವು ಗಳಿಸಿದ ಎಲ್ಲ ಹಣವನ್ನು ಇನ್ನೊಂದು ‘ವೆಂಚರ್’ಗೆ ಸುರಿದರೆ ಅದು ಕೊನೆಯ ‘ವೆಂಚರ್’ ಆಗುವ ಸಾಧ್ಯತೆಯೂ ಇಲ್ಲದಿಲ್ಲ. ಆದ್ದರಿಂದ ಗಳಿಸಿದ ಅಷ್ಟೂ ದುಡ್ಡನ್ನು ಪಣವಾಗಿಡದೆ ಕಷ್ಟಕಾಲಕ್ಕೆ ಅಂತ ಸ್ವಲ್ಪವನ್ನಾದರೂ ಉಳಿಸಿಡಬೇಕು. ಯಾಕೆಂದರೆ ಪ್ರಯತ್ನ ನಿರಂತರವಾಗಿರಬೇಕು. ಕೆಟ್ಟದ್ದು ಒಳ್ಳೆದು ಹಂಚಿಕೊಂಡು ಬರುತ್ತಲೇ ಇರುತ್ತದೆ. ಸೋತಾಗ ನಿರಾಶರಾಗಿ ಕೈಕಟ್ಟಿ ಕೂರಬಾರದು. ನಾನೇ ಮೂರು ಸಲ ಸೋತು ಸಂಪೂರ್ಣವಾಗಿ ನೆಲಕಚ್ಚಿದ್ರೂ ಪುನಃ ಪ್ರಯತ್ನಿಸಿ ಗೆದ್ದಿದ್ದೀನಿ. ಅದನ್ನ ಮುಂದೆ ಹೇಳ್ತಿನಿ.

ಕೆಟ್ಟದರ ಬಗ್ಗೆ ಇರುವ ಒಳ್ಳೆ ಅಭಿಪ್ರಾಯ ಏನಂದ್ರೆ ಕೆಟ್ಟದ್ದು ಬಹಳ ಕಾಲ ಇರೋಲ್ಲ. ಒಳ್ಳೆಯದರ ಬಗ್ಗೆ ಇರುವ ಕೆಟ್ಟ ಅಭಿಪ್ರಾಯ ಏನಂದ್ರೆ ಒಳ್ಳೆದು ಸಹ ಬಹಳ ಕಾಲ ಇರೋಲ್ಲ. ಅಂದ್ರೆ ಒಳ್ಳೆಯದು-ಕೆಟ್ಟದ್ದು ವರ್ತಲಾಕಾರದಲ್ಲಿ ಸುತ್ತುತ್ತಿರುತ್ತವೆ. ಯಾರಿಗೂ ಬರೀ ಒಳ್ಳೆದೇ ಅಥವಾ ಕೆಟ್ಟದ್ದೇ ಇರೋಲ್ಲಾ. ‘ಒಳ್ಳೇ ಕಾಲದಲ್ಲಿ ದುಡ್ಡು ಬಂದಾಗ ಮೊಳೆ ಹೊಡೆದು ಇಡು’ ಎಂದು ನಮ್ಮ ಅಪ್ಪ ಹೇಳ್ತಿದ್ರು. ಅಂದ್ರೆ ಭದ್ರವಾಗಿ ಬ್ಯಾಂಕಲ್ಲಿ ಇಡಿ. ಹೆಚ್ಚಿನ ಬಡ್ಡಿಗಾಗಿ ಕೈಸಾಲ ಕೊಟ್ಟಿರೋ ಇರೋ ದುಡ್ಡನ್ನೂ ಕಳ್ಕೋಳ್ತೀರ. ಕ್ಯಾಪ್ಟನ್ ಗೋಪಿನಾಥ್ ಡೆಕ್ಕನ್ ಏರ್​ವೇಸನ್ನು ಒಳ್ಳೆಯ ಸಮಯಕ್ಕೆ ಮಾರಿದ್ದರಿಂದ ಬಚಾವ್ ಆದ್ರು. ಈಗ ಇದ್ದಿದ್ರೆ ಈ ಕರೊನಾದಿಂದ ಅಪಾರ ನಷ್ಟಕ್ಕೆ ಒಳಗಾಗುತ್ತಿದ್ದರಲ್ಲವೇ?

ನಿಮಗನ್ನಿಸಬಹುದು, ನನ್ನನು ನಾನು ತುಂಬ ಕೊಚ್ಚೊ್ಕಳ್ತಾ ಇದ್ದೀನಿ ಅಂತ. ನಾನು ನನ್ನ ಬಗ್ಗೆನೇ ಹೆಚ್ಚು ಉದಾಹರಣೆಯನ್ನು ಕೊಡ್ತಾ ಇರೋದು ಯಾಕಂದರೆ ಅನುಭವಿಸಿದ್ದನ್ನ ಬರೆದರೆ ನಿಮ್ಮ ಮನಸ್ಸಿಗೆ ಹೆಚ್ಚು ನಾಟಬಹುದು ಅನ್ನೋ ಒಂದೇ ಕಾರಣಕ್ಕೆ. ಇದರಲ್ಲಿ ಒಂದೇ ಒಂದು ಸುಳ್ಳು ಇಲ್ಲ. ನನ್ನನ್ನ ಹತ್ತಿರದಿಂದ ಬಲ್ಲವರಿಗೆ ತಿಳಿದಿರುತ್ತೆ. ನಾನು ಹೇಳುವ ವಿಷಯಗಳು ‘ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಮಾಳ್ಪವರಿಂದ ಕಂಡು... ಹರಹರಾ ಶ್ರೀ ಚೆನ್ನಸೋಮೇಶ್ವರ’ ಅನ್ನೋ ಕವಿವಾಣಿಯಂತೆ, ರವಿ ಕಾಣದ್ದನ್ನ ಕವಿ ಕಂಡ, ಕವಿ ಕಾಣದ್ದನ್ನ ಯಕ್ಷಿಣಿಗಾರ ಕಾಣಿಸಬಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net