

ವಿಮಾ ಕ್ಷೇತ್ರದ ದಿಗ್ಗಜ ಸಂಸ್ಥೆಯಾದ ಭಾರತೀಯ ಜೀವವಿಮಾ ನಿಗಮದ ಷೇರುಗಳನ್ನು ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಬಂಡವಾಳ ಹಿಂಪಡೆಯುವ ಉಪಕ್ರಮದ ಭಾಗವಾಗಿ ಎಲ್ಐಸಿಯನ್ನು ಕೂಡ ಗುರುತಿಸಲಾಗಿದೆ. ಇದರಿಂದ ಹೆಚ್ಚು ಆರ್ಥಿಕ ಶಿಸ್ತು ಉಂಟಾಗುತ್ತದೆ ಎಂದು ಸಚಿವೆ ಹೇಳಿದರು. ಎಲ್ಐಸಿಯಲ್ಲಿರುವ ಸರ್ಕಾರಿ ಬಂಡವಾಳದಲ್ಲಿನ ಸ್ವಲ್ಪ ಭಾಗವನ್ನು ಮಾರಾಟ ಮಾಡಲಾಗುತ್ತದೆ. ಪ್ರಸ್ತುತ ಎಲ್ಐಸಿ ಸಂಪೂರ್ಣ ಸರ್ಕಾರಿ ವಿಮಾ ಕಂಪನಿಯಾಗಿದೆ.
ನೌಕರರ ವಿರೋಧ: ಎಲ್ಐಸಿ ಬಂಡವಾಳ ಮಾರಾಟ ಮಾಡುವ ಕೇಂದ್ರದ ಯೋಜನೆಯನ್ನು ವಿಮಾ ನೌಕರರ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ. ‘ಇದು ದೇಶದ ಹಿತಕ್ಕೆ ಮಾರಕವಾದ ಕ್ರಮವಾಗಿದೆ’ ಎಂದು ಅಭಿಪ್ರಾಯಪಟ್ಟಿವೆ. ದೇಶದ ಆರ್ಥಿಕ ಅಭಿವೃದ್ಧಿಗೆ ಎಲ್ಐಸಿ ಅಪಾರ ಕೊಡುಗೆ ನೀಡಿದೆ. ಅದರ ಷೇರುಗಳನ್ನು ಮಾರುವುದರಿಂದ ದೇಶದ ಆರ್ಥಿಕ ಸಾರ್ವಭೌಮತ್ವಕ್ಕೆ ಅಪಾಯವುಂಟಾಗುತ್ತದೆ ಎಂದು ಸಂಘಟನೆಯ ಪದಾಧಿಕಾರಿ ಹೇಳಿದರು. ಖಾಸಗೀಕರಣ ಯೋಜನೆ ಕೈಬಿಡದಿದ್ದರೆ ದೇಶಾದ್ಯಂತ ಚಳವಳಿ ನಡೆಸುವುದಾಗಿ ಎಚ್ಚರಿಸಿದರು.
1956ರಲ್ಲಿ ಸ್ಥಾಪನೆ: ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ವಿಮಾ ಸೇವೆ ಒದಗಿ ಸುವ ಹಲವು ವಿಮಾ ಕಂಪನಿಗಳಿದ್ದವು. ಅನೇಕ ವಿಮಾ ಸಂಸ್ಥೆಗಳು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದುದನ್ನು ಸಂಸದ ಫಿರೋಜ್ ಗಾಂಧಿ ಪ್ರಸ್ತಾಪಿಸಿ ಈ ಕ್ಷೇತ್ರದ ರಾಷ್ಟ್ರೀಕರಣದ ಅಗತ್ಯವನ್ನು ಪ್ರತಿಪಾದಿಸಿದ್ದರು. ವಂಚನೆ ಪ್ರಕರಣಗಳ ತನಿಖೆ ನಡೆಸಿ ಕೆಲವು ವಿಮಾ ಉದ್ಯಮಿಗಳು ಜೈಲು ಪಾಲಾಗಿದ್ದರು. ಈ ಹಿನ್ನೆಲೆಯಲ್ಲಿ, 1956 ಜೂನ್ 19ರಂದು ಸಂಸತ್ತು ಭಾರತೀಯ ಜೀವ ವಿಮಾ ಕಾನೂನನ್ನು ಅಂಗೀಕರಿಸುವ ಮೂಲಕ ಸುಮಾರು 245ಕ್ಕೂ ಹೆಚ್ಚು ವಿಮಾ ಕಂಪನಿ ಮತ್ತು ಪ್ರಾವಿಡೆಂಟ್ ಸೊಸೈಟಿಗಳನ್ನು ವಿಲೀನಗೊಳಿಸಿ ಭಾರತೀಯ ಜೀವ ವಿಮಾ ನಿಗಮವನ್ನು (ಎಲ್ಐಸಿ) ಸ್ಥಾಪಿಸಲಾಯಿತು. ಇದು ಸಂಪೂರ್ಣವಾಗಿ ಸರ್ಕಾರಿ ಒಡೆತನದ ಸಂಸ್ಥೆ. ವಿಮೆ ಪಾಲಿಸಿಗಳಿಂದ ಬಂದ ಹಣವನ್ನು ಸರ್ಕಾರಿ ಉದ್ದಿಮೆಗಳಲ್ಲಿ ಹೂಡುವ ಮೂಲಕ ಸರ್ಕಾರಿ ರಂಗಕ್ಕೆ ಚೈತನ್ಯ ತುಂಬುತ್ತಾ ಬಂದಿದೆ. ಖಾಸಗಿ ಕಂಪನಿಗಳಲ್ಲೂ ಎಲ್ಐಸಿ ಹೂಡಿಕೆಯಿದೆ. ಪಂಚವಾರ್ಷಿಕ ಯೋಜನೆಗಳಿಗೆ ಎಲ್ಐಸಿ ಕೊಡುಗೆಯೂ ಅಪಾರವಾಗಿದೆ.