

ಪ್ರತಿಯೊಬ್ಬರಿಗೂ ಕೂಡಿಟ್ಟ ಹಣವನ್ನು ದ್ವಿಗುಣಗೊಳಿಸಿ ಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಅದಕ್ಕೆ ಸೂಕ್ತ ಮಾರ್ಗ ಯಾವುದು ಎಂಬುದೇ ಗೊಂದಲ. ಕೆಲವರು ಚಿನ್ನ ಅಥವಾ ಭೂಮಿ ಮೇಲೆ ಹೂಡಿಕೆ ಮಾಡಲು ಸಲಹೆ ನೀಡಿದರೆ ಮತ್ತೆ ಕೆಲವರು ಪೇರುಪೇಟೆಯಲ್ಲಿ ಅದೃಷ್ಟ ಪರೀಕ್ಷೆ ಮಾಡಿ ಎಂಬ ಸಲಹೆ ನೀಡುತ್ತಾರೆ. ಭೂಮಿ ಖರೀದಿ ಇದೀಗ ದುಬಾರಿ. ಆದರೆ 10-20 ಸಾವಿರವಿದ್ದರೂ, ಜಾಣತನವಿದ್ದರೆ ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಸುಲಭವಾಗಿ ಹಣ ಮಾಡಬಹುದು. ಚಿನ್ನ ಖರೀದಿಯೂ ಸೇಫ್. ಹಾಗಿದ್ದರೆ ಚಿನ್ನ ಅಥವಾ ಷೇರುಪೇಟೆಯಲ್ಲಿ ಯಾವುದು ಬೆಸ್ಟ್? ಇಲ್ಲಿದೆ ನೋಡಿ ಮಾಹಿತಿ
ಹೂಡಿಕೆ ಎಂಬುದು ಒಂದು ಕಲೆ. ಆರ್ಥಿಕ ಭದ್ರತೆ ಹಾಗೂ ಭವಿಷ್ಯಕ್ಕಾಗಿ ಹೂಡಿಕೆ ಅತ್ಯವಶ್ಯ. ಆದರೆ, ಎಲ್ಲಿ ಹೂಡಿಕೆ ಮಾಡಬೇಕು? ಎಷ್ಟು ಮಾಡಬೇಕು ಎಂಬುದನ್ನು ಅರಿತರೆ ಸಂಪತ್ತು ವೃದ್ಧಿ ದೊಡ್ಡ ವಿಷಯವೇನಲ್ಲ. ಕಳೆದ ಕೆಲವು ದಶಕಗಳಿಂದ ಷೇರು ಮಾರುಕಟ್ಟೆ ಹಾಗೂ ಚಿನ್ನದಲ್ಲಿ ಹೂಡಿಕೆ ಚರ್ಚಾಸ್ಪದ ವಿಷಯವಾಗಿದೆ. ಇವೆರಡರಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ. ಏಕೆಂದರೆ ಎರಡಕ್ಕೂ ಅದರದೇ ಆದ ಅನುಕೂಲ ಮತ್ತು ಅನನುಕೂಲಗಳಿವೆ. ಹೀಗಾಗಿ, ಹೂಡಿಕೆಗೂ ಮುನ್ನ ನಮ್ಮ ಆರ್ಥಿಕ ಗುರಿ ಮತ್ತು ಜಬಾಬ್ದಾರಿ ಅರಿಯುವುದು ಬಹುಮುಖ್ಯ.
ಹಳದಿ ಲೋಹದ ಮೇಲೆ ಎಲ್ಲರಿಗೂ ಅಪಾರ ಪ್ರೀತಿ. ಗಣಿಗಳಲ್ಲಿ ನೈಸರ್ಗಿಕವಾಗಿ ಸಿಗುವ ಚಿನ್ನವನ್ನು ಫ್ಯಾಕ್ಟರಿಗಳಲ್ಲಿ ಉತ್ಪಾದಿಸುವುದು ಅಸಾಧ್ಯ. ಹೀಗಾಗಿ, ಅದರ ಲಭ್ಯತೆಯ ಗುಣಲಕ್ಷಣದಿಂದ ಅದಕ್ಕೆ ಬೇಡಿಕೆ ಅಪಾರ. ಇದರಿಂದಾಗಿಯೇ ಶತಮಾನಗಳಿಂದಲೂ ಬಂಗಾರ ಹೂಡಿಕೆಗೆ ಮೊದಲ ಆಯ್ಕೆಯಾಗಿದೆ. ಸ್ಟಾಕ್ಗಳಂತೆ ಚಿನ್ನ ಗಳಿಕೆ ಅಥವಾ ಲಾಭಾಂಶ ಕೊಡುವುದಿಲ್ಲ. ಆದರೆ, ಚಿನ್ನದ ಆಂತರಿಕ ಗುಣಲಕ್ಷಣಗಳಿಗೆ ಯಾವುದೂ ಸಾಟಿಯಿಲ್ಲ.
ಇಟಿಎಫ್ ರೂಪದಲ್ಲಿ ಖರೀದಿ ಸುಲಭ
ಚಿನ್ನವನ್ನು ಗಟ್ಟಿರೂಪದಲ್ಲಿ ಅಥವಾ ಆಭರಣ ರೂಪದಲ್ಲಿ ಖರೀದಿ ಮಾಡುವ ಬದಲು ಇಟಿಎಫ್ ರೂಪದಲ್ಲಿ (ಎಕ್ಸ್ಚೇಂಜ್ ಟ್ರೇಡೆಡ್ ಫಂಡ್) ಖರೀದಿಸುವುದು ಸುಲಭ ಮಾರ್ಗ. ಇದರಿಂದ ಚಿನ್ನದ ಆಭರಣಗಳಿಗೆ ನೀಡಬೇಕಾದ ಮೇಕಿಂಗ್ ಚಾರ್ಜ್, ವೇಸ್ಟೇಜ್ಗಳ ಚಿಂತೆ ಇರುವುದಿಲ್ಲ. ಜತೆಗೆ ಚಿನ್ನವನ್ನೂ ಭೌತಿಕವಾಗಿ ಇಟ್ಟುಕೊಳ್ಳುವ ಭಯ ಇರುವುದಿಲ್ಲ. ಅಂದರೆ, ಇವುಗಳನ್ನು ಕಳವು ಮಾಡಲು ಆಗುವುದಿಲ್ಲ. ಇಟಿಎಫ್ಗಳನ್ನು ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಇತರ ಷೇರುಗಳಂತೆಯೇ ಖರೀದಿಸಬಹುದು.
ಇಟಿಎಫ್ಗಳ ಜತೆಗೆ ಗೋಲ್ಡ್ ಸಾವರಿನ್ ಬಾಂಡ್ಗಳನ್ನೂ (ಎಸ್ಜಿಬಿ) ಖರೀದಿಸಬಹುದಾಗಿದೆ. ಗೋಲ್ಡ್ ಸಾವರಿನ್ ಬಾಂಡ್ ಎಸ್ಜಿಬಿಗಳು ಚಿನ್ನದ ರೂಪದ ಸರ್ಕಾರಿ ಭದ್ರತೆಗಳಾಗಿವೆ. ಇವು ಭೌತಿಕ ಚಿನ್ನಕ್ಕೆ ಪರ್ಯಾಯವಾಗಿವೆ. ಈ ಬಾಂಡ್ಗಳ ಮೇಲೆ ವಾರ್ಷಿಕವಾಗಿ ನಿಗದಿತ ಬಡ್ಡಿ ದೊರೆಯುತ್ತದೆ.
ಇತ್ತೀಚೆಗೆ ಹಳದಿ ಲೋಹ ಏರುತ್ತಲೇ ಇದ್ದು, ಸಾರ್ವಕಾಲಿಕ ಗರಿಷ್ಠ ದರ ತಲುಪಿತ್ತು. ಆದರೂ ಸದ್ಯಕ್ಕೆ ನಿಫ್ಟಿ ಸೂಚ್ಯಂಕದ ಲಾಭವನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ವರದಿಯೊಂದರ ಪ್ರಕಾರ, ಕಳೆದ 20 ಹಾಗೂ 10 ವರ್ಷಗಳ ಅವಧಿಯನ್ನು ಪರಿಗಣಿಸಿದಾಗ ನಿಫ್ಟಿಯನ್ನು ಹಿಂದಿಕ್ಕುವಲ್ಲಿ ಚಿನ್ನ ಯಶಸ್ವಿಯಾಗಿದೆ.
ಕಳೆದ 20 ವರ್ಷಗಳ ಅವಧಿಯಲ್ಲಿ ಆದ ಆರ್ಥಿಕ ಬದಲಾವಣೆಗಳ ಸಮಯದಲ್ಲಿ ಷೇರುಪೇಟೆ ಮುಗ್ಗರಿಸಿದರೆ. ಚಿನ್ನ ಸ್ಥಿರತೆ ಕಾಯ್ದುಕೊಂಡಿರುವುದು ಕಂಡುಬರುತ್ತದೆ. 2008ರಲ್ಲಿ ಆದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಜಾಗತಿಕವಾಗಿ ಷೇರು ಮಾರುಕಟ್ಟೆಗಳೆಲ್ಲ ಮುಗ್ಗರಿಸಿದ್ದರೂ ಚಿನ್ನದ ಬೆಲೆಯ ಮೇಲೆ ಗಣನೀಯ ಪ್ರಭಾವ ಬೀರಿರಲಿಲ್ಲ. ಕೋವಿಡ್ ಸಂದರ್ಭದಲ್ಲಿಯೂ ಷೇರು ಮಾರುಕಟ್ಟೆ ಪತರುಗುಟ್ಟಿತ್ತು. ರಷ್ಯಾ-ಯೂಕ್ರೇನ್ ನಡುವಿನ ಯುದ್ಧದ ಸಮಯದಲ್ಲೂ ಷೇರು ಮಾರುಕಟ್ಟೆ ಇಳಿಮುಖವಾಗಿದ್ದವು. ಆದರೆ, ಚಿನ್ನದ ಬೆಲೆ ಮಾತ್ರ ಸ್ಥಿರವಾಗಿತ್ತು. ಆದ್ದರಿಂದ ನಮ್ಮ ಹೂಡಿಕೆಯಲ್ಲಿ ಚಿನ್ನ ಹಾಗೂ ಷೇರುಗಳನ್ನು ಬ್ಯಾಲೆನ್ಸ್ ಮಾಡುವುದರಿಂದ ಷೇರುಗಳಿಂದ ನಿರಂತರ ಲಾಭ ದೊರೆತರೆ, ಅನಿಶ್ಚಿತತೆಯ ಸಂದರ್ಭದಲ್ಲಿ ಚಿನ್ನ ಸ್ಥಿರತೆ ಒದಗಿಸುತ್ತದೆ.
ಸುಲಭವಾಗಿ ಸಿಗುತ್ತೆ ಸಾಲ
ಕಷ್ಟಕಾಲದಲ್ಲಿ ಚಿನ್ನ ಕೈ ಹಿಡಿಯುತ್ತದೆ. ಚಿನ್ನದ ಮೇಲೆ ಸುಲಭವಾಗಿ ಸಾಲ ಪಡೆಯಬಹುದಾಗಿದೆ. ಈಗಂತೂ ಎಲ್ಲ ಬ್ಯಾಂಕುಗಳು ಚಿನ್ನದ ಮೇಲೆ ಸಾಲ ನೀಡುತ್ತವೆ. ಚಿನ್ನದ ಮೌಲ್ಯದ ಶೇ.90 ಸಾಲ ಪಡೆಯಬಹುದಾಗಿದೆ. ಆದರೆ, ಷೇರುಗಳ ಮೇಲೆ ಶೇ.60ಕ್ಕಿಂತ ಹೆಚ್ಚಿನ ಸಾಲ ಪಡೆಯುವುದು ಕಷ್ಟ. ಹೂಡಿಕೆಯ ಅವಧಿಯು ಚಿನ್ನ ಹಾಗೂ ಷೇರುಗಳಿಂದ ಆಗುವ ಲಾಭದ ಮೇಲೆ ಪ್ರಭಾವ ಬೀರುತ್ತದೆ. ಷೇರು ಮಾರುಕಟ್ಟೆ ದೀರ್ಘಾವಧಿಯ ಹೂಡಿಕೆಯ ತಂತ್ರಗಳಿಗೆ ಸೂಕ್ತವಾಗಿದೆ. ಒಳ್ಳೆಯ ಕಂಪನಿಗಳ ಷೇರುಗಳನ್ನು ಖರೀದಿಸಿ ಹತ್ತಿಪ್ಪತ್ತು ವರ್ಷ ಹಾಗೇ ಬಿಟ್ಟರೆ ಇವು ಉತ್ತಮ ಲಾಭ ತಂದುಕೊಡುತ್ತವೆ. ಚಿನ್ನವು ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲೂ ಲಾಭದಾಯಕವಾಗಿದೆ. ವಿಶೇಷವಾಗಿ ಆರ್ಥಿಕ ಅನಿಶ್ಚಿತತೆಯ ಅವಧಿಯಲ್ಲಿ ತ್ವರಿತ ಲಾಭ ನೀಡುತ್ತದೆ. ಚಿನ್ನ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯು ನಮ್ಮ ಲಾಭದ ನಿರೀಕ್ಷೆ ಹಾಗೂ ನಾವು ಎಷ್ಟರ ಮಟ್ಟಿಗೆ ನಷ್ಟ ತಡೆದುಕೊಳ್ಳಬಲ್ಲೆವು ಎಂಬುದರ ಮೇಲೆ ಅವಲಂಬಿತವಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಹೆಚ್ಚಿನ ಲಾಭ ಪಡೆಯಬಹುದು. ಆದರೆ, ಇದು ಅನಿಶ್ಚಿತ. ಮಾರುಕಟ್ಟೆ ಯಾವಾಗಲಾದರೂ ಕೆಳಗೆ ಇಳಿಯಬಹುದು. ನಮ್ಮ ದೇಶವಷ್ಟೇ ಅಲ್ಲದೆ ಜಾಗತಿಕ ಆರ್ಥಿಕ ನಿರ್ಣಯಗಳು, ಯುದ್ಧಗಳು, ನೈಸರ್ಗಿಕ ಪ್ರಕೋಪಗಳು ಮಾರುಕಟ್ಟೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.