ಕರ್ಣಾಟಕ ಬ್ಯಾಂಕ್ ಬೋನಸ್ ಷೇರು; 10ಕ್ಕೆ ಒಂದರಂತೆ ವಿತರಣೆಗೆ ನಿರ್ಧಾರ

Karnataka Bank 31 Jan 20
Published on

ಮಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಷೇರುದಾರರಿಗೆ ಪ್ರತಿ ಹತ್ತು ಷೇರುಗಳಿಗೆ ತಲಾ ಒಂದರಂತೆ ಬೋನಸ್ ಷೇರುಗಳನ್ನು ವಿತರಿಸಲಿದೆ.

ಇತ್ತೀಚೆಗೆ ಜರುಗಿದ ಬ್ಯಾಂಕಿನ ನಿರ್ದೇಶಕರ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ಬ್ಯಾಂಕ್ ಷೇರು ಮಾರುಕಟ್ಟೆಗೆ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಬೋನಸ್ ಷೇರು ಹಂಚಿಕೆಯು ಬ್ಯಾಂಕಿನ ಷೇರುದಾರರ ಅನುಮೋದನೆಯ ನಂತರ ಕಾರ್ಯಗತಗೊಳ್ಳಲಿದೆ.

ಅಂತೆಯೇ ಬ್ಯಾಂಕಿನ ಬಂಡವಾಳ ಪರ್ಯಾಪ್ತತೆಯನ್ನು ಇನ್ನಷ್ಟು ವೃದ್ಧಿಗೊಳಿಸುವ ದಿಸೆಯಲ್ಲಿ ಸಾಂಸ್ಥಿಕ ಹೂಡಿಕೆದಾರರಿಗೆ ಷೇರುಗಳನ್ನು ನೀಡುವ ಪ್ರಸ್ತಾವನೆಯನ್ನೂ ಬ್ಯಾಂಕಿನ ಪ್ರಕಟಣೆಯಲ್ಲಿ ಹೇಳಲಾಗಿದ್ದು, ಈ ಪ್ರಕ್ರಿಯೆಯೂ ಸಹ ಷೇರುದಾರರ ಅನುಮೋದನೆಯ ನಂತರ ಸದ್ಯದಲ್ಲೇ ಜಾರಿಯಾಗಲಿದೆ.

ಮೂಲಗಳ ಪ್ರಕಾರ 2002ರಲ್ಲೂ ಬ್ಯಾಂಕ್ ಬೋನಸ್ ಷೇರುಗಳನ್ನು ನೀಡಿದ್ದು ಷೇರುದಾರರ ದೀರ್ಘಕಾಲೀನ ಅಭಿಲಾಷೆಯನ್ನು ಮನಗಂಡು ಕೈಗೊಂಡಿರುವ ಈ ನಿರ್ಧಾರ ಎಲ್ಲ ಷೇರುದಾರರಿಗೆ ಪ್ರಯೋಜನಕಾರಿಯಾಗಲಿದೆ.

ಪ್ರಸ್ತುತ ಬ್ಯಾಂಕ್ ದೇಶಾದ್ಯಂತ 845 ಶಾಖೆಗಳನ್ನು ಹೊಂದಿದ್ದು 22 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಬ್ಯಾಂಕ್ ಪ್ರಸಕ್ತ ವಿತ್ತೀಯ ವರ್ಷದ ಪ್ರಥಮ 9 ತಿಂಗಳಲ್ಲಿ 404.47 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ, ಬ್ಯಾಂಕಿನ ಒಟ್ಟು ವ್ಯವಹಾರವು 126267 ಕೋಟಿ ರೂ. ತಲುಪಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net