

ಮುಂಬೈ: ಭಾರತದ ವಿದೇಶಿ ವಿನಿಮಯ (ಫೊರೆಕ್ಸ್) ಮೀಸಲು ಪ್ರಮಾಣ ಇತ್ತೀಚಿನ ದಿನಗಳಲ್ಲಿ ಭಾರಿ ಏರಿಕೆಯನ್ನು ದಾಖಲಿಸಿದೆ. ಇದೇ ಮೊದಲ ಬಾರಿಗೆ ಅದು ಅರ್ಧ ಟ್ರಿಲಿಯನ್ ಡಾಲರ್ (37.97 ಕೋಟಿ ರೂ.) ದಾಟಿದೆ. ಜೂನ್ 5ರ ಅಂತ್ಯಕ್ಕೆ 8.22 ಬಿಲಿಯನ್ ಡಾಲರ್ ( 62,437 ಕೋಟಿ ರೂ.) ಏರಿಕೆ ಕಂಡಿದ್ದೇ ಈ ದಾಖಲೆಗೆ ಕಾರಣವಾಗಿದೆ ಎಂದು ಆರ್ಬಿಐ ಇತ್ತೀಚಿನ ಅಂಕಿ-ಅಂಶ ತಿಳಿಸಿದೆ. ಆ ವಾರದಲ್ಲಿ ಫೊರೆಕ್ಸ್ 501.70 ಬಿಲಿಯನ್ ಡಾಲರ್ಗೆ (ಅರ್ಧ ಟ್ರಿಲಿಯನ್) ಏರಿದೆ. ವಿದೇಶಿ ಕರೆನ್ಸಿ ಆಸ್ತಿಯಲ್ಲಿ (ಎಫ್ಸಿಎ) ಅಪಾರ ಪ್ರಮಾಣದ ಏರಿಕೆಯಾಗಿದ್ದರಿಂದ ಈ ದಾಖಲೆ ಸಾಧ್ಯವಾಗಿದೆ ಎಂದು ಆರ್ಬಿಐ ತಿಳಿಸಿದೆ. ಮೇ 29ರಂದು ಮುಕ್ತಾಯವಾದ ವಾರದಲ್ಲಿ ವಿದೇಶಿ ವಿನಿಮಯದಲ್ಲಿ 3.44 ಬಿಲಿಯನ್ ಡಾಲರ್( 26 ಸಾವಿರ ಕೋಟಿ ರೂ.) ಏರಿಕೆಯಾಗಿ ಒಟ್ಟು ವಿನಿಮಯ 493.48 ಬಿಲಿಯನ್ ಡಾಲರ್ ( 37.48 ಲಕ್ಷ ಕೋಟಿ ರೂ.) ಆಗಿತ್ತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2019ರ ಸೆಪ್ಟೆಂಬರ್ನಲ್ಲಿ ಕಾರ್ಪೆರೇಟ್ ತೆರಿಗೆ ಕಡಿತ ಘೊಷಿಸಿದ ನಂತರ ಕಳೆದ ಒಂಬತ್ತು ತಿಂಗಳಿಂದ ಫೊರೆಕ್ಸ್ ಮೀಸಲಿನಲ್ಲಿ ಭಾರಿ ಹೆಚ್ಚಳವಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಅಂದಿನಿಂದ ಫೊರೆಕ್ಸ್ ಮೀಸಲು 73 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. ಎಫ್ಸಿಎಯಲ್ಲಿ ಫೊರೆಕ್ಸ್ನಲ್ಲಿರುವ ಯೂರೋ, ಪೌಂಡ್ ಮತ್ತು ಯೆನ್ನಂಥ ಅಮೆರಿಕೇತರ ಕರೆನ್ಸಿಗಳ ಮೌಲ್ಯ ಹೆಚ್ಚಳ (ಅಪ್ರಿಸಿಯೇಷನ್) ಅಥವಾ ಮೌಲ್ಯ ಇಳಿಕೆ (ಡೆಪ್ರಿಸಿಯೇಶನ್) ಡಾಲರ್ ಮೂಲಕ ನಡೆಸುವ ವಿದೇಶಿ ವಿನಿಯಮದ ಮೇಲೆ ಪರಿಣಾಮ ಬೀರುತ್ತದೆ. -ಏಜೆನ್ಸೀಸ್
ಕೆಲವು ದೇಶಗಳು ಬಂಗಾರವನ್ನು ವಿದೇಶಿ ವಿನಿಮಯದ ಭಾಗವಾಗಿ ಇಡುತ್ತವೆ. ವಿಶೇಷ ಡ್ರಾಯಿಂಗ್ ಹಕ್ಕನ್ನು ಕೂಡ ಮೀಸಲು ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಅರ್ಧ ಟ್ರಿಲಿಯನ್ ಡಾಲರ್ಗೆ ಹೆಚ್ಚಳ ಕರೊನಾ ಸಂಕಟದ ಮಧ್ಯೆ ಆಶಾಕಿರಣ
ಯಾವುದೇ ಒಂದು ದೇಶದ ಕೇಂದ್ರೀಯ ಬ್ಯಾಂಕ್ (ಭಾರತದಲ್ಲಿ ಆರ್ಬಿಐ) ಅಥವಾ ಇತರ ಯಾವುದೇ ವಿತ್ತೀಯ ಪ್ರಾಧಿಕಾರವು ಹೊಂದಿರುವ ನಗದು ಅಥವಾ ಇತರ ಯಾವುದಾದರೂ ಮೀಸಲು ಆಸ್ತಿಯನ್ನು ವಿದೇಶಿ ವಿನಿಮಯ ಮೀಸಲು (ಫೊರೆಕ್ಸ್ ಮೀಸಲು) ಎನ್ನುತ್ತಾರೆ. ದೇಶದ ಪಾವತಿ ಸಮತೋಲನಕ್ಕೆ, ಆಯಾ ದೇಶದ ಕರೆನ್ಸಿಯ ವಿದೇಶಿ ವಿನಿಮಯ ಮೌಲ್ಯದ ಮೇಲೆ ಪ್ರಭಾವ ಬೀರುವುದಕ್ಕೆ ಹಾಗೂ ಹಣಕಾಸು ಮಾರುಕಟ್ಟೆಯ ವಿಶ್ವಾಸವನ್ನು ನಿರ್ವಹಿಸಲು ಅದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಮೀಸಲನ್ನು ಒಂದು ಅಥವಾ ಹೆಚ್ಚಿನ ರಿಸರ್ವ್ ಕರೆನ್ಸಿಗಳಲ್ಲಿ ಇಡಲಾಗುತ್ತದೆ. ಬಹುತೇಕವಾಗಿ ಅಮೆರಿಕ ಡಾಲರ್ ಅಥವಾ ಸ್ವಲ್ಪ ಮಟ್ಟಿಗೆ ಯೂರೋದಲ್ಲಿ ಇಡಲಾಗುತ್ತದೆ.
ಕರೊನಾ ನಡುವೆಯೂ ಸಂತಸದ ಸುದ್ದಿ
ಕೋವಿಡ್-19 ಮಹಾಮಾರಿ ವಕ್ಕರಿಸುವ ಮುನ್ನವೇ ದೇಶದ ಬೆಳವಣಿಗೆ ದರ (ಜಿಡಿಪಿ) ತೀವ್ರ ಕುಂಠಿತಗೊಂಡು ಆರ್ಥಿಕತೆ ಕುಸಿತಗೊಂಡಿತ್ತು. ಕರೊನಾ ಕಾರಣ ವಿಧಿಸಲಾದ ಲಾಕ್ಡೌನ್ನಿಂದ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡು ದೇಶದ ಪರಿಸ್ಥಿತಿ ಕಳವಳಕಾರಿಯಾಗಿದೆ. ಇಂಥ ಸನ್ನಿವೇಶದ ನಡುವೆಯೂ ಫೊರೆಕ್ಸ್ನಲ್ಲಿ ಹೆಚ್ಚಳವಾಗಿರುವುದು ಸಮಾಧಾನದ ಸಂಗತಿ.
ಜೂನ್ 5ಕ್ಕೆ ಅಂತ್ಯವಾದ ವಾರದಲ್ಲಿ ಬಂಗಾರದ ಮೀಸಲು ಪ್ರಮಾಣ 329 ಮಿಲಿಯನ್ ಡಾಲರ್ನಷ್ಟು (- 2,498 ಕೋಟಿ ರೂ.) ಕುಸಿದು 32.352 ಬಿಲಿಯನ್ ಡಾಲರ್ಗೆ ( 2.45 ಲಕ್ಷ ಕೋಟಿ ರೂ.) ನಿಂತಿತ್ತು ಎಂದು ಆರ್ಬಿಐ ವರದಿ ತಿಳಿಸಿದೆ. ಅದೇ ವಾರದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್) ವಿಶೇಷ ವಾಪಸಾತಿ (ಸ್ಪೆಷಲ್ ಡ್ರಾಯಿಂಗ್) ಹಕ್ಕಿನ ಪ್ರಮಾಣ 10 ಮಿಲಿಯನ್ ಡಾಲರ್ ( 75.95 ಕೋಟಿ ರೂ.) ಏರಿಕೆಯಾಗಿ 1.44 ಬಿಲಿಯನ್ ಡಾಲರ್ಗೆ (10,937 ಕೋಟಿ ರೂ.) ತಲುಪಿತ್ತು. ಐಎಂಎಫ್ನಲ್ಲಿ ಭಾರತದ ಮೀಸಲು ಮೊತ್ತ ಕೂಡ 120 ಮಿಲಿಯನ್ ಡಾಲರ್ನಷ್ಟು (911 ಕೋಟಿ ರೂ.) ಏರಿಕೆಯಾಗಿ 4.28 ಬಿಲಿಯನ್ ಡಾಲರ್ ( 32,509 ಕೋಟಿ ರೂ.) ಆಗಿತ್ತು ಎಂಬುದು ಆರ್ಬಿಐ ಮಾಹಿತಿ.
ಭಾರತೀಯ ಷೇರುಗಳಲ್ಲಿ ವಿದೇಶಿ ವಿಭಾಗದ (ಫಾರಿನ್ ಪೋರ್ಟ್ಫೋಲಿಯೋ-ಎಫ್ಪಿಐ) ಹೂಡಿಕೆದಾರರ ಹೂಡಿಕೆ ಹಾಗೂ ಎಫ್ಡಿಐನಲ್ಲಿ ಏರಿಕೆಯಾಗಿರುವುದೇ ಫೊರೆಕ್ಸ್ ಮೀಸಲು ಹೆಚ್ಚಳಕ್ಕೆ ಪ್ರಮುಖ ಕಾರಣ. ಕಳೆದ 2 ತಿಂಗಳಲ್ಲಿ ವಿದೇಶಿ ಹೂಡಿಕೆದಾರರು ಅನೇಕ ಭಾರತೀಯ ಕಂಪನಿಗಳಲ್ಲಿ ಬಂಡವಾಳ ಹೂಡಿದ್ದಾರೆ. ಮಾರ್ಚ್ನಲ್ಲಿ 4 ಬಿಲಿಯನ್ ಡಾಲರ್ (30,382 ಕೋಟಿ ರೂ.) ಎಫ್ಡಿಐ ಬಂದಿದ್ದರೆ ಏಪ್ರಿಲ್ನಲ್ಲಿ ಅದು 2.10 ಬಿಲಿಯನ್ ಡಾಲರ್ (-15,950 ಕೋಟಿ ರೂ.) ಆಗಿದೆ ಎಂದು ಆರ್ಬಿಐ ತಿಳಿಸಿದೆ.
ಕಚ್ಚಾ ತೈಲ ಬೆಲೆಯಲ್ಲಿ ಕುಸಿದು, ಆಮದು ವೆಚ್ಚದಲ್ಲಿ ಭಾರಿ ಕಡಿತವಾಗಿ ವಿದೇಶಿ ವಿನಿಮಯ ಉಳಿತಾಯವಾಗಿರುವುದು ಕೂಡ ಫೊರೆಕ್ಸ್ ಏರಿಕೆಗೆ ಕಾರಣವಾಗಿದೆ. ವಿದೇಶಿ ಪಾವತಿಗಳು, ವಿದೇಶ ಪ್ರವಾಸಗಳು ಕೂಡ ತೀವ್ರವಾಗಿ ಕುಸಿದಿದೆ. ಏಪ್ರಿಲ್ನಲ್ಲಿ ಶೇಕಡಾ 61ರಷ್ಟು ಕುಸಿತವಾಗಿದೆ. ಹೀಗಾಗಿ, ಮೇ-ಜೂನ್ ತಿಂಗಳಲ್ಲಿ ಡಾಲರ್ ಹೊರಹೋಗುವಿಕೆ ಇನ್ನಷ್ಟು ಕಡಿಮೆಯಾಗಿದೆ.
ವಿದೇಶಿ ಆಸ್ತಿ
ಫೊರೆಕ್ಸ್ ಮೀಸಲು ಚಿನ್ನ, ಐಎಂಎಫ್ನಿಂದ ಸ್ಪೆಷಲ್ ಡ್ರಾಯಿಂಗ್ ಹಕ್ಕು (ಎಸ್ಡಿಆರ್) ಮತ್ತು ಬಂಡವಾಳ ಮಾರಕಟ್ಟೆಗೆ ಹರಿದು ಬರುವ ಹೂಡಿಕೆ, ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಹಾಗೂ ಬಾಹ್ಯ ವಾಣಿಜ್ಯ ಸಾಲಗಳನ್ನೊಳಗೊಂಡ ವಿದೇಶಿ ಕರೆನ್ಸಿ ಆಸ್ತಿಯಾಗಿರುತ್ತದೆ. ಭಾರತದಲ್ಲಿ ಇದನ್ನು ಆರ್ಬಿಐ ನಿಯಂತ್ರಿಸುತ್ತದೆ. 1991 ಮಾರ್ಚ್ನಲ್ಲಿ ಭಾರತದ ಫೊರೆಕ್ಸ್ 5.80 ಬಿಲಿಯನ್ ಡಾಲರ್ ಆಗಿತ್ತು. ಫೊರೆಕ್ಸ್ ಆಸ್ತಿಯು ಬ್ಯಾಂಕ್ ನೋಟ್, ಖಜಾನೆ ಬಿಲ್ ಅಥವಾ ಇತರೆ ಸರ್ಕಾರದ ಬಾಂಡ್ಗಳನ್ನು ಒಳಗೊಂಡಿರಬಹುದಾಗಿದೆ.