

ನವದೆಹಲಿ: ಜಗತ್ತಿನ ಐದನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿ ಭಾರತ ಈಗ ಹೊರಹೊಮ್ಮಿದೆ. 2019ರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ನ ಆರ್ಥಿಕತೆಗಳನ್ನು ಹಿಂದಿಕ್ಕಿ ಭಾರತ ಈ ಸಾಧನೆ ಮಾಡಿದೆ ಎಂದು ಅಮೆರಿಕದ ಥಿಂಕ್ ಟ್ಯಾಂಕ್ ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ತನ್ನ ವರದಿಯಲ್ಲಿ ಹೇಳಿದೆ.
ಭಾರತವು ತನ್ನ ಹಳೆಯ ನೀತಿಗಳನ್ನು ತೊರೆದು ಮುಕ್ತ ಮಾರುಕಟ್ಟೆಯ ಅರ್ಥ ವ್ಯವಸ್ಥೆಯ ಕಡೆಗೆ ಹೆಜ್ಜೆ ಹಾಕುತ್ತಿದೆ. ಭಾರತದ ಅರ್ಥ ವ್ಯವಸ್ಥೆ ಸದ್ಯ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನಕ್ಕೇರಿದೆ. ಭಾರತದ ಜಿಡಿಪಿ 2.94 ಲಕ್ಷ ಕೋಟಿ ಡಾಲರ್ ಆಗಿದ್ದು, 2019ರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ದೇಶಗಳನ್ನು ಹಿಂದಿಕ್ಕಿದೆ. ಈ ಪೈಕಿ ಬ್ರಿಟನ್ನ ಅರ್ಥ ವ್ಯವಸ್ಥೆ 2.83 ಲಕ್ಷ ಕೋಟಿ ಡಾಲರ್ ಆದರೆ, ಫ್ರಾನ್ಸ್ನದ್ದು 2.71 ಲಕ್ಷ ಕೋಟಿ ಡಾಲರ್.
ಖರೀದಿಸುವ ಸಾಮರ್ಥ್ಯದ ವಿಚಾರಕ್ಕೆ ಬಂದರೆ ಭಾರತದ ಜಿಡಿಪಿ 10.51 ಲಕ್ಷ ಕೋಟಿ ಡಾಲರ್ ಆಗಿದ್ದು, ಈ ಪ್ರಮಾಣ ಜಪಾನ್ ಮತ್ತು ಜರ್ಮನಿಗಿಂತ ಅಧಿಕ. ಭಾರತದ ಜನಸಂಖ್ಯೆ ಕಾರಣಕ್ಕೆ ಇಲ್ಲಿ ತಲಾಆದಾಯ ಪ್ರಮಾಣ 2,170 ಡಾಲರ್ (ಅಮೆರಿಕದ ತಲಾ ಆದಾಯ ಪ್ರಮಾಣ 62,794 ಡಾಲರ್).ಈ ಧನಾತ್ಮಕ ಅಂಶದ ಹೊರತಾಗ್ಯೂ ಭಾರತದ ನೈಜ ಜಿಡಿಪಿ ಬೆಳವಣಿಗೆ ಸತತ ಮೂರನೇ ವರ್ಷ ಶೇಕಡ 7.5ರಿಂದ ಶೇಕಡ 5ಕ್ಕೆ ಇಳಿಕೆಯಾಗಲಿದೆ ಎಂಬ ಅಂಶ ಕಾಡಿದೆ. ಭಾರತದಲ್ಲಿ ಆರ್ಥಿಕ ಉದಾರೀಕರಣ 1990ರಲ್ಲಿ ಆರಂಭವಾಗಿದೆ. ಸದ್ಯ ತೆಗೆದುಕೊಂಡಿರುವ ನಿರ್ಧಾರಗಳೆಲ್ಲವೂ ಭಾರತದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿವೆ ಎಂದು ವರದಿ ಹೇಳಿದೆ. (ಏಜೆನ್ಸೀಸ್)