ಬ್ಯಾಂಕ್​ಗಳ ಮಹಾವಿಲೀನ ಅನುಷ್ಠಾನ

Bank
Published on

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳ ಮಹಾವಿಲೀನ ಯೋಜನೆ ಬುಧವಾರ ಜಾರಿಗೆ ಬಂದಿದ್ದು, ಇದರ ಪರಿಣಾಮವಾಗಿ ಹತ್ತು ಬ್ಯಾಂಕ್​ಗಳು ವಿಲೀನಗೊಂಡು ನಾಲ್ಕು ದೊಡ್ಡ ಬ್ಯಾಂಕ್​ಗಳು ಅಸ್ತಿತ್ವಕ್ಕೆ ಬಂದಿವೆ. ಬ್ಯಾಂಕಿಂಗ್ ಕ್ಷೇತ್ರವನ್ನು ಬಲಪಡಿಸಿ ಆರ್ಥಿಕತೆಗೆ ಚೈತನ್ಯ ತುಂಬುವುದು ಇದರ ಉದ್ದೇಶ ಎಂದು ಸರ್ಕಾರ ಹೇಳಿದೆ. ದೇಶವನ್ನು 2025ರೊಳಗೆ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಪರಿವರ್ತಿಸುವಲ್ಲಿ ಇದು ಒಂದು ಪ್ರಮುಖ ಭಾಗ ಎಂದು ಸರ್ಕಾರ ತಿಳಿಸಿದೆ.

ಕರೊನಾ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ದೇಶವ್ಯಾಪಿ ಹೇರಿರುವ ಮೂರು ವಾರಗಳ ಲಾಕ್​ಡೌನ್ ಏಳನೇ ದಿನಕ್ಕೆ ಕಾಲಿಟ್ಟಿರುವ ನಡುವೆಯೇ ಬ್ಯಾಂಕ್ ವಿಲೀನ ಯೋಜನೆ ಅನುಷ್ಠಾನಕ್ಕೆ ಬಂದಿದೆ. ವಿಲೀನಗೊಂಡ ಬ್ಯಾಂಕ್​ಗಳ ಗ್ರಾಹಕರು ವಿಲೀನಗೊಂಡು ಅಸ್ತಿತ್ವಕ್ಕೆ ಬಂದ ಬ್ಯಾಂಕ್​ಗಳ ಗ್ರಾಹಕರಾಗಿ ಮುಂದುವರಿಯಲಿದ್ದಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ತಿಳಿಸಿದೆ. ಬ್ಯಾಂಕ್​ಗಳು ಸಾವಿರಾರು ಕೋಟಿ ರೂಪಾಯಿ ವಸೂಲಾಗದ ಸಾಲ ಹಾಗೂ ಹಗರಣಗಳ ಸುಳಿಯಲ್ಲಿ ಸಿಲುಕಿದ್ದಾಗ ಕೇಂದ್ರ ಸರ್ಕಾರ ಬ್ಯಾಂಕ್​ಗಳ ವಿಲೀನಕ್ಕೆ ಮುಂದಾಗಿತ್ತು.

# ಬ್ಯಾಂಕಿಂಗ್ ವಲಯದ ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಈ ವಲಯಕ್ಕೆ 2.6 ಲಕ್ಷ ಕೋಟಿ ರೂಪಾಯಿ ಹಣ ಒದಗಿಸಿದೆ.

# ಕೆಟ್ಟ ಆರ್ಥಿಕ ಪರಿಸ್ಥಿತಿಯನ್ನು ದೇಶ ಈಗಾಗಲೇ ಎದುರಿಸುತ್ತಿದೆ. ಕರೊನಾ ಕಾರಣ ಹೇರಿರುವ ಲಾಕ್​ಡೌನ್​ನಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಂಭವವಿದೆ.

ಯಾವ್ಯಾವ ಬ್ಯಾಂಕ್​ಗಳು?

  • ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ- ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ವಿಲೀನ.
  • ಕೆನರಾ ಬ್ಯಾಂಕ್​ನಲ್ಲಿ ಸಿಂಡಿಕೇಟ್ ಬ್ಯಾಂಕ್ ವಿಲೀನ.
  • ಇಂಡಿಯನ್ ಬ್ಯಾಂಕ್​ನಲ್ಲಿ ಅಲಹಾಬಾದ್ ಬ್ಯಾಂಕ್ ವಿಲೀನ.
  • ಆಂಧ್ರ ಬ್ಯಾಂಕ್ ಮತ್ತು ಕಾರ್ಪೆರೇಷನ್ ಬ್ಯಾಂಕ್​ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನ.

ವಿಲೀನದ ಪರಿಣಾಮ

ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತಮ್ಮ ವ್ಯವಹಾರಗಳ ಜೊತೆ ತಮ್ಮಲ್ಲಿ ವಿಲೀನವಾದ ಬ್ಯಾಂಕ್​ಗಳ ವ್ಯವಹಾರಗಳನ್ನೂ ನಿರ್ವಹಿಸಲಿವೆ.

ಸಂಖ್ಯೆ 12ಕ್ಕೆ ಇಳಿಕೆ

ಏಪ್ರಿಲ್ 1ರಂದು ಬ್ಯಾಂಕ್​ಗಳ ವಿಲೀನ ಅನುಷ್ಠಾನಕ್ಕೆ ಬಂದಿರುವುದರಿಂದ ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳ ಸಂಖ್ಯೆ 12ಕ್ಕೆ ಇಳಿದಿದೆ. ಇದರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ಸಹ ಸೇರಿದೆ. 2017ರಲ್ಲಿ ದೇಶದಲ್ಲಿ ಸಾರ್ವಜನಿಕ ವಲಯದ ಒಟ್ಟು 27 ಬ್ಯಾಂಕ್​ಗಳಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net