

ನವದೆಹಲಿ: ಭಾರತೀಯ ಕಂದಾಯ ಸೇವೆಯ (ಐಆರ್ಎಸ್) ಕೆಲವು ಆದಾಯ ತೆರಿಗೆ ಅಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ಒಂದು ಸಲಹೆ ನೀಡಿದ್ದ ಬಗ್ಗೆ ವರದಿಯಾಗಿತ್ತು.
ಕರೊನಾ ವೈರಸ್ನಿಂದ ಉಂಟಾಗಿರುವ ಆರ್ಥಿಕತೆ ಕುಸಿತದ ಪರಿಣಾಮವನ್ನು ನಿಭಾಯಿಸಲು ದೇಶದ ಸಿರಿವಂತರಿಗೆ ಹೆಚ್ಚಿನ ತೆರಿಗೆ ವಿಧಿಸಬೇಕು ಮತ್ತು ವಾರ್ಷಿಕ 10 ಲಕ್ಷ ರೂಪಾಯಿ ಆದಾಯ ಇರುವ ಎಲ್ಲರಿಗೂ ಕೋವಿಡ್ ರಿಲೀಫ್ ಸೆಸ್ ಹಾಕಬೇಕು ಎಂದು ಐಆರ್ಎಸ್ನ ಅಧಿಕಾರಿಗಳು ಒಂದು ವರದಿ ಸಿದ್ಧಪಡಿಸಿ, ಆದಾಯ ತೆರಿಗೆ ಇಲಾಖೆಗೆ ನೀಡಿದ್ದಾರೆ ಎಂದು ಹೇಳಲಾಗಿತ್ತು.
ಯಾರಿಗೆ ವಾರ್ಷಿಕ 1 ಕೋಟಿ ರೂಪಾಯಿ ಆದಾಯವಿರುತ್ತದೆಯೋ ಅಂಥವರಿಗೆ ಆದಾಯ ತೆರಿಗೆ ಸ್ಲ್ಯಾಬ್ನ್ನು ಶೇ.30ರಿಂದ ಶೇ.40ಕ್ಕೆ ಏರಿಸಬೇಕು ಎಂದು ಅಧಿಕಾರಿಗಳು ಸಲಹೆಯಲ್ಲಿ ಉಲ್ಲೇಖಿಸಿದ್ದಾರೆ ಎಂಬಂತಹ ಸುದ್ದಿಗಳು, ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ, ಕೆಲವು ಪ್ರಮುಖ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಆದರೆ ಇದಕ್ಕೆ ಆದಾಯ ತೆರಿಗೆ ಇಲಾಖೆ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದೆ.
ಆರ್ಥಿಕತೆ ಕುಸಿತ ಪರಿಸ್ಥಿತಿ ನಿಭಾಯಿಸಲು ಸಾರ್ವಜನಿಕರ ತೆರಿಗೆ ಹೆಚ್ಚಳ ಮಾಡುವಂತೆ ಭಾರತೀಯ ಕಂದಾಯ ಸೇವೆಯ ಕೆಲವು ಅಧಿಕಾರಿಗಳು ಆದಾಯ ತೆರಿಗೆ ಇಲಾಖೆಗೆ ಸಲಹೆಗಳನ್ನು ನೀಡಿದ್ದಾರೆಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ.
ಆದರೆ ಇಂತಹ ಒಂದು ಸಲಹೆಯನ್ನು, ವರದಿಯನ್ನು ಐಆರ್ಎಸ್ನಿಂದ ನೇರ ತೆರಿಗೆಗಳ ಕೇಂದ್ರ ಮಂಡಳಿ ಯಾವತ್ತೂ ಕೇಳಿಲ್ಲ.
ಆ ಅಧಿಕಾರಿಗಳು ತಮ್ಮ ಅಭಿಪ್ರಾಯವನ್ನು ಸಾರ್ವಜನಿಕರ ಎದುರು ಇಡುವ ಮೊದಲು ನಮ್ಮ ಅನುಮತಿಯನ್ನೂ ಪಡೆದಿಲ್ಲ. ಅದು ಅವರ ವೈಯಕ್ತಿಯ ಅಭಿಪ್ರಾಯಗಳು ಮತ್ತು ಸಲಹೆಗಳಷ್ಟೇ. ಆದರೆ ಹೀಗೆ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸಿದ್ದು ಸದ್ಯ ಇರುವ ನಿಯಮದ ಉಲ್ಲಂಘನೆಯಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಶೀಘ್ರವೇ ವಿಚಾರಣೆ ನಡೆಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಭಾರತೀಯ ಕಂದಾಯ ಸೇವಾಧಿಕಾರಿಗಳು ನೀಡಿದ್ದಾರೆ ಎನ್ನಲಾದ ಸಲಹಾ ವರದಿ ನೇರ ತೆರಿಗೆಗಳ ಕೇಂದ್ರ ಮಂಡಳಿ ಮತ್ತು ಹಣಕಾಸು ಸಚಿವಾಲಯದ ಅಧಿಕೃತ ನಿಯಮಗಳ ಮೇಲೆ ಯಾವುದೇ ಪರಿಣಾಮವನ್ನೂ ಬೀರುವುದಿಲ್ಲ. ನಮ್ಮ ನಿಯಮಗಳಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. (ಏಜೆನ್ಸೀಸ್)