ಕಚ್ಚಾತೈಲ ಕಚ್ಚಾಟ..! ಭಾರತಕ್ಕೆ ಲಾಭ !

OIL INDIA
Published on

ನವದೆಹಲಿ: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಮಾರಕ ಕರೊನಾವೈರಸ್​ನಿಂದ ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಬೆಲೆ ಸಮರ ಬಿಕ್ಕಟ್ಟು ಭಾರತಕ್ಕೆ ವರದಾನವಾಗಿ ಪರಿಣಮಿಸಿದ್ದು, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬರುತ್ತಿದೆ. ಕಚ್ಚಾತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ ಒಪೆಕ್ (ಒಪಿಇಸಿ) ತೈಲ ಬೆಲೆ ನಿಯಂತ್ರಣಕ್ಕಾಗಿ ಉತ್ಪಾದನೆ ಕಡಿತಕ್ಕೆ ಮಾಡಿದ್ದ ಪ್ರಸ್ತಾವನೆ ತಿರಸ್ಕರಿಸಿರುವ ರಷ್ಯಾ ಮತ್ತು ಸೌದಿ ಅರೇಬಿಯಾ ಬೆಲೆ ಸಮರಕ್ಕಿಳಿದಿರುವುದರಿಂದ ಕಚ್ಚಾತೈಲ ಬೆಲೆ ಮೂರು ದಶಕಗಳಲ್ಲೇ ಮೊದಲ ಬಾರಿ ಶೇ.31 ಕುಸಿತ ದಾಖಲಿಸಿದೆ. ಇದರಿಂದಾಗಿ ಪೆಟ್ರೋಲ್-ಡೀಸೆಲ್ ಬೆಲೆ ಭಾರಿ ಇಳಿಕೆಯಾಗಿ ವಾಹನ ಸವಾರರಿಗೆ ನಿರಾಳತೆ ಸಿಕ್ಕಿದೆ.

ಏನು ಪರಿಣಾಮ?

ತೈಲ ಬೆಲೆ ಇಳಿಕೆ: ಭಾರತ ಪ್ರತಿವರ್ಷ 1.5 ಬಿಲಿಯನ್ ಬ್ಯಾರೆಲ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದ್ದು, ಇದು ದೇಶದ ತೈಲ ಬೇಡಿಕೆಯ ಶೇಕಡಾ 86 ಪಾಲು ಹೊಂದಿದೆ. ಪ್ರಸ್ತುತ ಕಚ್ಚಾತೈಲ ಬೆಲೆ ಇಳಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಹಣ ಉಳಿತಾಯವಾಗಲಿದೆ. ಜತೆಗೆ ಸರ್ಕಾರ ಇಂಧನಗಳ ಮೇಲೆ ಹೆಚ್ಚಿನ ತೆರಿಗೆ ವಸೂಲಿ ಮಾಡಿದರೂ ಗ್ರಾಹಕರಿಗೆ ಹೆಚ್ಚು ಹೊರೆಯಾಗುವುದಿಲ್ಲ.

ರೂಪಾಯಿ ಮೌಲ್ಯ: ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಡಾಲರ್ ಎದುರು 74ರ ಗಡಿ ಮುಟ್ಟಿರುವ ರೂಪಾಯಿ ಮುಂದಿನ ದಿನಗಳಲ್ಲಿ ಇದೇ ರೀತಿ ತೈಲ ಬೆಲೆ ಇಳಿಕೆಯಾದರೆ ಮೌಲ್ಯ ಹೆಚ್ಚಿಸಿಕೊಳ್ಳುವ ಸಂಭವವಿದೆ. ಉತ್ಪಾದನಾ ವೆಚ್ಚ ಇಳಿಕೆ: ಕಚ್ಚಾತೈಲವು ಪೆಟ್ರೋಲ್-ಡೀಸೆಲ್ ಹೊರತಾಗಿ ಹಲವು ಕೈಗಾರಿಕೆಗಳಲ್ಲಿ ಬಳಸುವ ಪ್ರಮುಖ ಇಂಧನವಾಗಿದೆ. ಹೀಗಾಗಿ ಉತ್ಪಾದನಾ ವೆಚ್ಚದಲ್ಲಿ ಇಳಿಕೆಯಾಗಲಿದೆ.

ದೊಡ್ಡ ಪರಿಣಾಮ: ಕಚ್ಚಾತೈಲ ಬೆಲೆಯಲ್ಲಿ 1 ಡಾಲರ್ ಬೆಲೆ ಇಳಿಕೆಯಾದರೂ ಕೂಡ ಭಾರತದ ಒಂದು ವರ್ಷದ ಕಚ್ಚಾತೈಲ ಆಮದಿನ ವೆಚ್ಚದಲ್ಲಿ ಬರೋಬ್ಬರಿ 2,936 ಕೋಟಿ ರೂ. ಉಳಿತಾಯವಾಗಲಿದೆ. ಇದರ ಜತೆಗೆ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ 1 ರೂ. ಏರಿಕೆಯಾದರೂ ಭಾರತದ ಆಮದಿನಲ್ಲಿ 2,729 ಕೋಟಿ ರೂ. ಉಳಿತಾಯವಾಗಲಿದೆ.

ವಿದೇಶಗಳ ಮೇಲೇನು ಪರಿಣಾಮ?

ಕಚ್ಚಾತೈಲ ಬೆಲೆ ಇಳಿಕೆ ತೈಲರಫ್ತು ರಾಷ್ಟ್ರಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು, ಇದೇ ಸ್ಥಿತಿ ಮುಂದುವರಿದರೆ ಅವು ಸಂಕಷ್ಟಕ್ಕೆ ಸಿಲುಕಲಿವೆ. ಮತ್ತೊಂದೆಡೆ ತೈಲ ಆಮದು ರಾಷ್ಟ್ರಗಳಿಗೆ ಇದು ವರದಾನವಾಗಿದ್ದು, ಆ ದೇಶಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆಯಾಗಲಿದೆ. ಆದರೆ ಇದು ಚೀನಾದ ವಿಷಯದಲ್ಲಿ ವಿರುದ್ಧವಾಗಿದೆ. ಅತೀ ದೊಡ್ಡ ತೈಲ ಆಮದು ರಾಷ್ಟ್ರವಾಗಿದ್ದರೂ ಕೂಡ ಚೀನಾ ಕಚ್ಚಾತೈಲ ಬೆಲೆ ಇಳಿಕೆಯ ಪ್ರಯೋಜನ ಪಡೆಯಲಾಗುತ್ತಿಲ್ಲ. ಕರೊನಾ ಮಾರಿಯಿಂದಾಗಿ ಚೀನಾದ ಬಹುತೇಕ ನಗರಗಳು ಸ್ಥಬ್ದವಾಗಿರುವುದರಿಂದ ಈಗಾಗಲೇ ಚೀನಾ ಬಳಿ ಸಾಕಷ್ಟು ಇಂಧನ ದಾಸ್ತಾನು ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net