

ಮುಂಬೈ: ಷೇರುಪೇಟೆಯಲ್ಲಿ ಸೋಮವಾರ ಭಾರಿ ಕುಸಿತ ಉಂಟಾಗಿದ್ದು, ಹೂಡಿಕೆದಾರರ -ಠಿ; 4.23 ಲಕ್ಷ ಕೋಟಿ ಸಂಪತ್ತು ಕರಗಿದೆ. ಸೆಕ್ಸೆಕ್ಸ್ನಲ್ಲಿ 811.68 (ಶೇ. 2.09) ಅಂಶ ಇಳಿಕೆ ಉಂಟಾಗಿದ್ದು, 38,034.14ಕ್ಕೆ ವಹಿವಾಟು ಅಂತ್ಯಗೊಂಡಿದೆ. ನಿಫ್ಟಿಯಲ್ಲಿ 254.40 ಅಂಶ (ಶೇ. 2.21) ತಗ್ಗಿದ್ದು, 11,250.55ಕ್ಕೆ ವಹಿವಾಟು ಮುಗಿದಿದೆ.
ಇಂಡಸ್ ಬ್ಯಾಂಕ್ ಷೇರು ಮೌಲ್ಯ ಶೇ. 8.67 ನಷ್ಟವಾಗಿದ್ದು, ಭಾರ್ತಿ ಏರ್ಟೆಲ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್ ಎಂಆಂಡ್ಎಂ, ಮಾರುತಿ, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್ ಕಂಪನಿಗಳು ನಷ್ಟ ಅನುಭವಿಸಿವೆ. ಪತನದ ಮಧ್ಯೆಯೂ ಕೊಟಾಕ್ ಬ್ಯಾಂಕ್, ಇನ್ಪೋಸಿಸ್, ಟಿಸಿಎಸ್ ಷೇರು ಮೌಲ್ಯ ಶೇ. 0.86ರಷ್ಟು ಲಾಭ ದಾಖಲಿಸಿವೆ. ಇದನ್ನೂ ಓದಿ: ಡೊಳ್ಳು ಹೊಟ್ಟೆ ಕ್ರಿಕೆಟಿಗರ ಟೂರ್ನಿಯಾಯಿತೇ ಐಪಿಎಲ್?
ಯುರೋಪ್ನ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ಹೆಚ್ಚಾದ ಎರಡನೇ ಸುತ್ತಿನ ಲಾಕ್ಡೌನ್ ಘೋಷಣೆ ಮಾಡಿರುವ ಕಾರಣ ಐರೋಪ್ಯ ಷೇರುಪೇಟೆ ತಲ್ಲಣಿಸಿದೆ. ಇದರ ಪರಿಣಾಮ ಭಾರತದ ಷೇರು ಮಾರುಕಟ್ಟೆಯ ಮೇಲೆ ಉಂಟಾಗಿದೆ. ಡನ್ಮಾರ್ಕ್, ಗ್ರೀಸ್, ಸ್ಪೇನ್ಗಳಲ್ಲಿ ಹೊಸದಾಗಿ ನಿರ್ಬಂಧ ಜಾರಿ ಮಾಡಲಾಗಿದ್ದು, ಬ್ರಿಟನ್ನಲ್ಲಿ ಮತ್ತೆ ಲಾಕ್ಡೌನ್ ವಿಧಿಸಲು ಚಿಂತನೆ ನಡೆದಿದೆ.
ದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಕಡಿಮೆಯಾಗಿದೆ. ಚಿನ್ನದ ಬೆಲೆ 326 ರೂ. ಇಳಿಕೆಯಾಗಿದ್ದು, 10 ಗ್ರಾಂ ದರ 52,423 ರೂ. ರಷ್ಟಾಗಿದೆ. ಬೆಳ್ಳಿ ಬೆಲೆಯಲ್ಲಿ 945 ರೂ. ಇಳಿಕೆಯಾಗಿದ್ದು, ಒಂದು ಕೆ.ಜಿ ಬೆಲೆ 68,289 ರೂ. ಆಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 7 ಪೈಸೆಯಷ್ಟು ಹೆಚ್ಚಳಗೊಂಡಿದ್ದು, 73.38 ರೂ.ಕ್ಕೆ ವಿದೇಶಿ ವ್ಯವಹಾರ ಸ್ಥಿರವಾಗಿದೆ.