

ಆರೋಗ್ಯ ವಿಮೆಯೆಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು 2 ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗಿನ ಮೊತ್ತ. ದೊಡ್ಡ ಕಾಯಿಲೆಗಳು ಬಂದರೆ ಈ ಹಣ ಸಾಲುವುದಿಲ್ಲ. ಹಾಗಾಗಿ ವಿಮಾ ಕಂಪನಿಗಳೀಗ 1 ಕೋಟಿ ರೂ.ನಿಂದ ಹಿಡಿದು 2.5 ಕೋಟಿ ರೂ.ವರೆಗಿನ ವಿಮಾ ಯೋಜನೆಗಳನ್ನು ಪರಿಚಯಿಸಿದ್ದು, ಗ್ರಾಹಕರು ಅವುಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ.
ಒಂದು ಕೋಟಿ ರೂಪಾಯಿಯ ಟಮ್ರ್ ಇನ್ಶುರೆನ್ಸ್ ಪಾಲಿಸಿಗಳೇನೋ ಸರ್ವೆಸಾಮಾನ್ಯ. ಆದರೆ ಅಷ್ಟೇ ಮೊತ್ತದ ಆರೋಗ್ಯ ವಿಮೆ? ಅಷ್ಟು ದೊಡ್ಡ ಮೊತ್ತದ ಆರೋಗ್ಯ ವಿಮೆ ಮಾಡಿಸಲು ಹುಚ್ಚು ಹಿಡಿದಿದೆಯಾ ಅಂತ ಕೇಳಬೇಡಿ. ಅದು ಕೂಡ ಈಗ ಸಾಮಾನ್ಯವಾಗುತ್ತಿದೆ!
ಆರೋಗ್ಯಸೇವೆ ಮತ್ತು ಚಿಕಿತ್ಸೆಗಳ ವೆಚ್ಚ ಹೆಚ್ಚುತ್ತಿದ್ದಂತೆ ಜನರು ವಿಮೆಯ ಮೊತ್ತವನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮೊದಲು 3, 5, 10 ಲಕ್ಷ ರೂ.ನಷ್ಟು ಮಾತ್ರ ಇರುತ್ತಿದ್ದ ಆರೋಗ್ಯವಿಮೆಯ ಮೊತ್ತ ಈಗ ಕೋಟಿ ರೂ.ಗೆ ತಲುಪಿರುವುದು ಆಶ್ಚರ್ಯವಾದರೂ ಸತ್ಯ.
ಭಾರತದಲ್ಲಿ ಆರೋಗ್ಯ ಕಾಳಜಿಗಾಗಿ ತಮ್ಮ ಕಿಸೆಯಿಂದ ಖರ್ಚು ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ವಿಮೆ ಮಾಡಿಸಿ ಅದರ ಮೂಲಕವೇ ಪಾವತಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸದ್ಯದ ಅಂಕಿ ಅಂಶಗಳ ಪ್ರಕಾರ, ಒಟ್ಟಾರೆ ಆರೋಗ್ಯಕ್ಕಾಗಿ ಆಗುತ್ತಿರುವ ವೆಚ್ಚದಲ್ಲಿ ಶೇಕಡ 65ರಷ್ಟು ವಿಮಾ ಪಾಲಿಸಿಗಳ ಮೂಲಕವೇ ಪಾವತಿಯಾಗುತ್ತಿದೆ. ಕುಟುಂಬದಲ್ಲಿ ಯಾರಿಗಾದರೂ ದೊಡ್ಡ ಪ್ರಮಾಣದಲ್ಲಿ ಅನಾರೋಗ್ಯ ಉಂಟಾದರೆ ಅದಕ್ಕೆ ವೈಯಕ್ತಿಕ ಉಳಿತಾಯದ ಹಣ ಖರ್ಚು ಮಾಡುವುದು ಅಸಾಧ್ಯ. ಹಾಗೆ ಮಾಡಿದರೆ ಉಳಿತಾಯದ ಹಣವೆಲ್ಲ ಅಲ್ಲಿಗೇ ಮುಗಿದುಹೋಗುತ್ತದೆ. ಆದ್ದರಿಂದ ವಿಮೆ ಮಾಡಿಸುವುದು ಈಗ ಮೂಲಭೂತ ಅವಶ್ಯಕತೆಗಳಲ್ಲಿ ಒಂದು ಎನಿಸಿಬಿಟ್ಟಿದೆ. ಎಷ್ಟೋ ಸಂದರ್ಭಗಳಲ್ಲಿ ಅದರ ಮೇಲೆ ಅವಲಂಬಿತರಾಗುವುದು ಅನಿವಾರ್ಯವೂ ಆಗಿಬಿಟ್ಟಿದೆ. ಅಂಗಾಂಗ ಕಸಿ, ಹೃದ್ರೋಗ, ಕ್ಯಾನ್ಸರ್ ಮುಂತಾದವುಗಳಿಗೆ ಚಿಕಿತ್ಸೆಗೆ ಹೋದರೆ 7 ಲಕ್ಷ, 10 ಲಕ್ಷದ ವಿಮೆಯ ಹಣ ಯಾವುದಕ್ಕೂ ಸಾಲುವುದಿಲ್ಲ. ಕಡಿಮೆ ಎಂದರೂ 40ರಿಂದ 60 ಲಕ್ಷ ರೂ.ನಷ್ಟು ಹಣ ಖರ್ಚಾಗುತ್ತದೆ. ಅಂಥ ಸಂದರ್ಭದಲ್ಲಿ ಸಾಮಾನ್ಯ ವಿಮಾ ಪಾಲಿಸಿಗಳ ಮೇಲೆ ಅವಲಂಬಿತರಾಗಲು ಸಾಧ್ಯವಾಗುವುದಿಲ್ಲ.
ಒಂದು ಸಮೀಕ್ಷೆಯ ಪ್ರಕಾರ, ಭಾರತದಲ್ಲಿ 2017ರಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 15 ಲಕ್ಷ ಇತ್ತು. 2020ರ ಅಂತ್ಯದ ವೇಳೆಗೆ ಇದು 17.3 ಲಕ್ಷ ದಾಟುವ ಸಾಧ್ಯತೆ ಇದೆ. ಇನ್ನೊಂದೆಡೆ ಹೃದಯ ಸಂಬಂಧಿ ಪ್ರಕರಣಗಳ ಸಂಖ್ಯೆಯೂ ಕಳೆದ ಎರಡು ದಶಕಗಳಲ್ಲಿ ಎಲ್ಲ ರಾಜ್ಯಗಳಲ್ಲಿ ಏರುತ್ತಲೇ ಇದೆ. ಹಾಗಾಗಿಯೇ ಈಗ ಬಹಳಷ್ಟು ವಿಮಾ ಕಂಪನಿಗಳು 8 ಅಂಕಿಯ ಮೊತ್ತದ ವಿಮಾ ಕವರ್ ನೀಡಲು ಮುಂದಾಗಿವೆ. 1 ಕೋಟಿ ರೂ.ನಿಂದ 2.5 ಕೋಟಿ ರೂ.ವರೆಗೂ ವಿಮಾ ಮೊತ್ತದ ಪಾಲಿಸಿಗಳು ಈಗ ಮಾರುಕಟ್ಟೆಗೆ ಬಂದಿವೆ.
ಬಹುಕಾಲದಿಂದ ಗಂಭೀರ ಕಾಯಿಲೆಯ ಇತಿಹಾಸ ಹೊಂದಿದ ಕುಟುಂಬದವರಾಗಿದ್ದರೆ ಇಂತಹ ದುಬಾರಿ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದೇ ವಿಹಿತ.
ಕ್ಯಾನ್ಸರ್ ಅಡ್ವಾನ್ಸ್ಡ್ ಸ್ಟೇಜ್ನಲ್ಲಿದ್ದರೆ ದೀರ್ಘಕಾಲ ಆಸ್ಪತ್ರೆಯಲ್ಲಿರುವುದು ಅತ್ಯಗತ್ಯ. ಹೆಚ್ಚಿನ ವೆಚ್ಚದ ಚಿಕಿತ್ಸೆಯೂ ಬೇಕಾಗುತ್ತದೆ. ಆಗ ದುಬಾರಿ ವಿಮೆ ಅನಿವಾರ್ಯವಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯಬೇಕಾಗುತ್ತದೆ. ಆಗಲೂ ಕಡಿಮೆ ಮೊತ್ತದ ವಿಮಾ ಪಾಲಿಸಿ ನಿಷ್ಪ್ರಯೋಜಕವಾಗುತ್ತದೆ.
ಕೆಲವು ಕಂಪನಿಗಳ ದುಬಾರಿ ವಿಮಾ ಪ್ಲಾನ್ ಅಡಿಯಲ್ಲಿ ಸರಿಯಾಗಿ 1 ಕೋಟಿ ರೂ. ಆರೋಗ್ಯ ವಿಮೆಯ ಅವಕಾಶ ಇದೆ. 5 ಲಕ್ಷ ರೂ. ಬೇಸ್ ಕವರ್ ಮತ್ತು ಸೂಪರ್ ಹೆಲ್ತ್ ಟಾಪ್ಅಪ್ ಆಗಿ 95 ಲಕ್ಷ ರೂ.ನ ಆರೋಗ್ಯ ಕವರ್ ಇದರಲ್ಲಿರುತ್ತದೆ. ಒಟ್ಟು ವಿಮಾ ಮೊತ್ತ 1 ಕೋಟಿಯಾಗುತ್ತದೆ. ವ್ಯಕ್ತಿಯು 5 ಲಕ್ಷ ರೂ. ವರೆಗಿನ ವೈದ್ಯಕೀಯ ವೆಚ್ಚವನ್ನು ಸ್ವಂತ ಬಲದಿಂದ ಪೂರೈಸಿದ ಬಳಿಕ ಸೂಪರ್ ಟಾಪ್ಅಪ್ ಪಾಲಿಸಿಯಿಂದ ಕ್ಲೇಮ್ ಮಾಡಲು ಸಾಧ್ಯ.
ಟಾಪ್ಅಪ್ ಅಥವಾ ಸೂಪರ್ ಟಾಪ್ಅಪ್ ಪ್ಲ್ಯಾನ್ನಲ್ಲಿ ಡಿಡಕ್ಟಿಬಲ್ ಮತ್ತು ಸಮ್ ಇನ್ಷೂರ್ಡ್ ಎಂಬ ಎರಡು ಕಾಂಪೋನೆಂಟ್ಗಳಿರುತ್ತವೆ. ಡಿಡಕ್ಟಿಬಲ್ ಮೊತ್ತವನ್ನು ಮೊದಲೇ ನಿರ್ಧರಿಸಲಾಗುತ್ತದೆ. ಅದು ಗ್ರಾಹಕ ತನ್ನ ವೈಯಕ್ತಿಕ ಉಳಿತಾಯದಿಂದ ಅಥವಾ ಬೇರೆ ಕಡಿಮೆ ಮೊತ್ತದ ವಿಮಾ ಪಾಲಿಸಿಯಿಂದ ಅಥವಾ ಮತ್ಯಾವುದೇ ಆದಾಯ ಮೂಲದಿಂದ ಆಸ್ಪತ್ರೆಗೆ ಪಾವತಿಸಬೇಕಾದದ್ದು. ಇದಕ್ಕೆ ಮೀರಿ ಆಗುವ ವೆಚ್ಚವನ್ನು ವಿಮಾ ಕಂಪನಿ ಭರಿಸುತ್ತದೆ. ಡಿಡಕ್ಟಿಬಲ್ ಮೊತ್ತ ಹೆಚ್ಚಿದ್ದಷ್ಟೂ ಟಾಪ್ಅಪ್ ಅಥವಾ ಸೂಪರ್ ಟಾಪ್ಅಪ್ನ ಪ್ರೀಮಿಯಂ ಮೊತ್ತ ಕಡಿಮೆ ಇರುತ್ತದೆ.
ಜಗತ್ತಿನ ಯಾವುದೇ ಭಾಗದಲ್ಲಿ ತುರ್ತು ಚಿಕಿತ್ಸೆ, ಹೊರರೋಗಿ ವಿಭಾಗದ ವೆಚ್ಚ, ಡೇಕೇರ್ ಸೌಲಭ್ಯ, ಗಂಭೀರ ಸ್ಥಿತಿ ಇದ್ದರೆ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿಬರುವ ವಿಮಾನಯಾನ ವೆಚ್ಚ ಮುಂತಾದವುಗಳನ್ನು ಕಂಪನಿಗಳು ಭರಿಸುತ್ತವೆ. ಅಷ್ಟೇ ಅಲ್ಲ, ಹೋಮಿಯೋಪಥಿ, ಆಯುರ್ವೆದ ಮುಂತಾದ ಚಿಕಿತ್ಸೆಗಳನ್ನೂ ಕೆಲವು ಮಿತಿಗಳವರೆಗೆ ಇವು ಕವರ್ ಮಾಡುತ್ತವೆ. 18ರಿಂದ 65 ವರ್ಷದೊಳಗಿನ ಯಾವುದೇ ವ್ಯಕ್ತಿ ಇಂಥ ವಿಮೆ ಮಾಡಿಸಿಕೊಳ್ಳಬಹುದು. ಪತ್ನಿ/ಪತಿ, ತಂದೆ-ತಾಯಿ, ಮಕ್ಕಳು ಸೇರಿದಂತೆ ಕುಟುಂಬದ ಆರು ಸದಸ್ಯರು ಕವರ್ ಆಗುತ್ತಾರೆ. ಆದಿತ್ಯ ಬಿರ್ಲಾ, ಮಣಿಪಾಲ್ ಸಿಗ್ನಾ, ಮ್ಯಾಕ್ಸ್ ಬೂಪಾ, ಸ್ಟಾರ್, ರಾಯಲ್ ಸುಂದರಂ, ಡಿಜಿಟ್ ಮುಂತಾದ ಕಂಪನಿಗಳು ಇಂತಹ ವಿಮಾ ಯೋಜನೆಗಳನ್ನು ಹೊಂದಿವೆ.
ಅಮಿತ್ ಛಾಬ್ರಾ
(ಲೇಖಕರು ಪಾಲಿಸಿಬಜಾರ್ ಡಾಟ್ ಕಾಮ್
ಆರೋಗ್ಯ ವಿಮಾ ವಿಭಾಗದ ಮುಖ್ಯಸ್ಥರು)