ಹಣ-ಝಣ-ಮನ ಅಂಕಣ| ಬರೀ ಅದೃಷ್ಟವನ್ನೇ ನಂಬಿ ಕೂರಬೇಡಿ...

money job
Published on
ಪ್ರೊ. ಬಾಸ್ ಅಂತ ಮೈಸೂರಿನ ಯಕ್ಷಿಣಿಗಾರ ಸ್ನೇಹಿತರೊಬ್ಬರು ಬೆಂಗಳೂರಿಗೆ ಆಗಾಗ್ಗೆ ಬರುತ್ತಿದ್ದರು. ಅವರು ಒಂದು ದಿನ ಸಿಕ್ಕಿದಾಗ, ‘ಇಪ್ಪತೆôದು ವರ್ಷಗಳಿಂದ ಪ್ರತಿ ಸಲ ಮೈಸೂರಿಂದ ಬರುವಾಗೆಲ್ಲ ಲಾಟರಿ ಟಿಕೆಟ್​ಗಳನ್ನು ತೆಗೆದುಕೊಳ್ತೀನಿ ಉದಯ್, ಆದ್ರೆ ಒಂದು ಸಲಾನೂ ಲಾಟರಿ ಹೊಡೆಯಲಿಲ್ವಲ್ರೀ, ಏನನ್ಯಾಯರೀ ಇದು?’ ಎಂದರು. ಅವರಿಗೆ ನಾನು- ‘ಇಪ್ಪತೆôದು ವರ್ಷಗಳಿಂದ ಪ್ರಯಾಣ ಮಾಡುತ್ತಿದ್ದೀರಿ. ಎಷ್ಟೊಂದು ಜನ ಇದೇ ರಸ್ತೆಯಲ್ಲಿ ಪ್ರಯಾಣಿಸುವವರು ಅಪಘಾತವಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ನಿಮಗೆ ಯಾಕೆ ಒಂದು ಸಲವೂ ಅಪಘಾತವಾಗಿಲ್ಲ ಎಂದು ಯಾಕೆ ಕೇಳಿಕೊಂಡಿಲ್ಲ? ನಿಮಗೆ ಒಳ್ಳೆಯದಾದಾಗ ದೇವರಲ್ಲಿ ಕೇಳಿಕೊಂಡಿದ್ದೀರಾ ಇಷ್ಟು ಜನರಲ್ಲಿ ನನಗ್ಯಾಕೆ ಒಳ್ಳೆಯದು ಮಾಡುತ್ತೀ ಎಂದು? ಹಾಗೇನೇ ಜೀವನದಲ್ಲಿ ಲಾಟರಿ ಎನ್ನುವುದು ಹತ್ತು ನಂಬರಿನಲ್ಲಿ ಒಂದು ಬರಬೇಕೆಂದರೆ ಹತ್ತರಲ್ಲಿ ಒಂದು ಚಾನ್ಸು, ಅಂದರೆ 10% ಚಾನ್ಸು. ನೂರು ನಂಬರಲ್ಲಿ ಒಂದು ಬರಬೇಕೆಂದರೆ ನೂರರಲ್ಲಿ ಒಂದು ಚಾನ್ಸು. ಅಂದರೆ 1% ಚಾನ್ಸು. ಲಾಟರಿ ಟಿಕೆಟ್​ನಲ್ಲಿ ಎಷ್ಟು ನಂಬರುಗಳಿರುತ್ತವೆ ಅಂತ ನೋಡಿದ್ದೀರಾ? ಹತ್ತೋ ಹನ್ನೆರಡೋ ನಂಬರ್ ಎಂದರೆ ಎಷ್ಟೋ ಕೋಟಿಗಳಲ್ಲಿ ನಿಮ್ಮದು ಒಂದು ನಂಬರ್. ಅದೇ ಬರಬೇಕೆಂದರೆ .00000001% ಚಾನ್ಸ್. ಅದು ಎಷ್ಟು ಕಮ್ಮಿ ಚಾನ್ಸ್ ಅಂತ ನೀವೇ ಲೆಕ್ಕ ಹಾಕಿ’ ಎಂದೆ.

ಜೂಜಾಡುವವರು ‘ಅಯ್ಯೋ ಅವರಿಗೆ ಬಂದಿಲ್ವಾ ಇವರಿಗೆ ಬಂದಿಲ್ವಾ’ ಎಂದು ಬಂದವರ ಉದಾಹರಣೆ ಕೊಟ್ಟು ಜೂಜಾಡುತ್ತಲೇ ಇರುತ್ತಾರೆ. ಜೂಜು ಒಳ್ಳೆಯದಲ್ಲ, ಗೆದ್ದವರು ಇನ್ನೂ ಗೆಲ್ಲಲು, ಸೋತವರು ಸೋತ ಹಣ ಪಡೆಯಲು, ಲಾಭ ನಷ್ಟ ಆಗದವರು ಲಾಭ ಮಾಡಲು ಆಡುತ್ತಲೇ ಇರುತ್ತಾರೆ. ಗ್ಯಾಂಬ್ಲಿಂಗ್ ಎನ್ನುವುದರ ಹುಚ್ಚು ಹತ್ತಿದರೆ ಅದರಿಂದ ಅಷ್ಟು ಸುಲಭವಾಗಿ ಹೊರಬರಲು ಆಗುವುದೇ ಇಲ್ಲ, ಇದಕ್ಕೆ ಕೊನೆಯೇ ಇಲ್ಲ. ಇದು ಧರ್ಮರಾಯನನ್ನೂ ಬಿಟ್ಟಿರಲಿಲ್ಲ. ತುಂಬ ಜನ ಲಾಟರಿಯಲ್ಲಿ ಕೋಟಿಗಟ್ಟಲೆ ಗೆದ್ದವರನ್ನು ಒಂದೆರಡು ವರ್ಷ ಬಿಟ್ಟು ನೋಡಿದರೆ ಅವರಲ್ಲಿ ಏನೂ ಹಣ ಉಳಿದಿರುವುದಿಲ್ಲ. ಲಾಟರಿ ಹಣ ಬಂದಾಗ ಸ್ನೇಹಿತರು, ಸಂಬಂಧಿಕರು, ‘ಬಾರಯ್ಯಾ, ಒಂದು ಬಿಜಿನೆಸ್ ಮಾಡೋಣ, ನೀನು ಹಣ ಹಾಕು ಸಾಕು, ಉಳಿದದ್ದನ್ನೆಲ್ಲ ನಾನೇ ನೋಡಿಕೊಂಡು ನಿನಗೆ ಲಾಭದಲ್ಲಿ ಪರ್ಸೆಂಟೇಜ್ ಕೊಡ್ತೀನಿ, ಅಂತ ಹಣವನ್ನು ಕಿತ್ತುಕೊಂಡು ಹೋಗಿರುತ್ತಾರೆ. ಇಲ್ಲ ಹೆಚ್ಚು ಬಡ್ಡಿ ಆಸೆಗೆ IMA ಅಂತಹ ಸಂಸ್ಥೆಯಲ್ಲಿ ಹಣ ತೊಡಗಿಸಿಯೋ, ಇಲ್ಲ ನೈಜೀರಿಯನ್ ಸ್ಕಾಮ್ನಲ್ಲಿಯೋ (ಇದರ ಬಗ್ಗೆ ಮುಂದೆ ವಿವರವಾಗಿ ಬರೆಯುತ್ತೇನೆ) ಹಣವನ್ನು ಕಳೆದುಕೊಂಡಿರುತ್ತಾರೆ. ಹಣ ಕಳೆದುಕೊಳ್ಳುವ ತನಕ ನಿದ್ರೆ ಬೀಳುವುದೇ ಇಲ್ಲ. ಹಾಗಾಗಿ ಲಾಟರಿ ಹೊಡೆಯುವುದಕ್ಕೆ ಮೊದಲಿದ್ದ ಪರಿಸ್ಥಿತಿಗಿಂತ ಇನ್ನೂ ಹೀನಾಯ ಸ್ಥಿತಿಗೆ ಬಂದವರನ್ನು ನಾನು ನೋಡಿದ್ದೇನೆ.

ಕಾಡುಗಳ್ಳ ವೀರಪ್ಪನ್​ನಿಂದ ಅಪಹರಣಕ್ಕೊಳಗಾದ ಡಾ.ರಾಜಕುಮಾರ್ ಮರಳಿ ಬಂದಾಗ ಇಂಗ್ಲಿಷ್ ಪತ್ರಿಕೆಯವರೊಬ್ಬರು ಸಂದರ್ಶನವೊಂದರಲ್ಲಿ ಕೇಳಿದ್ದರು- ‘ಸರ್, ನಿಮಗೆ ದೇವರ ಬಗ್ಗೆ ಬೇಸರ ಬಂದು ನೀವು ಕೇಳಲಿಲ್ಲವಾ, ಇಷ್ಟು ಕೋಟಿ ಜನರಲ್ಲಿ ನನ್ನನ್ನೇ ಯಾಕೆ ಈ ಕಷ್ಟಕ್ಕೆ ದೂಡಿದೆ ಅಂತ. ನನಗಿಂತ ದೊಡ್ಡ ರಾಜಕಾರಣಿಗಳು, ಶ್ರೀಮಂತರು, ಬೇರೆ ಬೇರೆ ನಟರು ಇದ್ದಾಗ ನನ್ನನ್ನೇ ಯಾಕೆ ಅಪಹರಣ ಮಾಡಬೇಕಿತ್ತು ಅಂತ’, ರಾಜ್ ಹೇಳಿದರಂತೆ, ‘ನೋಡಿ, ನಾನೊಬ್ಬ ಮುತ್ತುರಾಜ ಎಂದು ನಾಟಕದ ಪರದೆ ಎಳೆದುಕೊಂಡು ಇದ್ದವನು. ಅಲ್ಲಿಂದ ನನ್ನನ್ನು ಬೆಳೆಸಿ ದೊಡ್ಡ ನಟನನ್ನಾಗಿ, ಡಾ.ರಾಜಕುಮಾರನನ್ನಾಗಿ ಮಾಡಿ ಹಲವಾರು ಸನ್ಮಾನ, ಅವಾರ್ಡ್​ಗಳನ್ನು ಕೊಡಬೇಕಾದರೆ ನಾನು ಒಂದು ದಿನ ಕೇಳಿದ್ದೀನಾ, ಇಷ್ಟು ಕೋಟಿ ಜನರಲ್ಲಿ ನನ್ನನ್ನೇ ಯಾಕೆ ಆರಿಸಿದೆ ಅಂತ. ಯಾವಾಗ ಸುಖ ಬಂದಾಗ ಅದರಲ್ಲಿ ಖುಷಿ ಪಟ್ಟು ಅದು ನನಗೇ ಯಾಕೆ ಎಂದು ಕೇಳಲಿಲ್ಲವೋ ಕಷ್ಟ ಬಂದಾಗ ನಾನು ಯಾಕೆ ಕೇಳಬೇಕು? ಜೀವನದಲ್ಲಿ ಕಷ್ಟ-ಸುಖ ಎರಡನ್ನೂ ಸಮವಾಗಿ ತೆಗೆದುಕೊಳ್ಳಬೇಕು’ ಎಂದರಂತೆ.

ಅಪ್ರಾಮಾಣಿಕರನ್ನು ದೂರವಿಡಿ: ನಿಮ್ಮ ಸುತ್ತಮುತ್ತ ಪ್ರಾಮಾಣಿಕರನ್ನು ಇಟ್ಟುಕೊಳ್ಳಿ. ಒಬ್ಬ ಗನ್ ಹಿಡಿದು ತಿರುಗುತ್ತಿದ್ದವನನ್ನು ನೋಡಿ ಇನ್ನೊಬ್ಬ ಕೇಳುತ್ತಾನೆ- ‘ಯಾವಾಗ್ಲೂ ಗನ್ ಯಾಕಯ್ಯಾ ಹಿಡ್ಕೊಂಡಿರ್ತಿಯಾ? ನಿನ್ನ ಸುತ್ತಮುತ್ತಲಿನ ಜನ ಪ್ರಾಮಾಣಿಕರಲ್ವಾ?’ ಅಂತ. ಅದಕ್ಕೆ ಆತ ‘ಅವರನ್ನು ಪ್ರಾಮಾಣಿಕರಾಗಿ ಇಡಲು ಗನ್ ಹಿಡ್ಕೊಂಡು ಇರುತ್ತೇನೆ’ ಅಂತ ಉತ್ತರಿಸಿದ. ಗನ್ ಹಿಡಿದರೆ ಮಾತ್ರ ಪ್ರಾಮಾಣಿಕರಾಗುವ ಜನರನ್ನು ಹತ್ತಿರ ಇಟ್ಕೋಬೇಡಿ. ಯಾವುದೋ ಕಾರಣಕ್ಕೆ ನೀವು ಗನ್ ಮರೆತಾಗ ಅವರು ಅಪ್ರಾಮಾಣಿಕರಾಗುತ್ತಾರೆ.

ಯಾವುದೇ ಸಂದರ್ಭ ಬಂದರೂ ಸುಳ್ಳು ಹೇಳಬೇಡಿ. ಅದು ನಿಮ್ಮ ಮೇಲೆ ಇನ್ನೊಬ್ಬರು ಇಟ್ಟಿರುವ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಮೊನ್ನೆ ಒಂದು ಘಟನೆ ನಡೆಯಿತು. ನನ್ನ ಆಫೀಸಿಗೆ ಹೊಸದಾಗಿ ಒಬ್ಬ ಹುಡುಗ ಸಹಾಯಕನಾಗಿ ಸೇರಿಕೊಂಡಿದ್ದಾನೆ. ಯಾವುದೋ ಒಂದು ಪ್ರಿಂಟಿಂಗ್​ನ ಕೆಲಸ ತುರ್ತಾಗಿ ಮುಗಿಯಬೇಕಾಗಿತ್ತು. ಎರಡು ದಿನ ಕಳೆದರೂ ಆ ಕೆಲಸವಾಗಿಲ್ಲವೆಂದು ಮ್ಯಾನೇಜರನ್ನು ಗದರಿಸಿದೆ. ಆಗ ಅವರು ಹಿಂದಿನ ದಿನವೇ ಅದನ್ನು ಮಾಡಿಸಿ ನನಗೆ ತೋರಿಸಬೇಕೆಂದು ಸಹಾಯಕನಿಗೆ ಹೇಳಿ ಹೋಗಿದ್ದರಂತೆ. ಆಗ ಸಹಾಯಕ ‘ಸರ್, ನೀವು ನಿನ್ನೆನೇ ಆ ಶೀಟನ್ನು ನೋಡಿ ಪ್ರಿಂಟಿಂಗ್ ಚೆನ್ನಾಗಿದೆ ಅಂತ ಕೂಡ ಹೇಳಿದ್ರಿ’ ಅಂತ ಅಂದ. ನನಗೆ ಅದು ಸ್ವಲ್ಪವೂ ನೆನಪಿಲ್ಲ. ನನ್ನ ನೆನಪಿನ ಶಕ್ತಿ ಇಷ್ಟೊಂದು ಖರಾಬ್ ಆಗಿದೆಯಾ ಅನ್ನೋ ಚಿಂತೆಯಿಂದ ಮನೋವೈದ್ಯೆಯಾದ ನನ್ನ ಮಗಳಿಗೆ ಫೋನ್ ಮಾಡಿದೆ. ಆಕೆ ‘ನಿಮ್ಮ ನೆನಪಿನ ಶಕ್ತಿ ಚೆನ್ನಾಗಿಯೇ ಇದೆ. ಆದರೆ ಆ ಹುಡುಗ ಆ ಶೀಟನ್ನು ನಿಮಗೆ ತೋರಿಸಲು ಮರೆತು ಬಿಟ್ಟಿರಬೇಕು, ನೀವು ಎಲ್ಲಿ ಬೈಯುತ್ತೀರೋ ಅಂತ ಹೆದರಿ ಸುಳ್ಳು ಹೇಳಿರಬಹುದು’ ಅಂತ ನನ್ನನ್ನು ಸಮಾಧಾನ ಮಾಡಿದಳು. ಈಗ ನನಗೆ ಆ ಹುಡುಗನ ಮೇಲಿನ ವಿಶ್ವಾಸವೇ ಕಡಿಮೆಯಾಗಿದೆ. ನಿಮಗೊಪ್ಪಿಸಿದ ಜವಾಬ್ದಾರಿಯ ಯಾವುದೇ ಕೆಲಸದ ಬಗ್ಗೆ ಸುಳ್ಳು ಹೇಳಬೇಡಿ. ಒಂದು ವೇಳೆ ನೀವು ಮರೆತಿದ್ದರೆ ಪ್ರಾಮಾಣಿಕವಾಗಿ ತಪ್ಪನ್ನು ಒಪ್ಪಿಕೊಳ್ಳಿ ಹಾಗೂ ಮುಂದೆ ಮರೆಯದಂತೆ ಮೊಬೈಲಿನ ನೋಟ್ಸ್ ನಲ್ಲಿ ಬರೆದು ಆಗಾಗ ನೋಡುತ್ತ ಇರಿ.

ಉಪಯುಕ್ತ ಸಲಹೆಗಳು: ನಿಮಗೆ ಯಾವುದಾದರೂ ವಸ್ತುವಿನ ಸ್ಯಾಂಪಲ್ ಬೇಕಾಗಿದ್ದಲ್ಲಿ ವ್ಯಾಪಾರಿಗಳಲ್ಲಿ ಅದು ಇಲ್ಲದಿದ್ದಲ್ಲಿ ಪ್ರಾಡಕ್ಟ್​ಗೆ ಸಂಬಂಧಪಟ್ಟ ಪೂರ್ತಿ ವಿವರಗಳನ್ನು ಸಂಗ್ರಹಿಸಿ. ಸಾಧ್ಯವಾದರೆ ಅವರಲ್ಲಿರುವ ಸ್ಯಾಂಪಲ್​ಗಳ ಫೋಟೋ, ವಿಡಿಯೋಗಳನ್ನು ತೆಗೆದು ತನ್ನಿ. ಯಾರಾದರೂ ನಿಮಗೆ ಯಾವುದೇ ವಸ್ತುವಿನ ಸ್ಯಾಂಪಲ್ ಕೊಟ್ಟಲ್ಲಿ ಅದನ್ನು ತುಂಬ ಜಾಗರೂಕತೆಯಿಂದ ಇಟ್ಟುಕೊಳ್ಳಿ. ಕಳೆದು ಹಾಕಿದಲ್ಲಿ ಆರ್ಡರನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಮ್ಮೆ ನಾನು ಅಮೆರಿಕದಲ್ಲಿ ಒಂದು ದೊಡ್ಡ ಸಂಸ್ಥೆಯ ಜತೆ ದೊಡ್ದ ವಹಿವಾಟಿನ ಮಾತುಕತೆ ಮುಗಿಸಿ ಸರಬರಾಜು ಮಾಡಬೇಕಾಗಿದ್ದ ಐಟಂನ ಸ್ಯಾಂಪಲನ್ನು ಅವರಿಂದ ತೆಗೆದುಕೊಂಡೆ. ಅದನ್ನು ಕೊಡಬೇಕಾದರೆ ‘ಇದೊಂದೇ ಸ್ಯಾಂಪಲ್ ಇರೋದು, ಕಳೆಯಬೇಡಿ’ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದರು. ನಾನು, ‘ನೀವೇನೂ ಯೋಚನೆ ಮಾಡಬೇಡಿ’ ಅಂತ ಹೊರಟು ನ್ಯೂರ್ಯಾನಲ್ಲಿ ಟ್ರೖೆನ್ ಹತ್ತಿದೆ. ಜತೆಗೆ ನನ್ನ ಅಕ್ಕನ ಮಗ ಕಿರಣನೂ ಇದ್ದ. ಇಬ್ಬರೂ ಪರಿವೆ ಇಲ್ಲದೆ ಇಳಿಯಬೇಕಾದ ಸ್ಟೇಷನ್ ಬಂದರೂ ಮಾತಾಡುತ್ತಲೇ ಇದ್ದೆವು. ಕೊನೆ ಗಳಿಗೆಯಲ್ಲಿ ಸ್ಟೇಷನ್ ಬೋರ್ಡನ್ನು ಕಂಡು ಇಬ್ಬರೂ ಗಡಿಬಿಡಿಯಿಂದ ಇಳಿದುಬಿಟ್ಟೆವು. ಮಾತಾಡುತ್ತ ಬರಬೇಕಾದರೆ ಸ್ಯಾಂಪಲ್ ಬಾಕ್ಸನ್ನು ಸೀಟಿನ ಮೇಲೆ ಇಟ್ಟಿದ್ದು ನೆನಪಾಯಿತು. ಆದರೆ ರೈಲು ಹೋಗಿತ್ತು. ಸ್ಯಾಂಪಲ್ ಕಳೆದು ಹೋಯಿತು. ಆರ್ಡರ್ ಕೈಬಿಟ್ಟಿತು. ನನ್ನ ಅವರ ಸಂಪರ್ಕವೇ ಕಡಿದು ಹೋಯಿತು. ಅದಕ್ಕೇ ನಮ್ಮ ಅಪ್ಪ ಹೇಳುತ್ತಿದ್ದರು ‘ಸಾಮಾನು ಮೈಮೇಲೇ ಇರಬೇಕು’ ಅಂತ. ಅಂದರೆ ಅತ್ಯವಶ್ಯಕವಾಗಿ ಕಾಪಾಡಿಕೊಳ್ಳಬೇಕಾದ ವಸ್ತುಗಳನ್ನು ಎಲ್ಲೆಂದರಲ್ಲಿ ಇಡಬಾರದು. ಅದಕ್ಕಾಗಿಯೇ ನಾನು ಯಾವಾಗಲೂ ಸೊಂಟದ ಚೀಲವನ್ನು (waist pouch) ಕಟ್ಟಿಕೊಳ್ಳುವುದು. ಅದರಲ್ಲಿ ನನಗೆ ಬೇಕಾದ ಮನೆ, ಆಫೀಸ್ ಬೀಗದ ಕೈಗಳು, ಮೊಬೈಲು, ಚಾರ್ಜರು, ಪೆನ್ನು, ಚಿಲ್ಲರೆ ಹಣ, ಕ್ರೆಡಿಟ್ ಕಾರ್ಡ, ಸ್ಕೇಲು, ಮಾತ್ರೆಗಳು, ಚೆಕ್ ಹಾಳೆ ಮುಂತಾದವುಗಳನ್ನು ಇಟ್ಟುಕೊಂಡಿರುತ್ತೇನೆ.

ಜೋಕು: ತಾಜ್ ಮಹಲನ್ನು ನೋಡುತ್ತಿದ್ದ ಸೋಮುಗೆ ಗೈಡ್ ಹೇಳಿದ- ‘ಸರ್, ಈ ತಾಜ್ ಮಹಲನ್ನು ಕಟ್ಟಿ ನೂರಾರು ವರ್ಷಗಳಾದವು. ಒಮ್ಮೆಯೂ ಇದಕ್ಕೆ ರಿಪೇರಿಯಾಗಲಿ, ಸುಣ್ಣ ಬಣ್ಣವಾಗಲಿ ಮಾಡೇ ಇಲ್ಲ.’ ಆಗ ಸೋಮು ಅಂದ- ‘ಗೊತ್ತಾಯ್ತು ಬಿಡಿ, ನಾನು ಬಾಡಿಗೆಗಿರುವ ಮನೆಯ ಯಜಮಾನನೇ ಇದಕ್ಕೂ ಓನರ್ ಅನ್ಸುತ್ತೆ.’

(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net