ಹಣ-ಝಣ-ಮನ ಅಂಕಣ| ಬರೋದನ್ನ ತಕ್ಷಣ ತೊಗೊಳಿ, ಕೊಡೊದನ್ನಾ ನಿಧಾನವಾಗಿ ಕೊಡಿ...

Money
Published on
ಯಾವುದಾದರೂ ಹಣ ನಿಮಗೆ ಬರುವುದಿದ್ದರೆ ಬೇಗನೆ ತೆಗೆದುಕೊಳ್ಳಿ. ನೀವು ಕೊಡುವುದಿದ್ದರೆ ನಿಧಾನವಾಗಿ ಕೊಡಿ. ತುಂಬ ಸಲ ನಾವು ನಮಗೆ ಹಣ ಕೊಡಬೇಕಾಗಿರುವವರು ‘ನಿಮ್ಮ ಹಣ ಕೊಡ್ಲಾ?’ ಅಂದ್ರೆ ‘ಪರವಾಗಿಲ್ಲ, ನಿಧಾನವಾಗಿ ಕೊಡಿ’ ಎನ್ನುತ್ತೇವೆ. ಇದರಿಂದ ನಷ್ಟವೇ ಜಾಸ್ತಿ.

ನಿಧಾನವಾಗಿ ರಿಟೈರ್ ಆಗುವ ಉದ್ದೇಶದಿಂದ, ಮ್ಯಾಜಿಕ್ ಐಟಮ್ಳನ್ನು ಮಾಡುವ ಐವತ್ತು ಲಕ್ಷ ಬೆಲೆ ಬಾಳುವ ಹಳೆಯ ಮೋಲ್ಡ್​ಗಳನ್ನು ಪರಿಚಯಸ್ಥ ಮ್ಯಾಜಿಕ್ ವ್ಯಾಪಾರಿ ‘ರಾಮು’ಗೆ ತೂಕದ ಲೆಕ್ಕದಲ್ಲಿ ಆರು ಲಕ್ಷ ರೂಪಾಯಿಗಳಿಗೆ ಮಾರಿದೆ. ಐದು ಲಕ್ಷ ಸಂದಾಯ ಮಾಡಿ, ಉಳಿದ ಒಂದು ಲಕ್ಷವನ್ನು ಬ್ಯಾಂಕ್​ಅಕೌಂಟಿಗೆ ಹಾಕುತ್ತೇನೆ ಅಂದಿದ್ದಕ್ಕೆ ‘ನಿಧಾನವಾಗಿ ಕೊಡು, ಪರವಾಗಿಲ್ಲ’ ಎಂದೆ. ಕೆಲವು ತಿಂಗಳ ನಂತರ ದುಡ್ಡಿಗಾಗಿ ಫೋನ್ ಮಾಡಿದರೆ ಉತ್ತರವಿಲ್ಲ. ಸತತ ಪ್ರಯತ್ನದ ನಂತರ ಕೇಳಿದಾಗ ‘ನಿಮ್ಮ ಮೋಲ್ಡ್​ಗಳ ರಿಪೇರಿಗೆ ತುಂಬ ಖರ್ಚು ಮಾಡಿದ್ದೇನೆ’ ಅಂತ ಹೇಳಿ ಫೋನ್ ಇಟ್ಟ. ಒಂದು ವೇಳೆ ಆಗಲೇ ನಾನು ಪೂರ್ತಿ ದುಡ್ಡು ತೆಗೆದುಕೊಂಡಿದ್ದರೆ ಅವನು ಕಂಪ್ಲೇಂಟ್ ಮಾಡುತ್ತಿರಲಿಲ್ಲ. ನಾನು ಮಾರಿದ್ದು ಕಬ್ಬಿಣದ ಲೆಕ್ಕದಲ್ಲಿಯೇ ಹೊರತು ಮೋಲ್ಡ್ ಲೆಕ್ಕದಲ್ಲಿ ಅಲ್ಲ. ಆದ್ದರಿಂದ ಅವನು ‘ಮೋಲ್ಡ್ ಸರಿ ಇಲ್ಲ’ ಎನ್ನುವ ಹಾಗಿಲ್ಲ. ಆದರೆ ಇದನ್ನೆಲ್ಲ ಯಾರ ಬಳಿ ಹೇಳಿಕೊಳ್ಳಬೇಕು? ಕೇಳಲು ಅವನು ಸಿದ್ಧನಿಲ್ಲ. ಯಾಕೆಂದರೆ, ದುಡ್ಡು ಅವನ ಬಳಿ ಸಿಕ್ಕಿ ಹಾಕಿಕೊಂಡಿದೆ (The ball was in his court). ಹೀಗೆ ನೀವೆಲ್ಲಾದರೂ ಸಾಲ ಕೊಟ್ಟಿರೋ ‘ಕೊಟ್ಟವ ಕೋಡಂಗಿ, ಇಸಕೊಂಡವ ಈರಭದ್ರ’ ಗಾದೆ ಥರಾ ನಿಮಗೆ ಕೆಲವರು ನಾಮ ಹಾಕುವ ಸಾಧ್ಯತೆ ಇದೆ.

ಹಾಗೇನೇ ನೀವು ಯಾರಿಗಾದರೂ ದುಡ್ಡು ಕೊಡುವುದಿದ್ದರೆ ನಿಧಾನವಾಗಿ ಕೊಡಿ. ಉದಾಹರಣೆಗೆ, ಜಿಮ್ ಸ್ವಿಮ್ಮಿಂಗ್, ಡ್ಯಾನ್ಸ್ ಕ್ಲಾಸ್ ನಡೆಸುವವರು ಒಂದು ವರ್ಷದ ಫೀಸನ್ನು ಮೊದಲೇ ವಸೂಲು ಮಾಡುತ್ತಾರೆ. ಯಾಕೆಂದರೆ ಕೆಲವು ಆರಂಭಶೂರರು ಸೇರಿದ ಒಂದೆರಡು ದಿನದಲ್ಲೇ ಜಿಮ್ ಮಾಡಿದ್ರೆ ಮೈಕೈ ನೋವು, ನೀರಿಗಿಳಿದ್ರೆ ನೆಗಡಿ, ಡ್ಯಾನ್ಸ್ ಮಾಡಿದ್ರೆ ಕಾಲುನೋವು ಅಂತ ಹೋಗೋದನ್ನೇ ನಿಲ್ಲಿಸುತ್ತಾರೆ. ಆದ್ದರಿಂದ monthly fees ತೆಗೆದುಕೊಳ್ಳುವ ಕಡೆಯೇ ಸೇರಿ. ಯಾಕೆಂದರೆ ಹೋಗದಿದ್ದರೂ ಅಷ್ಟೇನೂ ನಷ್ಟವಿಲ್ಲ.

ಮನೆ ಬೇಕಾ, ಮನೆ? ಸ್ವಂತದ್ದು!: ‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಎಂಬ ಗಾದೆಮಾತು ಮನೆ ಕಟ್ಟಿಸಲು ಅಥವಾ ಕೊಳ್ಳಲು ಹೊರಟಿರುವ ಸಾಮಾನ್ಯವರ್ಗದ ಜನರ ಕುರಿತಾಗಿಯೇ ಹುಟ್ಟಿಕೊಂಡಿದ್ದು. ಸಾಯೋದ್ರೊಳಗೆ ಸ್ವಂತ ಮನೆ ಮಾಡಬೇಕೆನ್ನುವ ಆಸೆ ಇರುವುದು ಸಹಜ. ಆದರೆ ಸಾಕಷ್ಟು ದುಡ್ಡು ಇಲ್ಲದಿರುವವರು ಮನೆ ಕಟ್ಟಿಸಲು ಹೊರಟರೆ ಗಾಣಕ್ಕೆ ಕೈ ಕೊಟ್ಟಂತೆ. ನಂತರ ಪಡಬಾರದ ಪಾಡು ಅವರದಾಗುತ್ತದೆ. ನೌಕರಿಯಲ್ಲಿದ್ದ ಕೆಲವರು ನಿವೃತ್ತಿಯ ನಂತರ ಬರುವ ಪಿಎಫ್, ಗ್ರಾಚ್ಯುಟಿ ದುಡ್ಡಿನ ಆಧಾರದ ಮೇಲೆ ಬಜೆಟ್ ಸಿದ್ಧಪಡಿಸುತ್ತಾರೆ. ಈಗ ಪ್ರಶ್ನೆ ಕಾಂಟ್ರಾಕ್ಟ್ ಕೊಡೋದಾ? ಅಥವಾ ನೀವೇ ನಿಂತು ಕಟ್ಟಿಸೋದಾ?

ಕಾಂಟ್ರಾಕ್ಟ್ ಕೊಟ್ಟರೆ ಶುರುವಿನಲ್ಲಿ ಆಕರ್ಷಣೀಯ ಕೊಟೇಶನ್ ಕೊಟ್ಟು ಕೆಲಸ ಶುರುವಾದ ನಂತರ ‘ಸರ್, ಎರಡಡಿ ನಾಲ್ಕಡಿ ಕಿಟಿಕಿ ಹಳೆ ಸ್ಟೈಲ್, ಈಗ ಎಲ್ರೂ ನಾಲ್ಕಡಿ ಆರಡಿ ಇಡ್ಸೋದು?’ ಅಂತಾನೋ, ‘ವೆಟ್ರಿಫೈಡ್ ಟೈಲ್ಸ್​ಗಿಂತ, ಗ್ರಾನೈಟನ್ನೇ ಹಾಕ್ಸಿ, ನೂರುವರ್ಷದವರೆಗೂ ನೆಲ ಲಕಲಕಾಂತ ಹೊಳೀತಾ ಇರುತ್ತೆ’ ಅಂತಾನೋ, ‘ಮಾಮೂಲು ಡಿಸ್ಟೆಂಪರ್ ಕೊಡ್ಸಿದ್ರೆ ಪ್ರತಿವರ್ಷ ಪೈಂಟಿಂಗ್ ಮಾಡಿಸ್ಬೇಕಾಗುತ್ತೆ, ಅದಕ್ಕೆ ಎನಾಮಲ್ ಹೊಡ್ಸಿದ್ರೆ ಐದು ವರ್ಷ ಬರಿ ವಾಶ್ ಮಾಡಿದ್ರೆ ಸಾಕು’ ಅಂತಾನೋ, ‘ಲೈಫಲ್ಲಿ ಒಂದೇ ಸಲ ತಾನೆ ಮನೆ ಕಟ್ಟೋದು, ಅದನ್ನು ಚೆನ್ನಾಗಿಯೇ ಕಟ್ಟಿಬಿಡಿ’ ಅಂತಾನೋ ಸಲಹೆ ಕೊಡ್ತಾನೆ. ಅವನ ಮಾತಿಗೆ ಮರುಳಾಗಿ ನೀವು ಒಪ್ಪಿದರೆ ಕೊಟ್ಟ ಕೊಟೇಶನ್ನಿಗೂ ಆದ ಖರ್ಚಿಗೂ ಅಜಗಜಾಂತರ. ಇಂಟೀರಿಯರ್ ಖರ್ಚಂತೂ ಇವೆಲ್ಲಕ್ಕಿಂತ ಹೆಚ್ಚು. ಕೆಲಸ ನಿಲ್ಲಿಸುವಂತಿಲ್ಲ, ಮರ್ಯಾದೆ ಪ್ರಶ್ನೆ. ಬ್ಯಾಂಕ್​ಸಾಲ, ಸ್ನೇಹಿತರ ಹತ್ತಿರ ಕೈಸಾಲ, ಲೇವಾದೇವಿದಾರರಿಂದ ಅಧಿಕ ಬಡ್ಡಿಯ ಸಾಲ ತೆಗೆದುಕೊಂಡು ಅಥವಾ ಇರುವ ಒಡವೆಗಳನ್ನು ಮಾರಿ ಮನೆ ಪೂರ್ಣಗೊಳಿಸಬೇಕು. ಇದರ ನಡುವೆ ಕಾಂಟ್ರಾಕ್ಟರ್ ಕಳಪೆ ಸಾಮಾನುಗಳನ್ನು ಹಾಕಿ ಹೆಚ್ಚು ಲಾಭವನ್ನೂ ಮಾಡಿಕೊಂಡಿರುತ್ತಾರೆ ಎಂಬ ದುಃಖ ಬೇರೆ ಕಾಡುತ್ತದೆ.

ನೀವು ಎಲ್ಲ ಸಾಮಾನುಗಳನ್ನು ತಂದು ಮೇಸ್ತ್ರಿಗಳ ಮೂಲಕ ದಿನಗೂಲಿ ಕೊಟ್ಟು ಮನೆ ಕಟ್ಟಿಸಿದರೆ ಖರ್ಚು ಕಮ್ಮಿ ಎಂದುಕೊಂಡರೆ, ಆತ ಮೂರು ತಿಂಗಳಲ್ಲಿ ಮುಗಿಯಬೇಕಾದ ಕೆಲಸಕ್ಕೆ ಆರು ತಿಂಗಳು ತೆಗೆದುಕೊಳ್ಳೋದಲ್ದೆ, ಕಾಂಟ್ರಾಕ್ಟ್ ಕೊಡದೆ ಉಳಿಸಿದ ಹಣವೆಲ್ಲ ಬರೀ ಕೂಲಿಗೆ ಸುರಿಯಬೇಕಾಗುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಸಿಮೆಂಟು, ಪೇಯಿಂಟ್ ತರಿಸಿ ವೇಸ್ಟ್ ಮಾಡಿ ಕಾಂಟ್ರಾಕ್ಟಿಗಿಂತ ಹೆಚ್ಚಿನ ದುಡ್ಡು ಪೀಕುತ್ತಾರೆ.

ಆದ ಸಾಲ ತೀರಿಸೋದ್ರಲ್ಲಿ ಬಿಪಿ, ಶುಗರ್ ಅಟ್ಕಾಯಿಸಿರುತ್ತವೆ. ತಿಂಗಳಲ್ಲಿ ಒಂದೆರಡು ಬಾರಿ ಮನೆಮಂದಿಯನ್ನು ಕರೆದುಕೊಂಡು ಹೋಟೆಲ್, ಸಿನಿಮಾ ಅಂತ ಖುಷಿ ಪಡುತ್ತಿದ್ದುದು, ವರ್ಷಕ್ಕೊಮ್ಮೆ ಪ್ರವಾಸ ಹೋಗುತ್ತಿದ್ದುದು ರದ್ದಾಗುತ್ತದೆ. ಇದರಿಂದ ಹೆಂಡತಿ, ಮಕ್ಕಳ ತೀವ್ರ ಅಸಮಾಧಾನಕ್ಕೂ ಗುರಿಯಾಗಬೇಕಾದೀತು.

ಈ ಯಾವ ತಲೆನೋವುಗಳೂ ಬೇಡ, ಫ್ಲಾಟ್ ತೆಗೆದುಕೊಳ್ಳೋಣವೆಂದು ಹೊರಟರೆ ಕೆಲವು ಕಡೆ ಕಾಮಗಾರಿಯೇ ಕಳಪೆಯಾಗಿ, ಮೇಲಿನ ಮನೆಯ ಟಾಯ್ಲೆಟ್ ನೀರು ನಿಮ್ಮ ಮನೆಯೊಳಗೆ ಸೋರುವ ಸಾಧ್ಯತೆ ಇದೆ. ಕೆಲವು ಕಡೆ ಅಡಿಪಾಯವೇ ಕುಸಿದು, ಫ್ಲಾಟ್ ಒಂದು ಕಡೆಗೆ ವಾಲಿದ್ದನ್ನೂ ಕೇಳಿದ್ದೇವೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದು. ಇದನ್ನೆಲ್ಲ ಯಾರಲ್ಲಿ ದೂರಿಕೊಳ್ಳೋದು? ಅದರ ಮಾಲೀಕ ದುಡ್ದು ಮಾಡಿ ನಾಪತ್ತೆಯಾಗಿರುತ್ತಾನೆ. ಅಲ್ಲದೆ ಪ್ರತಿ ತಿಂಗಳು ತೆರಬೇಕಾದ ಮೈಂಟೆನೆನ್ಸ್ ಚಾರ್ಜು ಸಾಮಾನ್ಯ ಮನೆಬಾಡಿಗೆಯಷ್ಟೇ ಇರುತ್ತದೆ.

ಸ್ವಂತಮನೆಯನ್ನು ಹೊಂದಿ ನೆಮ್ಮದಿಯ ಜೀವನ ನಡೆಸಬೇಕಾದರೆ ಮುಂದಿನ ಜೀವನಕ್ಕೆ ಬಡ್ಡಿ ಬರುವಂತೆ ದುಡ್ಡನ್ನು ಹೂಡಿಕೆ ಮಾಡಿದ ನಂತರ ಸಾಕಷ್ಟು ಹಣ ಉಳಿದಿದ್ದು, ಯಾವ ಕಾರಣಕ್ಕೂ, ಯಾವ ಕಾಲಕ್ಕೂ ಆ ಹಣದ ಅಗತ್ಯ ಬರಲಾರದೆಂಬ ವಿಶ್ವಾಸ ಇದ್ದರೆ ಮಾತ್ರ ಮನೆ ಮಾಡಬೇಕು. ಒಂದು ಸಣ್ಣ ಲೆಕ್ಕ ಹೇಳುತ್ತೇನೆ ಕೇಳಿ: ನೀವು ಸಾಲ ಮಾಡಿ ಒಂದು ಕೋಟಿಯ ಮನೆ ಕಟ್ಟಿಸಿದಿರೆಂದಿಟ್ಟುಕೊಳ್ಳಿ. ನೀವು ಹದಿನೈದು ವರ್ಷದ ಅವಧಿಗೆ ಸಾಲ ತೆಗೆದುಕೊಂಡಿದ್ದೀರಾದರೆ ನೀವು ತೆರುವ ಬಡ್ಡಿಯೇ ಸುಮಾರು ಒಂದು ಕೋಟಿಗೆ ಹತ್ತಿರವಾಗುತ್ತದೆ! ಅಂದರೆ ಹದಿನೈದು ವರ್ಷಕ್ಕೆ ಅಸಲು ಮತ್ತು ಬಡ್ಡಿ ಸೇರಿ ನಿಮ್ಮ ಮನೆಗೆ ಸುಮಾರು ಎರಡು ಕೋಟಿಯಷ್ಟಾಯಿತು. ಈಗ ನಿಮ್ಮ ಮನೆ ಎಷ್ಟೊಂದು ಬೆಲೆಬಾಳುತ್ತದೆ ಎಂದು ಬೀಗಬಹುದಷ್ಟೇ, ಇದರಲ್ಲಿರುವ ದುಡ್ಡು ಉಪಯೋಗಕ್ಕೆ ಬರುವುದಿಲ್ಲ. ಇದಕ್ಕೆ notional value ಅಂತಾರೆ. ಮಾರದಿದ್ರೆ ಉಪಯೋಗವಿಲ್ಲ. ಆದ್ದರಿಂದ ಇರುವ ದುಡ್ಡನ್ನು ಬ್ಯಾಂಕಿನಲ್ಲಿಟ್ಟು ಬರೋ ಬಡ್ಡಿಯಲ್ಲಿ ಬಾಡಿಗೆಮನೆಯಲ್ಲಿ ಇರೋದು ಉತ್ತಮ. ಈಗ ಕಡಿಮೆ ಬಾಡಿಗೆಗೆ ಒಳ್ಳೊಳ್ಳೆ ಮನೆಗಳು ಸಿಗುತ್ತವೆ. ಪ್ರತಿ ತಿಂಗಳೂ ಬಾಡಿಗೆ, ವಿದ್ಯುತ್, ನೀರಿನ ಬಿಲ್​ಗಳನ್ನು ಕೊಟ್ಟರಾಯಿತು. ಒಂದು ವೇಳೆ ಮನೆ ಹತ್ತಿರವೇ ಯಾವುದೋ ಕಾರಣಕ್ಕೆ ಶಬ್ದ, ವಾಯುಮಾಲಿನ್ಯವಾದಲ್ಲಿ ಅಥವಾ ಯಾವುದಾದರೂ ಕಾರಣಕ್ಕೆ ಮನೆ ಬಿಡಬೇಕಾದ ಪರಿಸ್ಥಿತಿ ಬಂದಲ್ಲಿ ಬದಲಾಯಿಸಲೂಬಹುದು.

ನಿರಾಳವಾಗಿ ಜೀವನ ನಡೆಸುವುದು ಒಳ್ಳೆಯದಲ್ಲವೇ? ಇಷ್ಟನ್ನು ತಿಳಿಹೇಳಿದ ಮೇಲೂ ಸ್ವಂತ ಮನೆ ಬೇಕಾ, ಬಾಡಿಗೆ ಮನೆ ಸಾಕಾ ಎಂದು ನೀವೇ ನಿರ್ಧರಿಸಿ.

ಜೋಕು: ನಾನು ಹೋಟೆಲಿನ ಟೆಲಿಫೋನ್ ಆಪರೇಟರ್​ಗೆ, ರಾಮುಗೆ ಕನೆಕ್ಟ್ ಮಾಡೋಕ್ಕೆ ಹೇಳಿದೆ.

‘ಹೆಂಗಿದ್ದೀಯಪ್ಪ ರಾಮು?’

‘ಆರಾಮಾಗಿದ್ದೀನಿ ಸರ್’

‘ಅಲ್ಲಯ್ಯಾ, ನನ್ನ ಒಂದು ಲಕ್ಷ ರೂಪಾಯಿ ಯಾವಾಗ ಕೊಡ್ತೀಯಪ್ಪಾ?’ ಎಂದೊಡನೆ,

‘ಹಲೋ.. ಏನೂ ಕೇಳಿಸ್ತಾ ಇಲ್ಲಾ ಜೋರಾಗಿ ಹೇಳಿ’

‘ಅದೇಪ್ಪಾ... ನನ್ನ ದುಡ್ಡು ಯಾವಾಗ ವಾಪಸ್ ಕೊಡ್ತೀಯೋ?’

‘ಹಲೋ ಏನೂ ಕೇಳಿಸ್ತಾನೇ ಇಲ್ಲಾ’

ನಮ್ಮ ಮಾತನ್ನು ಕೇಳುತ್ತಿದ್ದ ಆಪರೇಟರ್ ಅಚ್ಚರಿಪಡುತ್ತ ರಾಮುಗೆ,

‘ಯಾಕ್ ಸರ್ ಸರಿಯಾಗಿ ಕೇಳಸ್ತಾಯಿದೆಯಲ್ಲಾ’

‘ಹೌದಾ, ನಂಗೆ ಕೇಳಸ್ತಾ ಇಲ್ಲಾ. ನಿಂಗೆ ಕೇಳಸ್ತಾಯಿದ್ರೆ ನೀನೇ ಅವನಿಗೆ ಲಕ್ಷ ಕೊಟ್ಕೋ’ ಎಂದು ಫೋನಿಟ್ಟ.

(ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net