

ದಾವೋಸ್: ಭಾರತದ ಅರ್ಥವ್ಯವಸ್ಥೆಯಲ್ಲಿ ಆಗಿರುವ ಬೆಳವಣಿಗೆ ಹಿಂಜರಿತ ತಾತ್ಕಾಲಿಕವಷ್ಟೆ. ಶೀಘ್ರವೇ ಬೆಳವಣಿಗೆಯಲ್ಲಿ ಚೇತರಿಕೆ ಕಂಡುಬರಲಿದ್ದು, ಉತ್ತಮ ಬೆಳವಣಿಗೆ ದಾಖಲಾಗಲಿದೆ ಎಂದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜೋರ್ಜಿವಾ ಆಶಾವಾದ ವ್ಯಕ್ತಪಡಿಸಿದ್ದಾರೆ.
ಅವರು ಶುಕ್ರವಾರ ದಾವೋಸ್ನಲ್ಲಿ ವರ್ಲ್ಡ್ ಇಕನಾಮಿಕ್ ಫೋರಂ 2020 ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದರು. 2019ರ ಅಕ್ಟೋಬರ್ನಲ್ಲಿ ವರ್ಲ್ಡ್ ಇಕನಾಮಿಕ್ ಔಟ್ಲುಕ್ ಅನ್ನು ಐಎಂಎಫ್ ಪ್ರಕಟಿಸಿದಾಗ ಇದ್ಧ ಸ್ಥಿತಿಗೂ 2020ರ ಜನವರಿಯಲ್ಲಿ ಇರುವ ಜಗತ್ತಿನ ಸ್ಥಿತಿಗೂ ಬಹಳ ವ್ಯತ್ಯಾಸವಿದ್ದು, ಉತ್ತಮ ಬೆಳವಣಿಗೆ ದಾಖಲಾಗಿದೆ ಎಂದು ಅವರು ಹೇಳಿದರು.
ಅಮೆರಿಕ-ಚೀನಾ ನಡುವೆ ಇದ್ದ ಟ್ರೇಡ್ ಟೆನ್ಶನ್ ಕಡಿಮೆಯಾಗಿ ಡೀಲ್ ಕುದುರಿತು. ಅಲ್ಲದೆ ತೆರಿಗೆ ಕಡಿತ ಸೇರಿ ಹಲವು ಉಪಕ್ರಮಗಳು ಮತ್ತು ಇತರೆ ಬೆಳವಣಿಗೆಗಳು ಜಗತ್ತಿನ ಆರ್ಥಿಕ ಸ್ಥಿತಿಯನ್ನು ಸುಧಾರಿಸಿವೆ. ಆದಾಗ್ಯೂ, ಗ್ರೋತ್ ರೇಟ್ ಶೇಕಡ 3.3 ಇರುವಂಥದ್ದು ಹಿತಕರ ಎಂದೇನೂ ಅಲ್ಲ ಎಂದು ಅವರು ವಿವರಿಸಿದರು.
ಭಾರತದ ಮಾರುಕಟ್ಟೆ ಹಿಂಜರಿತದಲ್ಲಿದೆ. ಆದರೆ, ಅದು ತಾತ್ಕಾಲಿಕ ಎಂಬ ನಂಬಿಕೆ ನಮಗೆ ಇದೆ. ಬೆಳವಣಿಗೆಯ ವೇಗ ತೆಗೆದುಕೊಳ್ಳುವ ನಿಟ್ಟಿನಲ್ಲಿ ಅದು ಕಾಣಿಸಿಕೊಂಡಿದೆ ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ. ಇಂಡೋನೇಷ್ಯಾ, ವಿಯೆಟ್ನಾಂ ಕೂಡ ಉತ್ತಮ ಬೆಳವಣಿಗೆ ದಾಖಲಿಸಿವೆ. ಆಫ್ರಿಕನ್ ದೇಶಗಳೂ ಇದೇ ಹಾದಿಯಲ್ಲಿವೆ ಎಂದು ಅವರು ಹೇಳಿದರು. (ಏಜೆನ್ಸೀಸ್)