

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದ ಬಿಲ್ ಕೇಳಿ ಪಡೆದರೆ 10 ಲಕ್ಷ ರೂಪಾಯಿಯಿಂದ 1 ಕೋಟಿ ರೂಪಾಯಿ ತನಕ ಲಾಟರಿ ಗೆಲ್ಲುವ ಅವಕಾಶ ಶೀಘ್ರವೇ ತೆರಿಗೆ ಪಾವತಿದಾರ ಗ್ರಾಹಕರಿಗೆ ಲಭ್ಯವಾಗಲಿದೆ.
ಕೇಂದ್ರ ಸರ್ಕಾರ ಲಾಟರಿ ವ್ಯವಸ್ಥೆಯನ್ನು ಜಾರಿಗೆ ತರುವ ಚಿಂತನೆ ನಡೆಸಿದ್ದು, ಜಿಎಸ್ಟಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ಗ್ರಾಹಕರಿಗೆ ಉತ್ತೇಜನ ನೀಡುವ ಉದ್ದೇಶ ಈ ಯೋಜನೆಯಲ್ಲಿದೆ. ಸೆಂಟ್ರಲ್ ಬೋರ್ಡ್ ಆರ್ಫ್ ಇಂಡೈರೆಕ್ಟ್ ಟ್ಯಾಕ್ಸಸ್ ಆ್ಯಂಡ್ ಕಸ್ಸಮ್ಸ್ನ ಸದಸ್ಯ ಜಾನ್ ಜೋಸೆಫ್ ಈ ಬಗ್ಗೆ ಮಾಹಿತಿ ನೀಡಿದ್ದು, ಜಿಎಸ್ಟಿ ವ್ಯವಸ್ಥೆಯಲ್ಲಿ ಬರುವ ಪ್ರತಿಯೊಂದು ರಸೀದಿಗೂ ಲಾಟರಿ ಗೆಲ್ಲುವ ಅವಕಾಶ ಇದೆ. ತೆರಿಗೆ ಪಾವತಿದಾರರಿಗೆ ಇದು ಇನ್ಸೆಂಟಿವ್ ರೂಪದಲ್ಲಿ ಉತ್ತೇಜನ ನೀಡಲಿದೆ ಎಂದು ಅವರು ವಿವರಿಸಿದ್ದಾರೆ.
ಜಿಎಸ್ಟಿ ಪ್ರಕಾರ ನೀಡುವ ಪ್ರತಿಯೊಂದು ರಸೀದಿಯೂ ಒಂದು ಬಹುಮಾನ ಗೆಲ್ಲಬಲ್ಲ ಲಾಟರಿ ಟಿಕೆಟ್ ಆಗಿ ಪರಿವರ್ತನೆಯಾಗಬಹುದು. ನಿಶ್ಚಿತ ದಿನದಂದು ಈ ರಸೀದಿಗಳ ಲಕ್ಕಿ ಡ್ರಾ ನಡೆಯಲಿದ್ದು, ಬಹುಮಾನ ಗೆಲ್ಲಬಹುದಾಗಿದೆ. ಈ ಮೂಲಕ ಶೇಕಡ 28ರ ತನಕ ಉಳಿತಾಯವನ್ನೂ ಮಾಡಬಹುದು. ಇದಲ್ಲದೆ, ಒಂದು ಕೋಟಿ ರೂಪಾಯಿ ಅಥವಾ 10 ಲಕ್ಷ ರೂಪಾಯಿ ಗೆಲ್ಲುವ ಅವಕಾಶವೂ ಇರಲಿದೆ. ಇದು ಗ್ರಾಹಕ ನಡವಳಿಕೆ ಬದಲಾಯಿಸುವ ಪ್ರಯತ್ನವೂ ಹೌದು ಎಂದು ಅವರು ಹೇಳಿದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಜ್ಯಗಳ ವಿತ್ತ ಸಚಿವರನ್ನು ಒಳಗೊಂಡ ಜಿಎಸ್ಟಿ ಕೌನ್ಸಿಲ್ ಪ್ರಸ್ತಾವಿತ ಲಾಟರಿ ಸ್ಕೀಮ್ನ ರೂಪುರೇಷೆ ಸಿದ್ಧಪಡಿಸುತ್ತಿದೆ. ಲಾಟರಿಗೆ ಒಳಪಡುವ ರಸೀದಿಗಳಿಗೆ ಕನಿಷ್ಠ ಮೊತ್ತವನ್ನು ನಿಗದಿ ಪಡಿಸಲಾಗುತ್ತಿದ್ದು, ಲಾಟರಿಗೆ ಬೇಕಾದ ಬಹುಮಾನದ ಹಣವನ್ನು ಗ್ರಾಹಕ ಕಲ್ಯಾಣ ನಿಧಿಯಿಂದ ಬಳಸಲು ಸಮಿತಿ ತೀರ್ಮಾನಿಸಿದೆ. (ಏಜೆನ್ಸೀಸ್)