

ನವದೆಹಲಿ: ಲಕ್ಷ್ಮೀ ವಿಲಾಸ ಬ್ಯಾಂಕ್ ಮೇಲೆ ಸರ್ಕಾರ ಒಂದು ತಿಂಗಳ ಮಾರಟೋರಿಯಂ ವಿಧಿಸಿದ್ದು, ಠೇವಣಿದಾರರು ಡಿಸೆಂಬರ್ 16ರ ತನಕ 25,000 ರೂಪಾಯಿ ಮಿತಿಯಲ್ಲಿ ಹಣ ನಗದೀಕರಿಸಬಹುದು ಎಂದು ತಿಳಿಸಿದೆ.ಈ ಸಂಬಂಧ ಹಣಕಾಸು ಸಚಿವಾಲಯ ಎರಡು ಪುಟಗಳ ಆದೇಶವನ್ನು ಪ್ರಕಟಿಸಿದೆ.
ಇದರಂತೆ, ಲಕ್ಷ್ಮೀ ವಿಲಾಸ ಬ್ಯಾಂಕ್ ಇಂದು ಸಂಜೆ 6ರಿಂದ ಡಿಸೆಂಬರ್ 17ರ ತನಕ ಮಾರಟೋರಿಯಂ ವ್ಯಾಪ್ತಿಯಲ್ಲಿ ಇರಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆಯ ಸೆಕ್ಷನ್ 45ರ ಪ್ರಕಾರ ಮಾರಟೋರಿಯಂ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಸಾಲಗಾರರಿಗೆ ಬ್ಯಾಂಕ್ ಪಾವತಿ ಕೂಡ 25,000 ರೂಪಾಯಿ ಮಿತಿಯಲ್ಲೇ ಮಾಡಬೇಕಾಗಿದೆ. ಅಲ್ಲದೆ, ಠೇವಣಿದಾರರಿಗೂ ಈ ಮಿತಿ ಅನ್ವಯವಾಗಲಿದೆ.
ಶಿಕ್ಷಣ, ವೈದ್ಯಕೀಯ ವೆಚ್ಚ ಮುಂತಾದವುಗಳಿಗೆ ಈ ಮಿತಿ ಅನ್ವಯವಾಗುವುದಿಲ್ಲ. ಅಂತಹ ಸನ್ನಿವೇಶದಲ್ಲಿ ಠೇವಣಿದಾರರು 25,000 ರೂಪಾಯಿಗೂ ಅಧಿಕ ಹಣ ನಗದೀಕರಿಸುವುದಕ್ಕೆ ಅವಕಾಶವಿದೆ ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್)